ಸಂತೇಮರಹಳ್ಳಿ: ಸಮೀಪದ ದೇಶವಳ್ಳಿ ಗ್ರಾಮದ ಮಂಟೇಸ್ವಾಮಿ ದೇವಸ್ಥಾನದ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸೋಮವಾರ ಕಂಡಾಯ ಮೆರವಣಿಗೆ ನಡೆಸಲಾಯಿತು.
ದೇವಸ್ಥಾನಕ್ಕೆ ತಳಿರು ತೋರಣ ಕಟ್ಟಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಪೂಜಾ ಕಾರ್ಯಕ್ರಮ ನಡೆಸಲಾಯಿತು. ನಂತರ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
ನಂತರ ಗ್ರಾಮದ ಹೊರ ಭಾಗದಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ ಮಹಾ ಮಂಗಳಾರತಿ ನಡೆಸಲಾಯಿತು. ದೇವರ ಗುಡ್ಡರ ಜಾಗಟೆ ಹಾಗೂ ವಾದ್ಯ ಮೇಳಗಳೊಂದಿಗೆ ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಮನೆಗಳ ಮುಂಭಾಗ ಕಂಡಾಯಗಳಿಗೆ ಪೂಜೆ ಸಲ್ಲಿಸಿದರು. ಗ್ರಾಮದ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ ಮನೆಗಳ ಮುಂಭಾಗ ಚುಕ್ಕಿ ರಂಗೋಲಿ ಬಿಡಿಸಿ ಗ್ರಾಮಸ್ಥರು ಹಬ್ಬ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.