ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆಯಲ್ಲಿ ಹೆಚ್ಚಿದ ಕಳ್ಳತನ: ಪೊಲೀಸ್‌ ವೈಫಲ್ಯ?

ಮೂರು ತಿಂಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣ, ಸಾರ್ವಜನಿಕರ ಆರೋಪ
Last Updated 11 ಮೇ 2022, 16:19 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಪಟ್ಟಣದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕಳ್ಳತನಕ್ಕೆ ಕಡಿವಾಣ ಹಾಕಲು ಹಾಗೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, ಮೂರ್ನಾಲ್ಕು ತಿಂಗಳುಗಳಿಂದ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣ ವರದಿಯಾಗಿವೆ.

ಮನೆಗಳ್ಳತನ, ವಾಹನ ಕಳ್ಳತನ, ಅಂಗಡಿಗಳಲ್ಲಿ ಕಳ್ಳತನವಾಗುತ್ತಿದ್ದು ನಿವಾಸಿಗಳು ಮನೆ ಬಿಟ್ಟು ಹೋಗಲು ಹೆದರುತ್ತಿದ್ದಾರೆ. ಅಕ್ಕ ಪಕ್ಕದ ಹಳ್ಳಿಗಳಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ನಡೆದರೂ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಿದ್ದರೂ ಪೊಲೀಸ್ ಅಧಿಕಾರಿಗಳು ಯಾವ ಪ್ರಕರಣವನ್ನೂ ಭೇದಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಿಲು ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಆಭರಣ, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ.

ಪಟ್ಟಣದ ಮೂರನೇ ವಾರ್ಡ್‌ನ ನಿವಾಸಿ ಸಂದೀಪ್ ಕುಮಾರ್ ಮನೆಯಲ್ಲಿ ಬೀರು ಮುರಿದು ನಗನಾಣ್ಯ ದೋಚಿದ್ದಾರೆ. ಅಯ್ಯಂಗಾರ್‌ ಬೇಕರಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಚಿನ್ನದ ಸರ, ಉಂಗುರ ಹಾಗೂ ನಗದು ಕಳ್ಳತನವಾಗಿದೆ. ಅದೇ ಬೀದಿಯ ಇನ್ನೆರಡು ಮನೆಗಳಿಗೆ ಕನ್ನಹಾಕುವ ಪ್ರಯತ್ನ ವಿಫಲವಾಗಿದೆ.

ತೃಪ್ತಿ ಗುಡ್ಡಪ್ಪ ಹೋಟೆಲ್ ಪಕ್ಕದ ಪ್ರಾವಿಜನ್ ಸ್ಟೋರ್‌ನ ಚಾವಣಿ ತೆಗೆದು ಒಳಗೆ ಇಳಿದಿರುವ ಕಳ್ಳರು ಹಣ ದೋಚಿದ್ದಾರೆ.ಕೆನರಾ ಬ್ಯಾಂಕ್ ಕೆಳಗಿರುವ ಅಂಗಡಿಯಲ್ಲಿ ಬ್ಯಾಟರಿ ಕಳ್ಳತನವಾಗಿದೆ. ಅಶ್ವಿನಿ ಬಡಾವಣೆಯಲ್ಲಿ ಮೋಹನ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ‌. ಪುರಸಭೆ ಸದಸ್ಯ ಎನ್.ಕುಮಾರ್ ಸಹೋದರನ ಬೈಕ್ ಕದ್ದೊಯ್ದಿರುವ ಕಳ್ಳರು ಮರುದಿನ ಬೈಕ್ ಜಖಂಗೊಳಿಸಿ ಪಟ್ಟಣದ ಹೊರ ವಲಯದಲ್ಲಿ ಎಸೆದಿದ್ದಾರೆ.

‘ತಾಲ್ಲೂಕು ಕಚೇರಿ ಮುಂಭಾಗ ಕೆಲವು ವಾರಗಳ ಅವಧಿಯಲ್ಲಿ ನಾಲ್ಕೈದು ಬೈಕ್‌ಗಳ ಕಳ್ಳತನವಾಗಿದೆ. ಶ್ವೇತಾದ್ರಿಗಿರಿ ಕಲ್ಯಾಣ ಮಂಟಪದಲ್ಲಿಯೂ ಸ್ಕೂಟರ್ ಕಳವಾಗಿದೆ. ಹೀಗಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಇದರಿಂದಾಗಿ ಜನರಿಗೆ ಪೊಲೀಸರ ಮೇಲಿರುವ ವಿಶ್ವಾಸ ಮತ್ತು ನಂಬಿಕೆ ಕಡಿಮೆಯಾಗುತ್ತಿದೆ’ ಎಂದು ಪಟ್ಟಣದ ವಕೀಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳಿಲ್ಲ. ಇದರ ಜೊತೆಗೆ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿಲ್ಲ. ಇದರಿಂದ ಕಳ್ಳತನ ಹೆಚ್ಚಾಗುತ್ತಿದೆ. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಸಿಗುವಂತೆ ಮಾಡಬೇಕು. ಆಗ ಮಾತ್ರ ಇದಕ್ಕೆ ಕಡಿವಾಣ ಬೀಳುತ್ತದೆ’ ಎಂದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಮುದ್ದುರಾಜು ‘ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಆರೋಪಿಗಳು ಯಾರೂ ಸಿಕ್ಕಿಲ್ಲ. ಕೆಲ ದಿನದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ’ ಎಂದು ಹೇಳಿದರು.

‘ಇನ್ನೊಂದು ಠಾಣೆ ಬೇಕು’

‘ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆಯಾಗಲಿ, ಪೊಲೀಸ್ ಸಿಬ್ಬಂದಿ ಇಲ್ಲ. ಇದನ್ನು ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ಶಾಸಕರೂ ಮಾಡಿಲ್ಲ. ಇದು ಸರ್ಕಾರ ಮತ್ತು ಪೊಲೀಸರ ವೈಫಲ್ಯ. ಜನಸಂಖ್ಯೆಗೆ ಅನುಗುಣವಾಗಿ ಇನ್ನೊಂದು ಪೊಲೀಸ್ ಠಾಣೆ ಅವಶ್ಯಕತೆ ಇದೆ’ ಎಂದು ವಕೀಲ ಕಾಂತರಾಜು ಅಭಿಪ್ರಾಯಪಟ್ಟರು.

––

ಗುಂಡ್ಲುಪೇಟೆ, ಬೇಗೂರು ಠಾಣೆಗೆ ಹೊಸಬರು ಬಂದಿದ್ದಾರೆ. ಕಳ್ಳತನದ ಬಗ್ಗೆ ನಿಗಾ ವಹಿಸಲು ತಿಳಿಸಿದ್ದೇನೆ. ಶೀಘ್ರವಾಗಿ ಕಳ್ಳರನ್ನು ಹಿಡಿಯುತ್ತೇವೆ

–ಟಿ.ಪಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT