ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಸಾಂಬಾರಿನಲ್ಲಿ ಹಲ್ಲಿ ಬಿದ್ದು 30 ಮಕ್ಕಳು ಅಸ್ವಸ್ಥ

ಯಳಂದೂರು: ಕೆಸ್ತೂರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಉಂಡು ಹೊಟ್ಟೆನೋವು ಅನುಭವಿಸಿದ ಚಿಣ್ಣರು
Last Updated 29 ಜುಲೈ 2022, 14:27 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನ ಕೆಸ್ತೂರು ಗ್ರಾಮದ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ 30 ಮಕ್ಕಳು ಅಸ್ವಸ್ಥರಾದ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ಜೆಎಸ್ಎಸ್ ಅಕ್ಷರ ದಾಸೋಹ ಭವನದಿಂದ ಮಧ್ಯಾಹ್ನ 12.45ಕ್ಕೆ ಶಾಲೆಗೆ ಆಹಾರ ಪೂರೈಕೆಯಾಗಿತ್ತು. 1ರಿಂದ 4ನೇ ತರಗತಿಯ ಮಕ್ಕಳಿಗೆ ಅನ್ನ ಮತ್ತು ಸಾಂಬಾರು ಬಡಿಸಲಾಗಿತ್ತು. ನಂತರ ಎರಡನೇ ಡಬ್ಬಿಯಲ್ಲಿದ್ದ ಆಹಾರವನ್ನು 5ರಿಂದ 8ನೇ ತರಗತಿಯ ಮಕ್ಕಳಿಗೆ ಬಡಿಸಲು ಸಿದ್ಧತೆ ನಡೆಸಲಾಗಿತ್ತು.

ಮೊದಲು ಊಟ ಮಾಡಿದ್ದ ಮಕ್ಕಳು ಹೊಟ್ಟೆ ನೋವಿನಿಂದ ಕಿರುಚಾಡಲಾರಂಭಿಸಿದರು ಎನ್ನಲಾಗಿದೆ. ಈ ಸಮಯದಲ್ಲಿ ಆಹಾರ ಪೂರೈಕೆಯಾದ ತಟ್ಟೆಯನ್ನು ಪರಿಶೀಲಿಸಿದಾಗ ಸಾಂಬಾರಿನಲ್ಲಿ ಹಲ್ಲಿ ಬಿದ್ದಿರುವುದು ಕಂಡು ಬಂತು. ಈ ವಿಷಯ ಪೋಷಕರಿಗೆ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡು ಶಾಲೆಯ ಮುಂಭಾಗ ಜಮಾಯಿಸಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು.ತಕ್ಷಣ ಧಾವಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಎಲ್ಲ ಮಕ್ಕಳನ್ನು ಪಟ್ಟಣಕ್ಕೆ ಕರೆತರಲಾಯಿತು.

ಪೋಷಕರ ಆಕ್ರೋಶ:ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕೆ.ಬಿ.ಆನಂದಪ್ಪ ನಾಯಕ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ತಕ್ಷಣ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

'ಮಧ್ಯಾಹ್ನ ಪೂರೈಕೆಯಾದ ಆಹಾರ ಕಲುಷಿತವಾಗಿದ್ದರೂ ಅಕ್ಷರ ದಾಸೋಹ ಸಿಬ್ಬಂದಿ ಪರಿಶೀಲನೆ ನಡೆಸಲು ಮುಂದಾಗಿಲ್ಲ. ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ವಿಚಾರಿಸಲು ಅಧಿಕಾರಿಗಳು ಹಾಜರಾಗಿಲ್ಲ. ಪದೇ ಪದೇ ಬಿಸಿ ಊಟ ಪೂರೈಕೆಯಲ್ಲಿ ಇಂತಹ ಅವಘಡಗಳು ಕಂಡು ಬಂದರೂ ಯಾವುದೇ ಕ್ರಮ ವಹಿಸುವುದಿಲ್ಲ. ತಕ್ಷಣ ಜೆಎಸ್ಎಸ್ ಆಹಾರ ಪೂರೈಕೆಯ ನಿರ್ವಾಹಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು’ ಪೋಷಕರು ಪ್ರತಿಭಟನೆ ನಡೆಸಿದರು.

ಕ್ರಮವಹಿಸುವ ಭರವಸೆ:ತಹಶೀಲ್ದಾರ್ ಕೆ.ಬಿ.ಆನಂದಪ್ಪ ನಾಯಕ ಮಾತನಾಡಿ, ‘ಪ್ರತಿದಿನ ಆಹಾರ ನಿಗದಿತ ಅವಧಿಯೊಳಗೆ ಪೂರೈಸಲು ಕ್ರಮ ವಹಿಸಲಾಗುವುದು. ಆಹಾರ ತಯಾರಾಗುವ ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗುವುದು. ಪ್ರತಿದಿನ ಪೂರೈಕೆಯಾಗುವ ಆಹಾರ ಸ್ವಚ್ಛ ಮತ್ತು ರುಚಿ ಇರುವುದರ ಬಗ್ಗೆ ವರದಿ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.

ಹೆದ್ದಾರಿಯಲ್ಲಿ ಪೋಷಕರ ಪ್ರತಿಭಟನೆ

‘ಕೆಸ್ತೂರು ಗ್ರಾಮದಲ್ಲಿರುವ ಶಾಲೆಯಲ್ಲಿ ಎರಡನೇ ಬಾರಿಗೆ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಬಳಲಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ’ ಎಂದು ಪೋಷಕರಾದ ರತ್ನಮ್ಮ ಮತ್ತು ಶಾಂತಮ್ಮ ಅಳಲು ತೋಡಿಕೊಂಡರು.

ಇದೇ ವೇಳೆ ಗ್ರಾಮಸ್ಥರು ಆಸ್ಪತ್ರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಬಿಇಒ ಕೆ.ಕಾಂತರಾಜ್ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT