ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಜೋಡೊ ಪಾದಯಾತ್ರೆ; ಕಾರ್ಯಕರ್ತರ ಉತ್ಸಾಹ ಕುಗ್ಗಿಸದ ಬಿಸಿಲು

ಸಾಗರೋಪಾದಿಯಲ್ಲಿ ಗುಂಡ್ಲುಪೇಟೆಗೆ ಬಂದ ಜನಸಾಗರ
Last Updated 30 ಸೆಪ್ಟೆಂಬರ್ 2022, 22:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ತಾಲ್ಲೂಕಿನ ಮೂಲಕ ರಾಜ್ಯ ಪ್ರವೇಶಿಸಿದ ಭಾರತ್‌ ಜೋಡೊ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.

ಸುಡುವ ಉರಿ ಬಿಸಿಲನ್ನೂ ಲೆಕ್ಕಿಸದೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಮುಖಂಡರ ಭಾಷಣವನ್ನು ಕೇಳಿದ್ದು ಮಾತ್ರವಲ್ಲದೆ, ರಾಹುಲ್‌ ಗಾಂಧಿ, ಮುಖಂಡರೊಂದಿಗೆ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದರು.

ಹಳ್ಳಿ ಹಳ್ಳಿಯಿಂದಲೂ ಜನ:ಕಾಂಗ್ರೆಸ್‌ನ ಜಿಲ್ಲಾ ಮುಖಂಡರು ಹೇಳುವ ಪ್ರಕಾರ, 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೊದಲ ದಿನ ಭಾಗವಹಿಸಿದ್ದರು.

ಚಾಮರಾಜನಗರ, ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ ತಲಾ 4000 ಜನ ಭಾಗವಹಿಸಿದ್ದರು. ಗುಂಡ್ಲುಪೇಟೆ ಕ್ಷೇತ್ರವೊಂದರಿಂದಲೇ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂಬುದು ಅವರ ಹೇಳಿಕೆ.

ಎಲ್ಲ ಕ್ಷೇತ್ರಗಳಿಂದಲೂ ಕಾರ್ಯ ಕರ್ತ ರನ್ನು ಕರೆದುಕೊಂಡು ಬರಲು ಬಸ್‌ ವ್ಯವಸ್ಥೆ ಮಾಡಲಾ ಗಿತ್ತು. ಚಾಮರಾಜನಗರ ಕ್ಷೇತ್ರವೊಂದ ರಿಂದಲೇ 62 ಬಸ್‌ಗಳು ಗುಂಡ್ಲುಪೇಟೆಗೆ ಬಂದಿದ್ದವು. ಖಾಸಗಿ ವಾಹನಗಳು ಹಾಗೂ ಬೈಕ್‌ಗಳಲ್ಲಿ ಸಾವಿರಾರು ಕಾರ್ಯ ಕರ್ತರು ಬಂದಿದ್ದರು. ಇದಲ್ಲದೇ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಗುಂಡ್ಲುಪೇಟೆಯಲ್ಲಿ ನೆರೆದಿದ್ದರು.

ನೂಕು ನುಗ್ಗಲು: ಸಾರ್ವಜನಿಕ ಸಭೆ ನಡೆದ ಮೈದಾನದಲ್ಲಿ 3000 ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿತ್ತು. ರಾಹುಲ್‌ ಗಾಂಧಿ ವೇದಿಕೆಗೆ ಬರುವ ಸಂದರ್ಭದಲ್ಲಿ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದವು.

ಪಾದಯಾತ್ರೆಗೆ ರಾಹುಲ್ ಗಾಂಧಿ ಸಜ್ಜಾಗುತ್ತಿದ್ದಂತೆಯೇ, ವೇದಿಕೆಯ ಮುಂಭಾಗದಲ್ಲಿದ್ದ ಜನರೆಲ್ಲ ರಸ್ತೆಗೆ ಬಂದರು. ಇದರಿಂದಾಗಿ ನೂಕುನುಗ್ಗಲು ಉಂಟಾಯಿತು. ಜನರನ್ನು ಸಂಭಾಳಿಸಲು ಪೊಲೀಸರಿಗೆ ಕಷ್ಟವಾಯಿತು.

ಪಟ್ಟಣದ ಶನೇಶ್ವರ ದೇವಾಲಯದ ವರೆಗೆ 4.2 ಕಿ.ಮೀ ದೂರದವರೆಗೆ ಮೊದಲ ಹಂತದಲ್ಲಿ ಪಾದಯಾತ್ರೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ ಸೇರಿದಂತೆ ಸ್ಥಳೀಯರು ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಶನೇಶ್ವರ ದೇವಾಲಯದ ಬಳಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದ ಕಾರ್ಯಕರ್ತರಿಗೆ ದಾರಿಯುದ್ದಕ್ಕೂ ಸ್ಥಳೀಯರು, ನೀರು, ಮಜ್ಜಿಗೆ, ಬಾಳೆಹಣ್ಣು, ಬೋಂಡ, ಪಕೋಡ, ಸೀಬೆಹಣ್ಣು ಮುಂತಾದ ತಿನಿಸುಗಳನ್ನು ನೀಡಿದರು.

ಗಮನ ಸೆಳೆದ ಜಾನಪದ ಕಲಾ ತಂಡಗಳು: ಪಾದಯಾತ್ರೆಯಲ್ಲಿ ಜಾನಪದ ಕಲಾತಂಡಗಳ ಭಾಗವಹಿಸುವಿಕೆ ಗಮನ ಸೆಳೆದವು. ಕೇರಳದ ಚೆಂಡೆ, ಸ್ಥಳೀಯ ಕಲೆಗಳಾದ ಕಂಸಾಳೆ, ವೀರಗಾಸೆ, ವೀರಭದ್ರ ಕುಣಿತ, ಗೊರವರ ಕುಣಿತ, ಸೋಲಿಗರ ಸಾಂಪ್ರದಾಯಿಕ ಗೊರುಕನ ನೃತ್ಯ, ಡೋಲು ಸೇರಿದಂತೆ ಇನ್ನಿತರ ಹಲವು ಕಲಾ ತಂಡಗಳು ಪಾದಯಾತ್ರೆಗೆ ಮೆರಗು ನೀಡಿದವು.

ಸಾವಿರಾರು ಕಾರ್ಯಕರ್ತರು ಮುಂದಿನ ಪ್ರಧಾನ ಮಂತ್ರಿ ರಾಹುಲ್ ಗಾಂಧಿ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರವೂ ಘೋಷಣೆಗಳು ಮೊಳಗಿದವು.

ಬಿಗಿ ಬಂದೋಬಸ್ತ್‌: ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು. ಗೂಡಲೂರಿಂದ ಪಟ್ಟಣಕ್ಕೆ ಬಂದ ರಾಹುಲ್‌ ಗಾಂಧಿ ಅವರಿಗೆ ತಮಿಳುನಾಡಿನ ಪೊಲೀಸರು ಹಂಗಳದವರೆಗೂ ಭದ್ರತೆ ನೀಡಿದರು.

ತಿಂಡಿ ಊಟದ ವ್ಯವಸ್ಥೆ: ಪಾದಯಾತ್ರೆಗೆ ಬೆಳಗ್ಗೆಯೇ ಆಗಮಿಸಿದ ಜನರಿಗೆ ಪಟ್ಟಣದ ಜೆಎಸ್‍ಎಸ್ ಕಲಾ ಮಂದಿರ, ಸೋಮೇಶ್ವರ ವಿದ್ಯಾರ್ಥಿನಿಲಯ, ಕನಕ ಭವನ ಸೇರಿದಂತೆ ವಿವಿಧ ಕಡೆಗಳಲ್ಲಿ 10 ಸಾವಿರ ಮಂದಿಗೆ ಉಪ್ಪಿಟ್ಟು-ಕೇಸರಿ ಬಾತ್ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಮಧ್ಯಾಹ್ನ ಪಟ್ಟಣದ ಹೊರ ವಲಯದ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯ ಬಳಿ 30 ಸಾವಿರ ಮಂದಿಗೆ ಅನ್ನ-ಸಾಂಬಾರ್, ಪಲಾವ್, ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರ ಅಸ್ತವ್ಯಸ್ತ

ಭಾರತ್ ಜೋಡೊ ಯಾತ್ರೆಯಿಂದಾಗಿ ಪಟ್ಟಣದಿಂದ ಮೈಸೂರು, ಊಟಿ, ಕೇರಳ, ಚಾಮರಾಜನಗರದ ನಡುವೆ ವಾಹನಗಳ ಸಂಚಾರ ಅಸ್ತವ್ಯಸ್ತ ಆಯಿದು. ಜಿಲ್ಲಾಡಳಿತ ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದರೂ, ಜನರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಚಾಮರಾಜನಗರದಿಂದ ಹೋಗುವ ವಾಹನಗಳನ್ನು ಪೊಲೀಸರು ತೆರಕಣಾಂಬಿಯಲ್ಲೇ ತಡೆದರು.

ಪಾದಯಾತ್ರೆ ಮುಂದೆ ಸಾಗಿದ ನಂತರ ಪಟ್ಟಣ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 68 ಮೂಲಕ ಗುಂಡ್ಲುಪೇಟೆಗೆ ಬರುತ್ತಿದ್ದ ಶಾಲಾ ಮಕ್ಕಳು ಕಿರಿಕಿರಿ ಅನುಭವಿಸಿದರು. ಎಲ್ಲ ವಾಹನಗಳನ್ನು ಪಟ್ಟಣದ ಒಳಗಡೆ ಬಿಡದಿದ್ದುದರಿಂದ ವಿದ್ಯಾರ್ಥಿಗಳು ಕಿಲೋಮೀಟರ್ ಗಟ್ಟಲೆ ನಡೆದು ಶಾಲೆಗಳಿಗೆ ಹೋಗಬೇಕಾಯಿತು.

ಪೇಸಿಎಂ ಟೀ ಶರ್ಟ್, ಧ್ವಜ!

ಭಾರತ್ ಜೋಡೊ ಯಾತ್ರೆಯಲ್ಲಿ ವಿಜಯಪುರ ಜಿಲ್ಲೆಯ ಯುವಕಅಕ್ಷಯ್ ಕುಮಾರ್ ಸಿಂದಗಿ ಎಂಬುವವರು ಪೇ ಸಿಎಂ ಎಂದು ಬರೆದಿರುವ ಟೀ ಶರ್ಟ್ ಮತ್ತು ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

'ಇದು ಶೇ 40 ಕಮಿಷನ್‌ ಸರ್ಕಾರ, ಯುವಕರಿಗೆ ಉದ್ಯೋಗ ಕೊಡದೆ ಬೀದಿಪಾಲು ಮಾಡುತ್ತಿರುವ ಸರ್ಕಾರ.ಸರ್ಕಾರದಿಂದ ಆಗಿರುವ ಅನ್ಯಾಯ ವನ್ನು ಜನರು ಅರಿತು ಪ್ರಜ್ಞಾವಂತರಾಗಬೇಕು ಎಂಬ ಉದ್ದೇಶದಿಂದ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT