ಬುಧವಾರ, ಜನವರಿ 27, 2021
20 °C

ಚಾಮರಾಜನಗರ| ಟೆಂಪೊ ಟ್ರಾವೆಲರ್‌ ಉರುಳಿ ಮೂವರು ಸ್ಥಳದಲ್ಲೇ ಸಾವು, 13 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶುಕ್ರವಾರ ಮುಂಜಾನೆ ಟೆಂಪೊ ಟ್ರಾವೆಲರ್‌ ಮಗುಚಿ ಬಿದ್ದು, ತಮಿಳುನಾಡಿನ ಮೂವರು ಸ್ಥಳದಲ್ಲೇ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ.

ಮುಂಜಾನೆ 4.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕೆಳಕ್ಕೆ ಉರುಳಿದೆ ಎಂದು ಪೊಲೀಸರು ತಿಳೀಸಿದ್ದಾರೆ. 

ತಮಿಳುನಾಡಿನ  ತಿರುಪ್ಪೂರಿನ ಸುಬ್ಬರಾಯ ಶೆಟ್ಟಿಯಾರ್‌ (75), ಅವರ ಪತ್ನಿ ಅಮರಾವತಿ (65) ಹಾಗೂ ಈ ದಂಪತಿ ಮಗಳು ಕೋಕಿಲ (45) ಮೃತಪಟ್ಟವರು. ಗಾಯಗೊಂಡಿರುವ 13 ಜನರ ಪೈಕಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ತಿರುಪ್ಪೂರಿನ ಒಂದೇ ಬಡಾವಣೆಯ ನಿವಾಸಿಗಳು ಟೆಂಪೊ ಟ್ರಾವೆಲರ್‌ನಲ್ಲಿ ಚಾಮರಾಜನಗರ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಮಾಡಿಸುವ ಉದ್ದೇಶದಿಂದ ಗುರುವಾರ ರಾತ್ರಿ 11 ಗಂಟೆಗೆ ತಿರುಪ್ಪೂರಿನಿಂದ ಹೊರಟಿದ್ದರು. 

ಮುಂಜಾನೆ 4.30ರ ಸುಮಾರಿಗೆ ಸುವರ್ಣಾವತಿ ಜಲಾಶಯದ ಬಳಿ ಗುಂಡಿ ಬೋರೆ ಬಳಿಯ ತಿರುವಿನಲ್ಲಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಮಗುಚಿತು. ಸ್ಥಳದಲ್ಲಿ ಮೂವರು ಮೃತಪಟ್ಟರೆ, ಗಾಯಗೊಂಡವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. 

ಎಸ್‌ಪಿ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣವರ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ನಂಜಪ್ಪ ಹಾಗೂ ಚಾಮರಾಜನಗರ ಪೂರ್ವ ಠಾಣೆಯ (ರಾಮಸಮುದ್ರ) ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು