ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂರಕ್ಷಣೆ: ಪರಸ್ಪರ ಸಹಕಾರದ ಚರ್ಚೆ

ಬಂಡೀಪುರ: ಮೂರು ರಾಜ್ಯಗಳ ಅರಣ್ಯ ಅಧಿಕಾರಿಗಳ ಸಭೆ
Last Updated 19 ಮಾರ್ಚ್ 2021, 14:51 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ಸ್ಥಾನದಲ್ಲಿ ಶುಕ್ರವಾರ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ರಕ್ಷಿತಾರಣ್ಯಗಳ ಉನ್ನತ ಅಧಿಕಾರಿಗಳ ತ್ರಿಪಕ್ಷೀಯ ಸಭೆ ನಡೆಯಿತು.

‘ವನ್ಯಜೀವಿ ಅಪರಾಧ ಪ್ರಕರಣಗಳ ಮತ್ತು ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ,ಅಂತರರಾಜ್ಯ ಅರಣ್ಯ ಹಾಗೂ ವನ್ಯಜೀವಿ ಅಪರಾಧಿಗಳ ವಿವರಗಳ ಪಟ್ಟಿಯನ್ನು ತಯಾರಿಸಿ ವಿನಿಮಯ ಮಾಡಿಕೊಳ್ಳುವುದು, ವನ್ಯಪ್ರಾಣಿ ಹತ್ಯೆ ತಡೆ ಚಟುವಟಿಕೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕಾರ್ಯಚರಣೆಯ ಬಗ್ಗೆ ಸಮನ್ವಯ ಸಾಧಿಸುವುದು, ಅಂತರರಾಜ್ಯ ವಾರಂಟ್‌ನ್ನು ನೀಡುವ ಕುರಿತು ಪರಸ್ಪರ ಸಹಕಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು ಹೇಳಿದ್ದಾರೆ.

ಮೂರು ರಾಜ್ಯಗಳ ಅರಣ್ಯ ಪ್ರದೇಶದ ಒಳಗಡೆ ಹಾದುಹೋಗುವಂತಹ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರದ ನಿಯಂತ್ರಿಸುವುದು, ವನ್ಯಪ್ರಾಣಿ ಹಾಗೂ ಕಳ್ಳಸಾಗಾಣಿಕೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಹ ಕಳ್ಳಬೇಟೆಗಾರರು/ಬೇಟೆಗಾರರನ್ನು ದಸ್ತಗಿರಿ ಮಾಡುವುದು,ಮೂರು ರಾಜ್ಯಗಳ ಅರಣ್ಯ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಪರವಾನಗಿ ಇಲ್ಲದೆ ಬಂದೂಕು ಹೊಂದಿರುವಂತಹವರಿಂದ ಬಂದೂಕುಗಳನ್ನು ಜಪ್ತಿ ಮಾಡುವುದು, ಮೂರು ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿನ ವೈರ್‌ಲೆನ್‌ ಸಂಪರ್ಕವನ್ನು ಸಾಧಿಸುವ ವಿಚಾರದ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಎರಡು ತಿಂಗಳಿಗೊಮ್ಮೆ ಸಭೆ:ಮೂರು ರಾಜ್ಯಗಳ ಗಡಿ ಕೂಡುವ ಸ್ಥಳದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು,ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯಾಧಿಕಾರಿಗಳು ಸಭೆಯನ್ನು ನಡೆಸಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.

ಬೇಸಿಗೆ ಕಾಲಿದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ತಡೆಗಟ್ಟುವುದು ಹಾಗೂ ಬೆಂಕಿ ನಿರ್ವಹಣೆಯಲ್ಲಿ ಪರಸ್ಪರ ಸಹಕಾರ ನೀಡುವ ವಿಚಾರದ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

‘ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ವನ್ಯಜೀವಿ) ನೇತೃತ್ವದಲ್ಲಿ ಗಡಿಯನ್ನು ಹೊಂದಿಕೊಂಡಿರುವ ರಾಜ್ಯಗಳ ಅರಣ್ಯ ಅಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರಿ ಚರ್ಚಿಸಬೇಕು. ಕೋವಿಡ್‌ ಕಾರಣದಿಂದ ಈ ಬಾರಿ ಸ್ವಲ್ಪ ವಿಳಂಬವಾಗಿದೆ. ಮೂರು ರಾಜ್ಯಗಳು ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಪರಸ್ಪರ ಸಹಕರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯ್‌ಕುಮಾರ್ ಗೋಗಿ, ‌ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ದಕ್ಷಿಣ ವಲಯದ ಐಜಿಎಫ್‌ ಎನ್‌.ಎಸ್‌.ಮುರುಳಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಜಗತ್‌ ರಾಮ್‌, ಮಧುಮಲೆ ಹುಲಿ ಯೋಜನೆ ನಿರ್ದೇಶಕ ಕೆ.ಕೆ ಕೌಶಲ್, ಸತ್ಯಮಂಗಲ ಹುಲಿ ಯೋಜನೆ ನಿರ್ದೇಶಕ ನಿಹಾರ್‌ ರಂಜನ್‌, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌, ಕಾವೇರಿ ವನ್ಯಧಾಮದ ಡಿಸಿಎಫ್‌ ವಿ.ಏಡುಕುಂಡಲು, ಕಾವೇರಿ ವನ್ಯಧಾಮದ ಡಿಸಿಎಫ್‌ ಡಾ.ಎಸ್‌.ರಮೇಶ್‌ ಸೇರಿದಂತೆ, ಕೇರಳದ ವಯನಾಡ್‌ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಸೇರಿದಂತೆ ಮೂರು ರಾಜ್ಯಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT