ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಹುಲಿ ದಾಳಿಗೆ ಸಲಗ ಸಾವು

Last Updated 18 ಸೆಪ್ಟೆಂಬರ್ 2020, 15:52 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಲೊಕ್ಕೆರೆ ವ್ಯಾಪ್ತಿಯಲ್ಲಿ ಹುಲಿಯೊಂದು ಗಂಡಾನೆ ಮೇಲೆ ದಾಳಿ ಮಾಡಿ ಕೊಂದಿದೆ.

‘ಆ ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳಿದ್ದು, ಹುಲಿ ದಾಳಿ ಮಾಡಿರುವುದು ಖಚಿತ. ಮೃತಪಟ್ಟ ಗಂಡಾನೆಗೆ ಆರು ವರ್ಷ ವಯಸ್ಸಾಗಿರಬಹುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುರುವಾರವೇ ಆನೆ ಮೃತಪಟ್ಟಿದೆ. ಆನೆಯ ಹಿಂಭಾಗವನ್ನು ಹುಲಿ ತಿಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಆನೆ, ಸ್ವಲ್ಪ ದೂರ ತೆವಳಿಕೊಂಡು ಹೋಗಿದೆ. ರಕ್ತಸ್ರಾವದಿಂದ ಮೃತಪಟ್ಟಿದೆ. ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆನೆಯ ಕಳೇಬರ ಪತ್ತೆಯಾಗಿದೆ.

ಹುಲಿಯೋಜನೆ ನಿರ್ದೇಶಕ ಬಾಲಚಂದ್ರ, ಪಶುವೈದ್ಯರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಮರಣೋತ್ತರ ಪರೀಕ್ಷೆಯ ನಂತರ ದೇಹವನ್ನು ಹಾಗೆಯೇ ಬಿಡಲಾಗಿದ್ದು, ಹುಲಿ ಅದನ್ನು ತಿನ್ನಲು ಬಂದರೂ ಬರಬಹುದು’ ಎಂದು ಬಾಲಚಂದ್ರ ತಿಳಿಸಿದರು.

‘ಹುಲಿಗಳು ಮರಿಯಾನೆಗಳನ್ನು ಬೇಟೆಯಾಡುತ್ತವೆ. ಆನೆಗಳ ಹಿಂಡು ಇದ್ದರೆ ದಾಳಿ ಮಾಡಲು ಹೋಗುವುದಿಲ್ಲ. ಈ ಗಂಡಾನೆಗೆ ಆರು ವರ್ಷ ವಯಸ್ಸಾಗಿದ್ದು, ಮರಿ ಎನ್ನುವ ಕಾರಣದಿಂದಲೇ ಹುಲಿ ದಾಳಿ ಮಾಡಿರಬಹುದು ಅಥವಾ ದಾಳಿ ಮಾಡುವುದಕ್ಕಿಂತಲೂ ಮೊದಲೇ ಆನೆ ಗಾಯಗೊಂಡಿರುವ ಸಾಧ್ಯತೆಯೂ ಇರಬಹುದು’ ಎಂದು ಅವರು ಮಾಹಿತಿ ನೀಡಿದರು.

ನೆರೆಯ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತೆಪ್ಪಕಾಡು ವಲಯದಲ್ಲೂ ಗುರುವಾರ ಆನೆಯೊಂದು ಮೃತಪಟ್ಟಿದ್ದು, ಅದು ಕೂಡ ಹುಲಿ ದಾಳಿಯಿಂದ ಸಾವಿಗೀಡಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT