ಮಂಗಳವಾರ, ಜನವರಿ 21, 2020
22 °C
ಎಲ್ಲ ಬಸ್‌ಗಳ ಟಿಕೆಟ್‌ ದರ ₹ 5ರ ವರೆಗೆ ಹೆಚ್ಚಳ, ಮಂಗಳವಾರದಿಂದ ಜಾರಿ, ಸಾರ್ವಜನಿಕರ ಆಕ್ರೋಶ

ಟೋಲ್‌: ಪ್ರಯಾಣಿಕರ ಮೇಲೆ ಕೆಎಸ್‌ಆರ್‌ಟಿಸಿ ಬರೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೊಳ್ಳೇಗಾಲ ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ನಿರ್ಮಿಸಲಾಗಿರುವ ಮೂರು ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಟೋಲ್‌ ಸಂಗ್ರಹ ಆರಂಭವಾಗುತ್ತಿದ್ದಂತೆಯೇ, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಕೆಎಸ್‌ಆರ್‌ಟಿಸಿ ಬರೆ ಎಳೆದಿದೆ. 

ಟೋಲ್‌ ಕೇಂದ್ರಗಳಿರುವ ಮಾರ್ಗದ‌ಲ್ಲಿ ಸಂಚರಿಸುವ ಬಸ್‌ಗಳ ಟಿಕೆಟ್‌ ದರವನ್ನು ₹ 5ರ ವರೆಗೆ ಹೆಚ್ಚಿಸಲಾಗಿದ್ದು, ಮಂಗಳವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಮೈಸೂರಿಗೆ ತೆರಳುವ ಪ್ರಯಾಣಿಕರು ಈಗ ಹೆಚ್ಚು ಹಣ ತೆರಬೇಕಾಗಿದೆ. 

ತನ್ನ ಮೇಲಿನ ಟೋಲ್‌ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಿರುವ ಕೆಎಸ್‌ಆರ್‌ಟಿಸಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಎಲ್ಲಿ? ಎಷ್ಟು?: ಮೈಸೂರು ನಂಜನಗೂಡು ರಸ್ತೆಯಲ್ಲಿ ಕೆ.ಎನ್.ಹುಂಡಿ ಬಳಿ ಇರುವ ಟೋಲ್‌ ಕೇಂದ್ರದಲ್ಲಿ ಹಾದು ಹೋಗುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ₹ 5 ಹೆಚ್ಚಾಗಿದೆ. ತಿ.ನರಸೀಪುರದ ಯಡದೊರೆ ಬಳಿ ಇರುವ ಟೋಲ್‌ ಕೇಂದ್ರವನ್ನು ಹಾದು ಹೋಗುವ ಎಲ್ಲ ಬಸ್‌ಗಳ ದರ ₹ 4 ಹೆಚ್ಚಿಸಲಾಗಿದೆ. 

ಹಾಗಾಗಿ, ಸಾಮಾನ್ಯ, ಎಕ್ಸ್‌ಪ್ರೆಸ್‌ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಟೋಲ್‌ ಶುಲ್ಕದ ಬಾಬ್ತು ಟಿಕೆಟ್‌ಗೆ ಹೆಚ್ಚು ಹಣ ಕೊಡಬೇಕಾಗಿದೆ. 

ಚಾಮರಾಜನಗರದಿಂದ ನಂಜನಗೂಡು, ತಿ.ನರಸೀಪುರದ ಮೂಲಕ ಮೈಸೂರಿಗೆ ಹೋಗುವ ಸಾಮಾನ್ಯ ಬಸ್‌ ದರ ₹ 50 ಇತ್ತು. ಮಂಗಳವಾರದಿಂದ ₹ 55 ಮತ್ತು ₹ 54 ಆಗಿದೆ (ಎಕ್ಸ್‌ಪ್ರೆಸ್‌ ಬಸ್‌ಗಳ ಈಗಿನ ದರ ₹ 55 ಇತ್ತು. ಅದು ₹ 60 ಮತ್ತು ₹ 59 ಆಗಿದೆ). ಕೊಳ್ಳೇಗಾಲದಿಂದ ಮೈಸೂರಿಗೆ ₹ 55 ಇತ್ತು. ಮಂಗಳವಾರದಿಂದ ಪ್ರಯಾಣಿಕರು ₹ 59 ಕೊಡುತ್ತಿದ್ದಾರೆ. 

ಟೋಲ್‌ ದಾಟಿದರೆ ಮಾತ್ರ ಹೆಚ್ಚಳ: ಟೋಲ್‌ ಕೇಂದ್ರಕ್ಕೂ ಮೊದಲಿನ ಸ್ಥಳಗಳಗಳಿಗೆ ಈ ಹಿಂದಿನ ದರವೇ ಇದೆ. ಟೋಲ್‌ ಗೇಟ್‌ ನಂತರದ ಸ್ಥಳಗಳಲ್ಲಿ ಇಳಿಯುವ ಪ್ರಯಾಣಿಕರಿಗೆ ಮಾತ್ರ ಹೆಚ್ಚ ದರ ಹೆಚ್ಚಳವಾಗಿಲ್ಲ. ಕೇಂದ್ರ ದಾಟಿದ ನಂತರ ಸಿಗುವ ಎಲ್ಲ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಹೆಚ್ಚು ಹಣ ತೆರಬೇಕಾಗಿದೆ. ಉದಾಹರಣೆಗೆ ಚಾಮರಾಜನಗರ ಮತ್ತು ಮೈಸೂರು ಮಾರ್ಗ ಮಧ್ಯೆ ನಂಜನಗೂಡು ಅಥವಾ ಚಾಮರಾಜನಗರ– ತಿ.ನರಸೀಪುರ ನಡುವಿನ ಟಿಕೆಟ್‌ ದರದಲ್ಲಿ ವ್ಯತ್ಯಾಸವಾಗಿಲ್ಲ. 

‘ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ. ಟೋಲ್‌ ಶುಲ್ಕವನ್ನು ಮಾತ್ರ ಪ್ರಯಾಣಿಕರಿಂದ ಪಡೆಯುತ್ತಿದ್ದೇವೆ. ಸರ್ಕಾರವೇ ಆದೇಶ ನೀಡಿದೆ. ಅದರಂತೆ ಶುಲ್ಕ ವಿಧಿಸಲಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ಇಷ್ಟು ಜಾಸ್ತಿ ಯಾಕೆ?: ‘ಮೈಸೂರು ನಂಜನಗೂಡು ಮಾರ್ಗದಲ್ಲಿ ಬಸ್‌ಗೆ ₹ 80 ಟೋಲ್‌ ಇದೆ. ಒಂದು ಬಸ್‌ನಲ್ಲಿ ಮೈಸೂರಿಗೆ ಹೋಗುವವರು ಕನಿಷ್ಠ 25 ಮಂದಿಯಾದರೂ ಇರುತ್ತಾರೆ. ₹ 5ರಂತೆ ₹ 125 ಆಗುತ್ತದೆ. ಸಣ್ಣ ಪ್ರಮಾಣದಲ್ಲಿ ಶುಲ್ಕ ಪಡೆದರೆ ತೊಂದರೆ ಇಲ್ಲ. ಆದರೆ, ₹ 4, ₹ 5 ಹೆಚ್ಚು ಮಾಡಿದರೆ ಅದು ಸುಲಿಗೆಯಲ್ಲವೇ’ ಎಂಬುದು ಪ್ರಯಾಣಿಕರ ಪ್ರಶ್ನೆ.

ಕಣ್ಣೇಗಾಲ ವ್ಯಾಪ್ತಿಯಲ್ಲಿ ₹ 3 ಹೆಚ್ಚಳ

ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ ಗ್ರಾಮದ ವ್ಯಾಪ್ತಿಯಲ್ಲಿರುವ ಟೋಲ್‌ ಸಂಗ್ರಹ ಕೇಂದ್ರದ ಮೂಲಕ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರದಲ್ಲಿ ₹ 3 ಹೆಚ್ಚಳ ಮಾಡಲಾಗಿದೆ. 

ಹಾಗಾಗಿ, ಕಣ್ಣೇಗಾಲ, ಬೇರಂಬಾಡಿ ಮತ್ತು ಚೆನ್ನಮಲ್ಲಿಪುರ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸುವವರು ₹ 3 ಹೆಚ್ಚುವರಿ ಶುಲ್ಕ ನೀಡಬೇಕಿದೆ. 

 

ಟೋಲ್‌ ಪಾವತಿಸಬೇಕಾಗಿರುವುದರಿಂದ ಆ ಮಾರ್ಗದ ಟಿಕೆಟ್‌ ದರ ಹೆಚ್ಚಿಸುವಂತೆ ಸರ್ಕಾರದ ಆದೇಶವಿದೆ. ಹೊಸ ದರ ಮಂಗಳವಾರದಿಂದ ಜಾರಿಗೆ ಬಂದಿದೆ.
ಕೆ.ಎಚ್‌.ಶ್ರೀನಿವಾಸ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು