ಸೋಮವಾರ, ಜೂನ್ 21, 2021
21 °C
ಭರಚುಕ್ಕಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು, ಸಂಚಾರ ದಟ್ಟಣೆ

ಕೋವಿಡ್‌ ಮುನ್ನೆಚ್ಚರಿಕೆ: ಭರಚುಕ್ಕಿ ಜಲಪಾತ ವೀಕ್ಷಣೆಗೆ ಪಾಲನೆಯಾಗದ ನಿಯಮ

ಅವಿನ್‌ ಪ್ರಕಾಶ್‌ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರದ ಬಳಿ ಇರುವ ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಲು ಹೇರಲಾಗಿದ್ದ ನಿರ್ಬಂಧ ಸಡಿಲಗೊಳಿಸಿದ ನಂತರ, ಧುಮ್ಮಿಕ್ಕುವ ಜಲಪಾತವನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ರಜಾ ದಿನವಾದ ಭಾನುವಾರ ಭರಚುಕ್ಕಿಯಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು. 

ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಪ್ರವಾಸಿಗರು, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. 

ಕೋವಿಡ್‌–19 ಲೆಕ್ಕಿಸದೆ ಜಲಪಾತ ವೀಕ್ಷಣೆಗೆ ಬಂದಿದ್ದ ಜನರು, ಸೋಂಕು ಹರಡದಂತೆ ತಡೆಯಲು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದ ನಿಯಮಗಳನ್ನು ಅನುಸರಿಸದೇ ಇದ್ದುದು ಕಂಡು ಬಂತು. 

ಮಾಸ್ಕ್‌ ಧರಿಸುವುದು ಕಡ್ಡಾಯ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕೂಡ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮದಲ್ಲಿ ಸೇರಿದೆ. ಆದರೆ, ಹಲವು ಪ್ರವಾಸಿಗರು ಮಾಸ್ಕ್‌ ಧರಿಸಿರಲಿಲ್ಲ. ಅಂತರ ಕಾಯ್ದುಕೊಳ್ಳದೇ, ಗುಂಪು ಗುಂಪಾಗಿ ನಿಂತುಕೊಂಡು ಜಲಪಾತ ವೀಕ್ಷಣೆ ಮಾಡಿದರು. ಗುಂಪು ಗುಂಪಾಗಿ ಫೋಟೊ ತೆಗೆಸಿಕೊಂಡರು, ಸೆಲ್ಫೀಯನ್ನು ತೆಗೆದುಕೊಂಡರು. 

ಹೇಳುವವವರು, ಕೇಳುವವರು ಇಲ್ಲ: ಶುಕ್ರವಾರದಿಂದ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮೊದಲ ದಿನ ಅರಣ್ಯ ಇಲಾಖೆ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ವಾಹನದಲ್ಲಿರುವವವ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಜಲಪಾತದ ಬಳಿ ಸ್ಯಾನಿಟೈಸರ್‌ ನೀಡುತ್ತಿದ್ದರು. ಭಾನುವಾರ ಯಾರೂ ಕಂಡು ಬರಲಿಲ್ಲ. ನಿಯಮ ಪಾಲನೆಯ ಬಗ್ಗೆ ಪ್ರವಾಸಿಗರಿಗೆ ನೆನಪಿಸುವವರೂ ಇರಲಿಲ್ಲ. ಮಾಸ್ಕ್‌ ಧರಿಸದೇ ಇದ್ದವ‌ರೂ ಜಲಪಾತ ವೀಕ್ಷಣೆಗೆ ಬಂದಿದ್ದರು. 

ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಇದ್ದುದರಿಂದ ಅಲ್ಲಿದ್ದ ಸಿಬ್ಬಂದಿಗೆ ಎಲ್ಲರನ್ನೂ ನಿರ್ವಹಿಸುವುದು ಸಾಧ್ಯವಾಗಲಿಲ್ಲ.

ಈ ಬಗ್ಗೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಥರ್ಮಲ್‌ ಸ್ಕ್ರೀನಿಂಗ್ ಮಾಡುವ ಒಂದೇ ಉಪಕರಣ ಇದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಅದು ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ಇನ್ನು ನಾಲ್ಕು ಉಪಕರಣಗಳನ್ನು ತರಿಸಲಾಗುವುದು’ ಎಂದು ಹೇಳಿದರು. ‌ 

ಸಂಚಾರ ದಟ್ಟಣೆ: ಭಾನುವಾರ ರಜಾ ದಿನವಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ತಮ್ಮ ವಾಹನಗಳಲ್ಲಿ ಬಂದಿದ್ದರು. ಇದರಿಂದಾಗಿ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿತ್ತು. ಕಾರು, ಬೈಕ್‌ಗಳು ಎರಡು ಕಿ.ಮೀ ಉದ್ದದವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು. 

ಜಲಪಾತ ವೀಕ್ಷಣೆಗೆ ಬಂದವರು, ಶಿವನಸಮುದ್ರದ ಸಮೂಹ ದೇವಾಲಯಗಳಾದ ಸೋಮೇಶ್ವರ ದೇವಸ್ಥಾನ, ಮಧ್ಯರಂಗ, ಶಿವನಸಮುದ್ರ, ದರ್ಗಾವನ್ನು ವೀಕ್ಷಣೆ ಮಾಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು