ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ಕೊಲೆ | ದ್ವೇಷ ಕೃತ್ಯ ಕಂಡು ಬೆಚ್ಚಿಬಿದ್ದ ಗುಂಡ್ಲುಪೇಟೆ ಜನತೆ

Last Updated 27 ಮೇ 2020, 16:28 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ನಡೆದ ತ್ರಿವಳಿ ಕೊಲೆ ತಾಲ್ಲೂಕಿನ ಜನರನ್ನು ಬೆಚ್ಚಿ ಬೀಳಿಸಿದೆ. ತಾಲ್ಲೂಕಿನ ಇತಿಹಾಸದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂತಹ ದುಷ್ಕೃತ್ಯ ನಡೆದಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ದ್ವೇಷದ ಕಾರಣಕ್ಕೆ ಮೂರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಸಂಗತಿಯನ್ನು ಸ್ಥಳೀಯ ನಿವಾಸಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ದಾಳಿಗಳಿಂದ ಜನ ಮೃತಪಟ್ಟ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಎರಡು ತಂಡಗಳ ನಡುವೆ ಈ ಪ್ರಮಾಣದಲ್ಲಿ ಮಾರಾಮಾರಿ ನಡೆದು ಕೊಲೆಯಲ್ಲಿ ಅಂತ್ಯ ಕಂಡಿದ್ದು ಇದೇ ಮೊದಲು ಎಂದು ಹಿರಿಯ ನಾಗರಿಕರು ಹೇಳುತ್ತಾರೆ.

ಕಳೆದ ವರ್ಷ ಆಗಸ್ಟ್‌ 16ರಂದು ಮೈಸೂರಿನ ಯುವ ಉದ್ಯಮಿಯೊಬ್ಬರು ತಾಲ್ಲೂಕಿನ ಜಮೀನೊಂದರಲ್ಲಿ ಕುಟುಂಬದ ನಾಲ್ವರಿಗೆ ಗುಂಡಿಕ್ಕಿ, ಕೊನೆಗೆ ತಾವೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿದ್ದು ತಾಲ್ಲೂಕನ್ನು ಬೆಚ್ಚಿ ಬೇಳಿಸಿತ್ತು. ಒಂದೇ ಪ್ರಕರಣದಲ್ಲಿ ಐವರು ಮೃತಪಟ್ಟ ಮೊದಲ ಪ್ರಕರಣ ಅದಾಗಿತ್ತು. ಆದರೆ, ಅದು ಸಾಮೂಹಿಕ ಆತ್ಮಹತ್ಯೆಯಾಗಿತ್ತು.

ಚುನಾವಣೆ, ಹಬ್ಬಗಳ ಸಂದರ್ಭದಲ್ಲಿ ಗುಂಪುಗಳ ನಡುವೆ ಸಣ್ಣ ಪುಟ್ಟ ಘರ್ಷಣೆಯಾಗಿದ್ದರೂ, ಅವು ಈ ಮಟ್ಟಕ್ಕೆ ಹೋಗಿರಲಿಲ್ಲ. ಈ ಪ್ರಕರಣದಲ್ಲಿ ತಂಡವೊಂದು ಒಂದು ಕುಟುಂಬದ ಸದಸ್ಯರ ಮೇಲೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಮೃತಪಟ್ಟವರೆಲ್ಲ ಸಂಬಂಧಿಕರು.

‘ಘರ್ಷಣೆಯ ಸಂದರ್ಭದಲ್ಲಿ ಪೊಲೀಸರು ಶೀಘ್ರವಾಗಿ ಕಾರ್ಯ ಪ್ರವೃತ್ತರಾಗದೆ ಹೋಗಿದ್ದರೆ ಇನ್ನಷ್ಟು ವ್ಯಕ್ತಿಗಳು ಮೃತರಾಗುತ್ತಿದ್ದರು’ ಎಂದು ಘಟನೆಯನ್ನು ಕಂಡ ವ್ಯಕ್ತಿಯೊಬ್ಬರು ತಿಳಿಸಿದರು.

‘25 ವರ್ಷಗಳ ಹಿಂದೆ ಕಾವೇರಿ ನದಿ ನೀರಿನ ವಿಚಾರದಲ್ಲಿ ಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಆದರೆ ಈ ರೀತಿ ಹತ್ಯೆಯಾಗಿರಲಿಲ್ಲ. ಮನುಷ್ಯ ಮನುಷ್ಯನನ್ನೇ ಕೊಲ್ಲಲು ಆರಂಭಿಸಿದ್ದಾನೆ ಎಂದರೆ ಸಮಾಜದಲ್ಲಿ ಮನುಷತ್ವವೇ ಸತ್ತ ಹೋದ ಹಾಗೆ’ ಎಂದು ಹಿರಿಯ ನಾಗರಿಕರೊಬ್ಬರು ಬೇಸರಿಸಿದರು.

ಪ್ರತಿ ದಾಳಿಯ ಭಯ: ಮಂಗಳವಾರ ರಾತ್ರಿಯ ಘಟನೆಗೆ ಪ್ರತಿಕಾರವಾಗಿ ಮುಂದಿನ ದಿನಗಳಲ್ಲಿ ದಾಳಿ ನಡೆಯುವ ಸಾಧ್ಯತೆಯ ಭಯವೂ ಪಟ್ಟಣಿಗರನ್ನು ಕಾಡುತ್ತಿದೆ.

ಪೊಲೀಸರು ಬಿಗಿ ಬಂದೋಬಸ್ತ್‌ ಮಾಡುವುದರ ಮೂಲಕ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ ಆಗುವಂತೆ ಮಾಡುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೂರ್ವ ಯೋಜಿತ ಕೃತ್ಯವೇ?
ಎರಡೂ ತಂಡಗಳು ಕೆಲವು ತಿಂಗಳುಗಳಿಂದ ಪರಸ್ಪರ ದ್ವೇಷ ಸಾಧಿಸುತ್ತಿದ್ದರು. ನಡೆಸುತ್ತಿದ್ದ ವ್ಯವಹಾರಗಳ ಬಗ್ಗೆ ಎರಡೂ ಕಡೆಯವರು ಪರಸ್ಪರ ತಿಳಿದುಕೊಂಡಿದ್ದರು.ಮಂಗಳವಾರ ರಾತ್ರಿ 18ಕ್ಕೂ ಹೆಚ್ಚು ಮಂದಿ ಮಚ್ಚು, ಲಾಂಗ್‌ ಸೇರಿದಂತೆ ವಿವಿಧ ಮಾರಾಕಾಸ್ತ್ರಗಳನ್ನು ಹಿಡಿದು ಘರ್ಷಣೆಗೆ ಇಳಿದಿದ್ದರು. ಹಾಗಾಗಿ, ಇದು ಪೂರ್ವ ನಿಯೋಜಿತ ಕೃತ್ಯವೇ ಎಂಬ ಅನುಮಾನವೂ ಮೂಡಿದೆ.

ಘಟನೆಯ ಹಿಂದೆ ರಾಜಕೀಯ ಕಾರಣಗಳೂ ಇರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT