ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯ ಪ್ರೊ.ರಾಮಕೃಷ್ಣ, ಬಂಗಾರ ಆಚಾರ್‌ಗೆ ಪ್ರಶಸ್ತಿಯ ಗರಿ

2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಶಿಕ್ಷಣ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿ ಆಯ್ಕೆ
Last Updated 28 ಅಕ್ಟೋಬರ್ 2020, 11:46 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ರಾಜ್ಯ ಸರ್ಕಾರ ಪ್ರಕಟಿಸಿರುವ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಡಿ ಜಿಲ್ಲೆ ಚಾಮರಾಜನಗರದ ಇಬ್ಬರು ಸಾಧಕರು ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಆರ್‌.ರಾಮಕೃಷ್ಣ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಮೂಡಲಪಾಯ ಯಕ್ಷಗಾನ ಕಲಾವಿದ ಬಂಗಾರ‌ ಆಚಾರ್‌ ಅವರು ಆಯ್ಕೆಯಾಗಿದ್ದಾರೆ.

ಮೂಲತಃ ರಾಮಸಮುದ್ರದವರಾದ ರಾಮಕೃಷ್ಣ ಅವರು ಮೈಸೂರಿನಲ್ಲಿ ವಾಸವಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿದ್ದ ರಾಮಕೃಷ್ಣ ಅವರು ಸಂಸ್ಥೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದಾರೆ. ಭಾಷಾ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದಲ್ಲಿ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿಯ‌ವರಾದ ಬಂಗಾರ ಆಚಾರ್‌ ಅವರು ಮೂಡಲಪಾಯ ಯಕ್ಷಗಾನ ಕಲಾವಿದರು. ಯಕ್ಷಗಾನ ಅಕಾಡೆಮಿ ನೀಡುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಅವರು ಕಳೆದ ವರ್ಷ ಭಾಜನರಾಗಿದ್ದರು.

ಶಿಕ್ಷಣ ಕ್ಷೇತ್ರದ ಸಾಧಕ

ಮೂರೂವರೆ ದಶಕಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಂಡಿದ್ದ, 64 ವರ್ಷದ ಪ್ರೊ.ಆರ್‌.ರಾಮಕೃಷ್ಣ ಅವರು ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಉಪನ್ಯಾಸಕ, ರೀಡರ್‌, ಪ್ರಾಧ್ಯಾಪಕನಾಗಿ ಕೊನೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಾಲ್ಕು ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಅಧ್ಯಯನ ಮಾಡಿರುವ ಅವರು, 15ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸ್ವಲ್ಪ ಸಮಯ ವಿಶ್ವಕೋಶ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾಷಾ ವಿಜ್ಞಾನ ವಿಹಾರ, ಭಾಷಾ ವೀಕ್ಷಣೆ, ದ್ರಾವೀಡ ಭಾಷೆಗಳು, ಕೃತಕ ಭಾಷೆಗಳು, ನನೆಯೊಳಗಣ ಪರಿಮಳ, ಸಾಂಸ್ಕೃತಿಕ ಮಾನವ ಶಾಸ್ತ್ರ, ಪ್ರಾಣಿ ಭಾಷೆ, ಭಾಷಾ ಸಂಪದ, ಚಾಮರಾಜನಗರ ತಾಲ್ಲೂಕು ದರ್ಶನ, ತಿ.ನರಸೀಪುರ ತಾಲ್ಲೂಕು ದರ್ಶನ... ಅವರ ಪ್ರಮುಖ ಕೃತಿಗಳು.ರಾಮಕೃಷ್ಣ ಅವರು 2012ರಲ್ಲಿ ನಡೆದ ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡಿರುವ ಪ್ರೊ.ರಾಮಕೃಷ್ಣ ಅವರು, ‘ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಈ ಗೌರವನ್ನು ತಂದೆ, ತಾಯಿ, ಗುರುಗಳು ಹಾಗೂ ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ. ವಿದ್ಯಾರ್ಥಿಗಳು ಇಲ್ಲದಿದ್ದರೆ ನಾನು ಏನೇನೂ ಅಲ್ಲ. ಅವರಿಂದಾಗಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ’ ಎಂದು ಹೇಳಿದರು.

ಯಕ್ಷಗಾನ ಕಲಾ ಸೇವೆಯ ಕುಟುಂಬ

86 ವರ್ಷದ ಬಂಗಾರ ಆಚಾರ್‌ ಅವರದ್ದು ಯಕ್ಷಗಾನ ಸೇವೆಯಲ್ಲಿ ತೊಡಗಿರುವ ಕುಟುಂಬ. ಅವರ ಕುಟುಂಬದವರು ಮೂರ್ನಾಲ್ಕು ತಲೆಮಾರುಗಳಿಂದಲೂ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಬಂಗಾರ ಆಚಾರ್‌ ಅವರ ತಂದೆ ತಿಮ್ಮಾಚಾರಿ ಅವರು ಭಾಗವತಿಕೆಯಲ್ಲಿ ಪರಿಣತರಾಗಿದ್ದವರು. ಇವರ ಶಿಷ್ಯ ಸಮೂಹ ದೊಡ್ಡದು. ಆಚಾರ್‌ ಅವರಿಗೆ ತಂದೆಯಿಂದಲೇ ಕಲೆ ಬಳುವಳಿಯಾಗಿ ಬಂದಿದೆ. ಯಕ್ಷಗಾನ ಅವರ ಪ್ರವೃತ್ತಿಯಾಗಿದ್ದರೆ, ಬಡಗಿ ಕೆಲಸ ಅವರ ವೃತ್ತಿ. ಇಳಿ ವಯಸ್ಸಿನಲ್ಲೂ ಮರಗೆಲಸವನ್ನೂ ಅವರು ಮಾಡುತ್ತಿದ್ದಾರೆ.

ಪ್ರತಿ ವರ್ಷ ಗ್ರಾಮದಲ್ಲಿ ಸ್ಥಳೀಯರಿಗೆ ತರಬೇತಿ ಕೊಟ್ಟು ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳುತ್ತಾರೆ. ಮಗ ಮತ್ತು ಮೊಮ್ಮಕ್ಕಳು ಹಾಗೂ ಆಸಕ್ತಿ ಇರುವವರಿಗೂ ‌ಕಲೆಯನ್ನು ಧಾರೆ ಎರೆಯುತ್ತಿದ್ದಾರೆ.

‘ಕಲೆಗೆ ಅದಕ್ಕೆ ಆದ ಗೌರವ ಇದೆ. ಅದಕ್ಕೆ ಇರುವ ಬೆಲೆಯಿಂದಲೇ ಈ ವಯಸ್ಸಿನಲ್ಲೂ ಗೌರವ ಸಿಕ್ಕಿದೆ. ಜನರಲ್ಲಿ ಕಲೆಗಳ ಬಗೆಗೆ ಹಾಗೂ ಅವುಗಳನ್ನು ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಹಾಗಿದ್ದರೂ, ಕಲೆಗೆ ಎಂದೂ ಸಾವಿಲ್ಲ’ ಎಂದು ಬಂಗಾರ ಆಚಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕ ಸಂಕಷ್ಟದಿಂದ ಕಲೆಯಿಂದ ದೂರವಾಗುವವರು ಇದ್ದಾರೆ. ಹಾಗಾಗಿ, ಕಲೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸರ್ಕಾರಗಳು ಪ್ರೋತ್ಸಾಹಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT