ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖ

ಇಬ್ಬರ ಸಾವು, 40 ಹೊಸ ಪ್ರಕರಣಗಳು, 66 ಮಂದಿ ಗುಣಮುಖ
Last Updated 25 ಆಗಸ್ಟ್ 2020, 15:56 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮೂರು ದಿನಗಳಿಂದ ದೃಢಪಡುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಭಾನುವಾರ 24 ಪ್ರಕರಣಗಳು ವರದಿಯಾಗಿದ್ದರೆ, ಸೋಮವಾರ 30 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಮಂಗಳವಾರ 40 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತಪಟ್ಟ ಸೋಂಕಿತರ ಸಂಖ್ಯೆ 41ಕ್ಕೆ ಏರಿದೆ. ಕೋವಿಡ್‌ ಕಾರಣದಿಂದ 28 ಮಂದಿ ಪ್ರಾಣಕಳೆದುಕೊಂಡಿದ್ದರೆ, ಕೋವಿಡ್‌ ಯೇತರ ಕಾರಣಗಳಿಂದ 13 ಜನರು ಕೊನೆಯುಸಿರೆಳೆದಿದ್ದಾರೆ.

ಯಳಂದೂರು ತಾಲ್ಲೂಕಿನ ಹೊನ್ನೂರಿನ 60 ವರ್ಷದ ಮಹಿಳೆ (ರೋಗಿ ಸಂಖ್ಯೆ– 2,49,699) ಆಗಸ್ಟ್‌ 17ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ತಡ‌ರಾತ್ರಿ ಮೃತಪಟ್ಟಿದ್ದಾರೆ.

ನಿಧನರಾದ ಮತ್ತೊಬ್ಬರು ಚಾಮರಾಜನಗರದ 50 ವರ್ಷ ಪುರುಷ (ರೋಗಿ ಸಂಖ್ಯೆ 2,20,327). ಇವರು ಆಗಸ್ಟ್‌ 12ರಂದೇ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ಜಿಲ್ಲೆಯಲ್ಲಿ 40 ಹೊಸ ಪ್ರಕರಣಗಳು ದಾಖಲಾಗಿದ್ದು, 66 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 2,109 ಪ್ರಕರಣಗಳು ವರದಿಯಾಗಿವೆ. 1,628 ಮಂದಿ ಸೋಂಕು ಮುಕ್ತರಾಗಿದ್ದಾರೆ. 440 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 199 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ಒಟ್ಟು 756 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ನಲ್ಲಿ 576, ರ‍್ಯಾಪಿಡ್‌ ಆ್ಯಂಟಿಜೆನ್‌ 147, ಟ್ರು ನಾಟ್‌ 33 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 39 ಮಂದಿಗೆ ಸೋಂಕು ಖಚಿತವಾಗಿದ್ದು, 717 ವರದಿಗಳು ನೆಗೆಟಿವ್‌ ಬಂದಿವೆ. ಒಂದು ಪ್ರಕರಣ ಮೈಸೂರಿನಲ್ಲಿ ವರದಿಯಾಗಿದೆ. 750ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದರೂ 40 ಪ್ರಕರಣಗಳಷ್ಟೇ ದೃಢಪಟ್ಟಿರುವುದು ಗಮನಾರ್ಹ ಸಂಗತಿ.

ಜಿಲ್ಲೆಯಲ್ಲಿ ಈವರೆಗೆ 36,793 ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ 34,687 ವರದಿಗಳು ನೆಗೆಟಿವ್‌ ಬಂದಿವೆ.

ಭಾನುವಾರ 102 ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಂದು 24 ಪ್ರಕರಣಗಳು ದೃಢಪಟ್ಟಿತ್ತು. ಸೋಮವಾರ 379 ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 30 ಮಂದಿಗೆ ಸೋಂಕು ಖಚಿತವಾಗಿತ್ತು.

ಮಂಗಳವಾರ ಸೋಂಕು ದೃಢ‍ಪಟ್ಟ 40 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 22, ಕೊಳ್ಳೇಗಾಲದ ಎಂಟು, ಗುಂಡ್ಲುಪೇಟೆ ಹಾಗೂ ಯಳಂದೂರಿನ ತಲಾ ನಾಲ್ವರು, ಹನೂರಿನ ಇಬ್ಬರು ಇದ್ದಾರೆ.

ಗುಣಮುಖರಾದ 66 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 34, ಕೊಳ್ಳೇಗಾಲ ತಾಲ್ಲೂಕಿನ 12 ಹನೂರು ತಾಲ್ಲೂಕಿನ ಎಂಟು, ಗುಂಡ್ಲುಪೇಟೆಯ ಏಳು,ಯಳಂದೂರು ತಾಲ್ಲೂಕಿನ ನಾಲ್ವರು‌ ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT