ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುಚಿ ಬಿದ್ದ ಕಬ್ಬಿನ ಲಾರಿ: ಇಬ್ಬರು ಸಾವು

ಉತ್ತರ ಪ್ರದೇಶದ ಬಟ್ಟೆ ವ್ಯಾಪಾರಿಗಳು ದುರ್ಮರಣ, ಅತಿ ವೇಗ ದುರಂತಕ್ಕೆ ಕಾರಣ?
Last Updated 7 ಮೇ 2022, 14:48 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಡೀವಿಯೇಷನ್‌ ರಸ್ತೆಯಲ್ಲಿ ಎನ್‌ಡಿಎ ಲಾಡ್ಜ್‌ ಬಳಿಯ ತಿರುವಿನಲ್ಲಿ ಕಬ್ಬು ಸಾಗಿಸುತ್ತಿದ್ದ ಲಾರಿಯೊಂದು ಶನಿವಾರ ಸಂಜೆ ಮಗುಚಿ ಬಿದ್ದು ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಉತ್ತರ ಪ್ರದೇಶದ ಆಲಿಗಡ ಜಿಲ್ಲೆಯ ನಗಲಾ ಸರ್ದಾರ್‌ ಗ್ರಾಮದವರಾದ ಮಯೂರ್‌ (17) ಹಾಗೂ ಅತುಲ್‌ (17) ಎಂದು ಗುರುತಿಸಲಾಗಿದೆ. ಇನ್ನೊಬ್ಬರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಮೃತಪಟ್ಟ ಇಬ್ಬರೂ ಬಟ್ಟೆ ವ್ಯಾಪಾರಿಗಳಾಗಿದ್ದು, ಎನ್‌ಡಿಎ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಅವರ ಪರಿಚಯಸ್ಥರನ್ನು ಕರೆದುಕೊಂಡು ಬರುವುದಕ್ಕಾಗಿ ಬಸ್‌ ನಿಲ್ದಾಣಕ್ಕೆ ತೆರಳುವುದಕ್ಕಾಗಿ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ತಮಿಳುನಾಡಿನತ್ತ ಹೋಗುತ್ತಿದ್ದ ಕಬ್ಬಿನ ಲಾರಿಯು (ಟಿಎನ್‌28ಯು4779) ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಯೂರ್‌ ಹಾಗೂ ಅತುಲ್‌ ಅವರು ಕಬ್ಬಿನ ರಾಶಿಯ ನಡುವೆ ಸಿಕ್ಕಿಹಾಕಿಕೊಂಡರು. ತಕ್ಷಣವೇ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರಗೆ ತೆಗೆದುಯಡಬೆಟ್ಟದಲ್ಲಿರುವ ಸಿಮ್ಸ್‌ ಬೋಧನಾ ಆಸ್ಪತ್ರೆಗೆ ಕಳುಹಿಸಲಾಯಿತು. ಒಬ್ಬರು ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು.

ಲಾರಿ ಚಾಲಕ ಹಾಗೂ ಕ್ಲೀನರ್‌ ಪರಾರಿಯಾಗಿದ್ದಾರೆ. ಇಬ್ಬರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅತಿ ವೇಗ ಹಾಗೂ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಜನ: ಶನಿವಾರ ಸಂಜೆ 4.45ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಗಿತು. ಲಾರಿ ಬಿದ್ದಿದ್ದರಿಂದ ತಿರುವು ಬಳಿ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದಕ್ಕೂ ಹಾನಿಯಾಗಿದೆ.

ಕ್ಷಿಪ್ರ ಕಾರ್ಯಾಚರಣೆ: ಕಬ್ಬಿನ ‌ರಾಶಿಯ ಅಡಿಯಲ್ಲಿ ಇಬ್ಬರು ಸಿಕ್ಕಿಹಾಕಿಕೊಂಡಿರುವುದು ಖಚಿತವಾಗುತ್ತಿದ್ದಂತೆಯೇ ಸ್ಥಳೀಯರು ತಕ್ಷಣವೇ ಕಾರ್ಯಾಚರಣೆಗೆ ಇಳಿದರು. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯೂ ಜೊತೆಯಾದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಹೊರ ತೆಗೆದು ಆಂಬುಲೆನ್ಸ್‌ ಮೂಲಕ ಆಸ್ಪ‍ತ್ರೆಗೆ ಕಳುಹಿಸಲಾಯಿತು.

ಕಬ್ಬಿನ ರಾಶಿಯ ಅಡಿಯಲ್ಲಿ ಜನರು ಸಿಲುಕಿರುವ ಅನುಮಾನ ಬಂದಿದ್ದರಿಂದ ನಗರಸಭೆಯ ಎರಡು ಜೆಸಿಬಿ ಹಾಗೂ ಒಂದು ಕ್ರೇನ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಅದೃಷ್ಟವಶಾತ್‌ ಬೇರೆ ಯಾರೂ ಇರಲಿಲ್ಲ.

ಅಪಾಯಕಾರಿ ತಿರುವು

ಡೀವಿಯೇಷನ್‌ ರಸ್ತೆಯಲ್ಲಿ ಸಂತೇಮಹರಹಳ್ಳಿ ವೃತ್ತ ಹಾಗೂ ಭುವನೇಶ್ವರಿ ವೃತ್ತದ ನಡುವೆ ಸಿಗುವ ಈ ತಿರುವು ಕಡಿದಾಗಿದ್ದು, ಬಹಳ ಅಪಾಯಕಾರಿಯಾಗಿದೆ. ರಸ್ತೆ ಬದಿಯಲ್ಲಿ ಅಂಗಡಿಗಳು, ಮನೆಗಳು ಇವೆ. ವಾಹನಗಳು ನಿಧಾನವಾಗಿ ಬಂದರೆ ಯಾವುದೇ ಅಪಾಯ ಇರುವುದಿಲ್ಲ. ಆದರೆ ವೇಗವಾಗಿ ಬಂದು, ಏಕಾಏಕಿ ತಿರುವು ತೆಗೆದುಕೊಂಡರೆ ಅಪಘಾತ ಖಚಿತ.

ಈ ಹಿಂದೆಯೂ ಇಲ್ಲಿ ಕಬ್ಬಿನ ಲಾರಿ ಸೇರಿದಂತೆ ಸರಕು ತುಂಬಿದ್ದ ಲಾರಿಗಳು ಮಗುಚಿ ಬಿದ್ದಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ, ಅದೂ ನಗರದ ಮಧ್ಯೆ ಇಂತಹ ತಿರುವು ಇರಬಾರದು. ಇದರಿಂದ ಅಪಾಯವೇ ಹೆಚ್ಚು ಎಂದು ಹೇಳುತ್ತಾರೆ ಸಂಚಾರ ಪೊಲೀಸರು.

ಸಾರ್ವಜನಿಕರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘ತಿರುವು ಸಿಗದಂತೆ ಮಾಡಲು ಪರ್ಯಾಯ ವ್ಯವಸ್ಥೆ ಆಗಬೇಕು. ಆದಷ್ಟು ಬೇಗ ಹೊರ ವರ್ತುಲ ರಸ್ತೆ ನಿರ್ಮಾಣವಾದರೆ, ಈ ರಸ್ತೆಯನ್ನು ಬಳಸುವುದು ತಪ್ಪುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT