ಶನಿವಾರ, ಜೂನ್ 25, 2022
25 °C
ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸೇವೆ: ಜಿಲ್ಲೆಯ ಇಬ್ಬರು ಸಿಬ್ಬಂದಿಗೆ ಗೌರವ

ರಾಮು, ಸಿದ್ದರಾಮಗೆ ಮುಖ್ಯಮಂತ್ರಿ ಪದಕ

ಬಿ. ಬಸವರಾಜು, ಅವಿನ್‌ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಹನೂರು/ಕೊಳ್ಳೇಗಾಲ: ಅರಣ್ಯ, ವನ್ಯಜೀವಿ ಸಂರಕ್ಷಣೆ, ಅಕ್ರಮ ಕಡಿತಲೆ ಪತ್ತೆ, ಅರಣ್ಯ ಒತ್ತುವರಿ ತೆರವು ಸೇರಿದಂತೆ ಕಾಡಿನ ಸಂರಕ್ಷಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ನೀಡಲಾಗುವ ಮುಖ್ಯಮಂತ್ರಿಗಳ ಪದಕಕ್ಕೆ 2021ನೇ ಸಾಲಿನಲ್ಲಿ ಜಿಲ್ಲೆಯ ಇಬ್ಬರು ಆಯ್ಕೆಯಾಗಿದ್ದಾರೆ. 

ಅರಣ್ಯ ಇಲಾಖೆಯ ಚಾಮರಾಜನಗರದ ವೃತ್ತದ ಕಚೇರಿಯು ಈ ಪದಕಕ್ಕಾಗಿ ನಾಲ್ವರ ಹೆಸರನ್ನು ಶಿಫಾರಸು ಮಾಡಿತ್ತು. ಅವರಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮದ ಕೌದಳ್ಳಿ ವಲಯದಲ್ಲಿ ಉಪ ವಲಯ ಅರಣ್ಯ ಅಧಿಕಾರಿಯಾಗಿರುವ ಎಚ್‌.ರಾಮು ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯದಲ್ಲಿ ವಾಚರ್‌ ಆಗಿ (ಅರಣ್ಯ ವೀಕ್ಷಕ) ಕೆಲಸ ಮಾಡುತ್ತಿರುವ ಸಿದ್ದರಾಮ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. 

ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿ ಬೇಟೆ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ರಾಮು ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಸೇವೆಯನ್ನು ‍ಪರಿಗಣಿಸಿ ಜಿಲ್ಲೆಯ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಅವರ ಹೆಸರು ಶಿಫಾರಸು ಮಾಡಿದ್ದರು. 

ಕಳೆದ ಬಾರಿ ಮಲೆ ಮಹದೇಶ್ವರ ವನ್ಯಧಾಮದ ವಾಹನ ಚಾಲಕ ರಾಮು ಎಂಬುವವರು ಈ ಪದಕಕ್ಕೆ ಪಾತ್ರರಾಗಿದ್ದರು. 

1999ರಲ್ಲಿ ರಾಮಾಪುರ ವನ್ಯಜೀವಿ ವಲಯದಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ಆರಂಭಿಸಿದ ರಾಮು ಅವರು ಬಳಿಕ ಕೊತ್ತನೂರು, ಹನೂರು, ಮಹದೇಶ್ವರ ಬೆಟ್ಟ, ಪಾಲಾರ್ ಹಾಗೂ ಪೊನ್ನಾಚಿ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 30ಕ್ಕೂ ಹೆಚ್ಚು ಅಕ್ರಮ ನಾಡಬಂದೂಕುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ನೆರವಾಗಿದ್ದರು. 

ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ 2008ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಂದು ನಾಡಬಂದೂಕು ಹಾಗೂ 22 ಕೆ.ಜಿ ಶ್ರೀಗಂಧ, 2009ರಲ್ಲಿ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ 43 ಉರುಳುಗಳ ವಶ, 2013ರಲ್ಲಿ ಮಹದೇಶ್ವರ ಬೆಟ್ಟ ಶಾಖೆಯ ಪಾಲಾರ್‌ ಗಸ್ತಿನ ಬೆಂದುಕೋಬೆ ಅರಣ್ಯ ಪ್ರದೇಶದಲ್ಲಿ ಹುಲಿ ಬೇಟೆಯಾಡಲು ಯತ್ನಿಸಿದ್ದ ಒಡಿಶಾದ ಮೂವರ ಬಂಧನ, 2015ರಲ್ಲಿ ಸಾಕು ನಾಯಿಗಳೊಂದಿಗೆ ಜಿಂಕೆ ಬೇಟೆಯಾಡಿ ಬಿದರಳ್ಳಿ ಗ್ರಾಮದ ಮನೆಯಲ್ಲಿ‌ ಜಿಂಕೆ ಮಾಂಸ ವಶ, 2016ರಲ್ಲಿ ವಡಕೆಹಳ್ಳ ಗ್ರಾಮದ ಮನೆಯೊಂದರಲ್ಲಿ ಚಿರತೆ ಚರ್ಮ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಅದನ್ನು ವಶಪಡಿಸಿಕೊಂಡಿದ್ದು ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ರಾಮು ಅವರು ಭಾಗಿಯಾಗಿದ್ದಾರೆ. 

‘ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ವೀರಪ್ಪನ್ ಉಪಟಳ ಒಂದೆಡೆಯಾದರೆ ಕುಟುಂಬದವರ ಯೋಚನೆ ಇನ್ನೊಂದೆಡೆ ಎರಡನ್ನೂ ನಿಭಾಯಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಬೇಟೆ ಪ್ರಕರಣಗಳನ್ನು ಬೇದಿಸಲು ಹೋದ ಸಂದರ್ಭದಲ್ಲಿ ಒಮ್ಮೊಮ್ಮೆ ನಮ್ಮ ಮೇಲೆ‌ ಹಲ್ಲೆಗಳಾಗಿತ್ತು. ಇದರ ಮಧ್ಯೆ ಸ್ಥಳೀಯ ರಾಜಕೀಯ ಮುಖಂಡರ ಒತ್ತಡ.. ಇವೆರಡನ್ನೂ ಸರಿದೂಗಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಿತ್ತು. ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ಹಾಗೂ ಸಹದ್ಯೋಗಿಗಳು ನೀಡಿದ ಸಹಕಾರದಿಂದ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು’ ಎಂದು ರಾಮು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಡು: ನನ್ನ ಜೀವ, ಉಸಿರು’  

ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯದ ಸಿಬ್ಬಂದಿ ಸಿದ್ದರಾಮ ಅವರು 32 ವರ್ಷಗಳಿಂದ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. 

ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿರುವ ಅವರು ಆರಂಭದ 17 ವರ್ಷ ಚಿಕ್ಕಮಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಬಿಆರ್‌ಟಿಯ ಕೊಳ್ಳೇಗಾಲ ವಲಯದಲ್ಲಿ ಅವರ ಸೇವೆ ಮುಂದುವರಿದಿದೆ. 

ಇಲಾಖೆಯ ಸಿಬ್ಬಂದಿಯೊಡನೆ ಅರಣ್ಯದಲ್ಲಿ ಗಸ್ತು ತಿರುಗುವುದು, ಅರಣ್ಯ ಅಫರಾಧಗಳ ಪತ್ತೆ, ಬೆಂಕಿ ನಂದಿಸುವ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿರುವ ಸಿದ್ದರಾಮ ಅವರು, ಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕೆಲವು ಅಪರಾಧಗಳನ್ನು ಪತ್ತೆಹಚ್ಚುವುದರಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದಾರೆ. 

ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡ ಸಿದ್ದರಾಮ ಅವರು, ‘ಕಾಡು ನನ್ನ ಜೀವ, ಉಸಿರು. ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಕೆಲಸವನ್ನು ಇಲಾಖೆ ಗುರುತಿಸಿರುವುದು ಸಂತಸ ತಂದೆ. ನಾನು ಮತ್ತು ನಮ್ಮ ಅಧಿಕಾರಿಗಳು ಕಳ್ಳಬೇಟೆಗಾರರನ್ನು ಬಂಧಿಸುವ ಸಂದರ್ಭದಲ್ಲಿ ಬೇಟೆಗಾರ ನನಗೆ ಮಚ್ಚಿನಿಂದ ಹೊಡೆದಿರುವ ಘಟನೆಯೂ ನಡೆದಿತ್ತು. ಕಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡುತ್ತಾ ಬಂದಿದ್ದೇನೆ. ನನ್ನ ಈ ಸಾಧನೆಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಕಾರಣ’ ಎಂದರು.

--

ಜಿಲ್ಲೆಯಿಂದ ನಾಲ್ವರು ಸಿಬ್ಬಂದಿಯ ಹೆಸರುಗಳನ್ನು ನಾವು ಶಿಫಾರಸು ಮಾಡಿದ್ದೆವು. ಈ ಪೈಕಿ ಇಬ್ಬರನ್ನು ಮುಖ್ಯಮಂತ್ರಿ ಪದಕಗಳಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ
ಉಪೇಂದ್ರ ಪ್ರತಾಪ್‌ ಸಿಂಗ್‌, ಸಿಸಿಎಫ್‌, ಚಾಮರಾಜನಗರ

--

ಕಳೆದ ವರ್ಷವೂ ನಮ್ಮ ವಿಭಾಗದ ಸಿಬ್ಬಂದಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದರು.‌ ಈ ಬಾರಿಯೂ ಆಯ್ಕೆ ತಂದಿರುವುದು ಅವರ ಕಾರ್ಯಕ್ಷಮತೆಗೆ ಸಿಕ್ಕ ಫಲ
ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

--

ಬಿಆರ್‌ಟಿಯ ಕೊಳ್ಳೇಗಾಲದ ವಲಯದ ಸಿಬ್ಬಂದಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವುದು ಖುಷಿಯ ಸಂಗತಿ. ಕಾಡಿನ ರಕ್ಷಣೆಯಲ್ಲಿ ಅವರ ಸೇವೆಗೆ ಸಿಕ್ಕ ಗೌರವ
ಡಾ.ಜಿ.ಸಂತೋಷ್‌ಕುಮಾರ್‌, ಡಿಸಿಎಫ್‌, ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.