ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆಗೆ ಒಲಿದ ಮುಖ್ಯಮಂತ್ರಿ ಪದಕ

ಮಹದೇಶ್ವರ ವನ್ಯಧಾಮದಲ್ಲಿ ಅರಣ್ಯ ಇಲಾಖೆ ವಾಹನದ ಚಾಲಕ ರಾಮು‌
Last Updated 12 ಮಾರ್ಚ್ 2020, 19:39 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ. ರಾಮು ಅವರು ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗರಗನಹಳ್ಳಿ ಗ್ರಾಮದವರಾದ ರಾಮು ಅವರು 1988ರಲ್ಲಿ ದಿನಗೂಲಿ ನೌಕರರಾಗಿ ಅರಣ್ಯ ಇಲಾಖೆಗೆ ಸೇರಿದ್ದರು. ತಾಲ್ಲೂಕಿನ ವಿವಿಧ ಕಡೆಗಳಲ್ಲಿ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯದಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿ, ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನೂ ರಾಮು ಅವರು ಗಳಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ರಾಮು ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸರ್ಕಾರ ಮುಖ್ಯಮಂತ್ರಿ ಪದಕಕ್ಕೆ ಅವರನ್ನು ಆಯ್ಕೆ ಮಾಡಿದೆ.

ವೀರಪ್ಪನ್‌ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗಿ: ಪ್ರಮುಖ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾದ ರಾಮು ಅವರಿಗೆ ಈಗಾಗಲೇ ಇಲಾಖಾ ಮಟ್ಟದಲ್ಲಿ ಹಲವು ಬಹುಮಾನಗಳು ಬಂದಿವೆ‌.

2005ರಲ್ಲಿ ಮೂರು ಜೊತೆ ಆನೆ ದಂತ ಕಳವು ಪ್ರಕರಣವನ್ನು ಪತ್ತೆ ಹಚ್ಚಿದ್ದಕ್ಕಾಗಿ ಅಂದಿನ ಸಿಸಿಎಫ್‌ (ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ನಾಗರಾಜು ಅವರು ಭಾರತ ಸರ್ಕಾರದಿಂದ ₹ 1,000 ನಗದು ಬಹುಮಾನ ರಾಮು ಅವರಿಗೆ ಬರುವಂತೆ ಮಾಡಿದ್ದರು. 2006ರಲ್ಲಿ ಗೋಪಿನಾಥಂ ಸಮೀಪದ ಕೋಟೆಯೂರಿನಲ್ಲಿ ವಿದ್ಯುತ್ ಹರಿಸಿ ಆನೆ ಕೊಂದು ಎರಡು ದಂತವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಕ್ಕಾಗಿ ಇವರಿಗೆ ₹1,000 ನಗದು ಬಹುಮಾನ ಸಿಕ್ಕಿತ್ತು.

ಮಿಣ್ಯಂನಲ್ಲಿ ಚಿರತೆ ಚರ್ಮ ಸಾಗಣೆ ಮಾಡುತ್ತಿದ್ದ ಆರೋಪಿ ಪತ್ತೆ ಸೇರಿದಂತೆ ಹಲವು ಕಾರ್ಯಚರಣೆಯಲ್ಲಿ ಇವರು ಪಾಲ್ಗೊಂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಅರಣ್ಯದಲ್ಲಿ ದಂತಚೋರ, ಕಾಡುಗಳ್ಳ ವೀರಪ್ಪನ್‌ ಅಟ್ಟಹಾಸ ಹಾಕುತ್ತಿದ್ದ ಸಂದರ್ಭದಲ್ಲಿ ರಾಮು ಅವರು ಕರ್ತವ್ಯ ನಿರ್ವಹಿಸಿದ್ದಾರೆ.

ಪಿ.ಶ್ರೀನಿವಾಸ್‌ ಒಡನಾಟ

ವೀರಪ್ಪನ್‌ನಿಂದ ಹತ್ಯೆಗೀಡಾದ ಅರಣ್ಯ ಅಧಿಕಾರಿ ಪಿ.ಶ್ರೀನಿವಾಸ್‌ ಅವರೊಂದಿಗೆ ಕೆಲಸ ಮಾಡಿರುವ ಅನುಭವ ರಾಮು ಅವರಿಗಿದೆ.

‘ಕೊಳ್ಳೇಗಾಲದ ಅರಣ್ಯ ಇಲಾಖೆಯಲ್ಲಿ ಚಾಲಕ ವೃತ್ತಿ ಖಾಲಿ ಇದೆ ಎಂದು ತಿಳಿದು ಸೇರಿದೆ. ಬಳಿಕ ಕೌದಳ್ಳಿ ನಂತರ ಗೋಪಿನಾಥಂ ವರ್ಗ ಮಾಡಿದರು. ಮೊದಲಿಗೆ ಗೋಪಿನಾಥಂ ಎಂದಾಗ ಭಯವಾಗಿತ್ತು. ಆದರೆ ಅಂದು ನಾನಿದ್ದ ಪರಿಸ್ಥಿತಿ ಹೋಗುವಂತೆ ಮಾಡಿತ್ತು. ಭಯದಿಂದಲೇ ಅಲ್ಲಿಗೆ ಹೋದ ನನಗೆ ಧೈರ್ಯ ತುಂಬಿ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು ದಿವಂಗತ ಪಿ. ಶ್ರೀನಿವಾಸ್’ ಎಂದು ನೆನಪಿಸಿಕೊಳ್ಳುತ್ತಾರೆ ರಾಮು.

‘ನಾಲ್ಕು ವರ್ಷಗಳ ಕಾಲ ಅವರೊಂದಿಗೆ ಕೆಲಸ ಮಾಡಿದೆ. 1990ರಲ್ಲಿ ವೀರಪ್ಪನ್ ಸಹಚರರು ನಮ್ಮ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ವೀರಪ್ಪನ್‌ ಉಪಟಳ ಇದ್ದಾಗ ಮೂರು ತಿಂಗಳಿಗೊಮ್ಮೆ ಮನೆಗೆ ಹೋಗುತ್ತಿದ್ದೆವು’ ಎಂದು ಅಂದಿನ ಪರಿಸ್ಥಿತಿಯನ್ನು ‘ಪ್ರಜಾವಾಣಿ’ ಮುಂದೆ ಅವರು ಬಿಚ್ಚಿಟ್ಟರು.

‘ನನ್ನ ಮಕ್ಕಳು ಈಗ ಓದುತ್ತಿದ್ದಾರೆ. ಅವರು ಕೂಡ ಅರಣ್ಯ ಇಲಾಖೆ ಸೇರಬೇಕು ಎಂಬುದು ನನ್ನ ಬಯಕೆ’ ಎಂದು ಅವರು ಹೇಳಿದರು.

ಇತರರಿಗೆ ಮಾದರಿ: ಡಿಸಿಎಫ್‌

ತಮ್ಮ ವನ್ಯಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವುದಕ್ಕೆ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಸುದೀರ್ಘ 32 ವರ್ಷ ಕಾಲ ಕರ್ತವ್ಯ ಸಲ್ಲಿಸಿರುವ ರಾಮು ಅವರ ಸೇವೆ ಶ್ಲಾಘನೀಯ. ಅವರ ಸೇವೆಯನ್ನು ಗುರುತಿಸಿರುವುದು ಸಂತಸದ ವಿಚಾರ. ಅರಣ್ಯಕ್ಕೆ ಬೆಂಕಿ ಬಿದ್ದರೆ ಈಗಲೂ ಸಿಬ್ಬಂದಿ ಜೊತೆ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಾರೆ. ತಮ್ಮ ಕೆಲಸ ಕೇವಲ ವಾಹನ ಚಾಲನೆ ಮಾಡುವುದು ಎಂದುಕೊಂಡಿರುವ ಇಲಾಖೆಯ ವಾಹನ ಚಾಲಕರಿಗೆ ರಾಮು ಮಾದರಿಯಾಗಿದ್ದಾರೆ’ ಎಂದು ಏಡುಕುಂಡಲು ಅವರು ಹೇಳಿದರು.

ಡಿಆರ್‌ಎಫ್‌ಒ ಪ್ರಭುಸ್ವಾಮಿಯೂ ಆಯ್ಕೆ

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯ ಅಧಿಕಾರಿಯಾಗಿ (ಡಿಆರ್‌ಎಫ್‌ಒ) ಕರ್ತವ್ಯ ನಿರ್ವಹಿಸುತ್ತಿರುವ ಸಿ.ಪ್ರಭುಸ್ವಾಮಿ ಅವರು ಕೂಡ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ 17 ಅರಣ್ಯ ಅಪರಾಧಗಳನ್ನು ಇವರು ದಾಖಲು ಮಾಡಿದ್ದಾರೆ. 2012–13ರಲ್ಲಿ ಅಂತರರಾಷ್ಟ್ರೀಯ ಹುಲಿ ಹಂತಕರ ತಂಡವನ್ನು ಪತ್ತೆ ಮಾಡಿ ಜಾ ಟ್ರ್ಯಾಪ್‌ ಹಾಗೂ ಚಿರತೆಯ ಉಗುರುಗಳನ್ನು ವಶಪಡಿಸಿಕೊಂಡು, ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ಸಿಗುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT