ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದದಲ್ಲಿ ಗಮನ ಬೇರೆಡೆಗೆ ಸೆಳೆದು ₹2 ಲಕ್ಷ ಕಳ್ಳತನ

ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲೇ ಘಟನೆ
Last Updated 23 ಅಕ್ಟೋಬರ್ 2021, 15:42 IST
ಅಕ್ಷರ ಗಾತ್ರ

ಚಾಮರಾಜನಗರ: ಶಿಕ್ಷಕರೊಬ್ಬರ ಗಮನವನ್ನು ಬೇರೆ ಕಡೆ ಸೆಳೆದು ₹2 ಲಕ್ಷ ನಗದನ್ನು ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಜನನಿಬಿಡ ಭುವನೇಶ್ವರಿ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ನಗರದ ನಿವಾಸಿ ಶಿವಕುಮಾರ್‌ ಅವರು ಹಣಕಳೆದುಕೊಂಡವರು. ನಾಲ್ಕು ಜನರ ತಂಡ ಈ ಕೃತ್ಯ ಎಸಗಿದ್ದಾರೆ ಎಂದು ನಂಬಲಾಗಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ವಿವರ: ಕಾಳನಹುಂಡಿ ಶಾಲೆಯಲ್ಲಿ ಶಿಕ್ಷಕರಾಗಿರುವ ಶಿವಕುಮಾರ್‌ ಅವರು ನಂಜನಗೂಡಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಕೆಲಸದವರಿಗೆ ಸಂಬಳ ಕೊಡುವುದಕ್ಕಾಗಿ ಮನೆಯಿಂದ ಒಂದು ಲಕ್ಷ ನಗದು ತೆಗೆದುಕೊಂಡು ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ಹೋಗಿ, ಬ್ಯಾಂಕ್‌ನಿಂದ ಒಂದು ಲಕ್ಷ ನಗದು ಪಡೆದು ಚೀಲದಲ್ಲಿ ಹಾಕಿಕೊಂಡು ನಂಜನಗೂಡಿಗೆ ಹೋ‌ಗುವುದಕ್ಕಾಗಿ ಭುವನೇಶ್ವರಿ ವೃತ್ತದತ್ತ ಹೊರಟಿದ್ದರು.

ಈ ಸಂದರ್ಭದಲ್ಲಿ ಅವರನ್ನು ಹಿಂಬಾಲಿಸಿದ ವ್ಯಕ್ತಿಯೊಬ್ಬ ಕುತ್ತಿಗೆ ಭಾಗಕ್ಕೆ ರಾಸಾಯನಿಕ ವಸ್ತುವನ್ನು ಚಿಮುಕಿಸಿದ ಎನ್ನಲಾಗಿದೆ.

ಭುವನೇಶ್ವರಿ ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕತ್ತಿನ ಭಾಗದಲ್ಲಿ ಉರಿಯುವುದಕ್ಕೆ ಆರಂಭವಾಗಿದ್ದರಿಂದ ಶಿವಕುಮಾರ್‌ ಅವರು ಹಣದ ಚೀಲವನ್ನು ಅಂಗಡಿಯೊಂದರ ಎದುರು ಇಟ್ಟು, ಅಂಗಿಯನ್ನು ತೆಗೆದು ಉರಿಯುತ್ತಿದ್ದ ಜಾಗಕ್ಕೆ ನೀರು ಹಾಕಿ ತೊಳೆಯಲು ಹೊರಡುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ಕಳ್ಳ, ಅವರಿಗೆ ಕೈಗೆ ನೀರು ಹಾಕಲು ಸಹಾಯ ಮಾಡುತ್ತಾನೆ. ಹಿಂದಿದ್ದ ಮತ್ತೊಬ್ಬ ಕಳ್ಳ, ಹಣದ ಚೀಲವನ್ನು ಎತ್ತಿಕೊಂಡು ಓಡುತ್ತಾನೆ. ಆಗ ನೀರು ಹಾಕಿದ ಕಳ್ಳ ಕೂಡ ಅಲ್ಲಿಂದ ಮುಂದೆ ಹೋಗಿ ಬೈಕೊಂದರಲ್ಲಿ ಕುಳಿತುಕೊಂಡು ಹೋಗುವ ದೃಶ್ಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದದಲ್ಲಿ ಸೆರೆಯಾಗಿದೆ.

ಕನ್ನಡ ಮಾತನಾಡುತ್ತಿದ್ದ, ಮಾಸ್ಕ್‌ ಧರಿಸಿದ್ದ

‘ಶಿವಕುಮಾರ್‌ ಅವರ ಜೊತೆ ಮಾತನಾಡಿದ ವ್ಯಕ್ತಿ ಮಾಸ್ಕ್‌ ಧರಿಸಿದ್ದ. ಕನ್ನಡದಲ್ಲೇ ಮಾತನಾಡಿದ್ದ. ಈ ಸಂಬಂಧ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಸಿಸಿಟಿವಿಗಳಲ್ಲಿ ದೃಶ್ಯಾವಳಿ ಸೆರೆಯಾಗಿವೆ. ಮೂರು ಜನರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಮಾಸ್ಕ್‌ ಧರಿಸಿದ್ದರಿಂದ ಆರೋಪಿಗಳ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ’ ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಗಳು ಸ್ಥಳೀಯರೇ ಅಥವಾ ಹೊರಗಿನವರೇ ಎಂಬುದು ಗೊತ್ತಾಗಿಲ್ಲ. ಆದರೆ, ಬ್ಯಾಂಕ್‌ನಿಂದಲೇ ಶಿವಕಮಾರ್‌ ಅವರನ್ನು ಗಮನಿಸಿ ಹಿಂಬಾಲಿಸಿದ್ದಾರೆ. ಹಿಂದೆ ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲೂ ಇಂತಹ ಪ್ರಕರಣ ನಡೆದಿದ್ದು, ಅಲ್ಲಿನ ಪೊಲೀಸರ ನೆರವು ಪಡೆದು ಕಾರ್ಯಾಚರಣೆ ನಡೆಸಲಾಗುವುದು. ಶೀಘ್ರ ಕಳ್ಳರನ್ನು ಪತ್ತೆ ಹಚ್ಚಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT