ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಅನಧಿಕೃತ ಮಾರಾಟ ಹಾವಳಿ

‘ಪ್ರಜಾವಾಣಿ’ ಫೋನ್ ಇನ್‌: ಕ್ರಮ ಕೈಗೊಳ್ಳುವ ಭರವಸೆ ನೀಡಿದ ಉಪ ಆಯುಕ್ತ ನಾಗಶಯನ
Last Updated 28 ಜನವರಿ 2023, 6:17 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮೀಣ ಭಾಗ, ಕಾಡಂಚಿನ ಭಾಗಗಳಲ್ಲಿ, ಪೋಡುಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮನೆಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ಶಾಲಾ, ಕಾಲೇಜು, ಆಸ್ಪತ್ರೆಗಳ ಬಳಿಯಲ್ಲಿಯೇ ಮದ್ಯದ ಅಂಗಡಿಗಳಿವೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂಗಡಿಗಳನ್ನು ತೆರೆಯುತ್ತಾರೆ. ನಿಯಮ ಉಲ್ಲಂಘಿಸಿ ಮಾರಾಟವನ್ನೂ ಮಾಡುತ್ತಾರೆ...

‘ಪ್ರಜಾವಾಣಿ’ಯು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ಅವರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಓದುಗರು ಇಂತಹ ಹಲವಾರು ದೂರುಗಳನ್ನು ಹೇಳಿದರು. ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ 27ಕ್ಕೂ ಹೆಚ್ಚು ಕರೆಗಳು ಬಂದಿದ್ದು, 20 ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಯಿತು.

ಓದುಗರ ದೂರುಗಳು ಹಾಗೂ ಸಲಹೆಗಳಿಗೆ ಸ್ಪಂದಿಸಿದ ಅಬಕಾರಿ ಉಪ ಆಯುಕ್ತರು ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದರು.

ಕಠಿಣ ಕ್ರಮ ಕೈಗೊಳ್ಳಿ: ಹನೂರು ತಾಲ್ಲೂಕಿನಿಂದ ಕರೆ ಮಾಡಿದ್ದ ಸೋಲಿಗರ ಮುಖಂಡರಾದ ಮುತ್ತಯ್ಯ ಹಾಗೂ ಸಿ.ಮಹದೇವು ಅವರು, ‘ಕಾಡಂಚಿನ ಗ್ರಾಮಗಳಲ್ಲಿ ಆದಿವಾಸಿಗಳು ವಾಸಿಸುವ ಪೋಡುಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ, ಸಣ್ಣ ಅಂಗಡಿಗಳಲ್ಲಿ, ಗ್ರಾಮಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲವು ಮನೆಗಳಲ್ಲಿ ಕೂಡ ಮದ್ಯ ಸಿಗುತ್ತಿದೆ. ಮದ್ಯ ಸೇವನೆ ಅಭ್ಯಾಸ ಹೋಗಿ ದುರಾಭ್ಯಾಸ ಆಗಿದೆ. ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಎಲ್ಲೆಂದರಲ್ಲಿ ಮದ್ಯ ಲಭ್ಯತೆಗೆ ಅಬಕಾರಿ ಇಲಾಖೆ ಕಡಿವಾಣ ಹಾಕಬೇಕು. ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನಾಗಶಯನ, ‘ಪರವಾನಗಿ ಪಡೆದವರು ಮಾತ್ರ ಮದ್ಯ ಮಾರಾಟ ಮಾಡಬೇಕು. ಉಳಿದವರಿಗೆ ಅವಕಾಶ ಇಲ್ಲ. ಆದರೆ, ಒಬ್ಬ ವ್ಯಕ್ತಿ 2.3 ಲೀಟರ್‌ಗಳಷ್ಟು ಮದ್ಯವನ್ನು ಸ್ವಂತ ಬಳಕೆಗೆ ಹೊಂದಿರಬಹುದು ಎಂಬ ನಿಯಮ ಇದೆ. ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ನಾವು ನಿಗಾ ಇಟ್ಟಿದ್ದೇವೆ. ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದ್ದೇವೆ. ಮುಂದೆಯೇ ಆ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಆದಿವಾಸಿಗಳಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸ
ಲಾಗುವುದು. ತಿಂಗಳಿಗೆ ಕನಿಷ್ಠ ಒಂದು ಗ್ರಾಮಸಭೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದರು.

ಅವಧಿಗೂ ಮುನ್ನ ಮಾರಾಟ: ‘ಮದ್ಯದ ಅಂಗಡಿಗಳ ಮಾಲೀಕರು ಅವಧಿಗೂ ಮುನ್ನ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೆಲವು ಊರುಗಳಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಮದ್ಯ ಸಿಗುತ್ತಿದೆ’ ಎಂದು ಗುಂಡ್ಲುಪೇಟೆ ಹಂಗಳದಿಂದ ಕರೆ ಮಾಡಿದ್ದ ನಂಜಪ್ಪ, ಗುಂಡ್ಲುಪೇಟೆಯ ಅಬ್ದುಲ್‌ ಮಲಿಕ್‌, ‘ಕೊಳ್ಳೇಗಾಲದಲ್ಲಿ ಕೆಲವು ಬಾರ್‌ಗಳು ಬೆಳಿಗ್ಗೆ 7 ಗಂಟೆಗೆಲ್ಲ ತೆರೆಯುತ್ತಿವೆ’ ಎಂದು ಸ್ಥಳೀಯ ನಿವಾಸಿ ಪರಶಿವ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಉಪ ಆಯುಕ್ತರು, ‘ಪ್ರತಿಯೊಂದು ಪರವಾನಗಿಗೂ ಸಮಯ ನಿಗದಿ ಪಡಿಸಲಾಗಿದೆ. ಪರವಾನಗಿ ಪಡೆದವರು ಅದರಂತೆ ವ್ಯವಹಾರ ನಡೆಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ
ಯನ್ನು ಎಲ್ಲ ಕಡೆಗಳಿಗೆ ಕಳುಹಿಸಿ, ವಹಿ
ವಾಟಿನ ಮೇಲೆ ನಿಗಾ ಇಡಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸ
ಲಾಗುವುದು’ ಎಂದರು.

ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿಯಿಂದ ಕರೆಮಾಡಿದ್ದ ಪ್ರಶಾಂತ್‌, ‘ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮಾರಾಟದ ಬಗ್ಗೆ ಗಮನ ಸೆಳೆದರಲ್ಲದೆ, ಚಾಮರಾಜನಗರದಲ್ಲಿ ಸಿಎಲ್‌2 ಪರವಾನಗಿ ಹೊಂದಿರುವ ಕೆಲವು ಮಳಿಗೆಗಳು ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದಾರೆ. ರೆಸ್ಟೋರೆಂಟ್‌ ನಡೆಸುತ್ತಿದ್ದಾರೆ. ಸಿಎಲ್‌7 ಪರವನಾಗಿ ಪಡೆದವರೂ ನಿಯಮ ಉಲ್ಲಂಘಿಸಿ ಅಲ್ಲಿಯೇ ಸೇವನೆಗೆ ಅವಕಾಶ ನೀಡುತ್ತಿದ್ದಾರೆ’ ಎಂದರು.

ನಾಗಶಯನ ಮಾತನಾಡಿ, ‘ಪರವಾನಗಿ ಪಡೆದವರು ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ
ಕೊಂಡು ₹50 ಸಾವಿರದವರೆಗೂ ದಂಡ ವಿಧಿಸಲಾಗುತ್ತಿದೆ. ಅಂಗಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. 21–22ರಲ್ಲಿ 380 ಪ್ರಕರಣಗಳನ್ನು ದಾಖಲಿಸಿದ್ದೇವೆ. ಸಿಎಲ್‌7 ಪರವಾನಗಿ ಪಡೆದವರು ತಮ್ಮ ಗ್ರಾಹಕರು ಎಂಬ ನೆಲೆಯಲ್ಲಿ
ಮದ್ಯ ಪೂರೈಸಲು ಅವಕಾಶ ಇದೆ’ ಎಂದರು.

ಪ್ರಭಾವಿಗಳೇ ಭಾಗಿ: ಹನೂರು ತಾಲ್ಲೂಕಿನ ಚೆನ್ನಲಿಂಗನಹಳ್ಳಿಯಿಂದ ಕರೆ ಮಾಡಿದ್ದ ಸಿದ್ದರಾಜು, ಪುನೀತ್‌ ಹಾಗೂ ಮಹದೇವಸ್ವಾಮಿ ಕರೆ ಮಾಡಿ, ‘ಗ್ರಾಮದಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟವಾಗುತ್ತಿದ್ದು, ಪ್ರಭಾವಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ. ನಾವು ದೂರು ಕೊಟ್ಟಾಗ ಅಬಕಾರಿ ಅಧಿಕಾರಿಗಳು ಒಮ್ಮೆ ಬಂದು ಎಚ್ಚರಿಕೆ ನೀಡಿದ್ದು ಬಿಟ್ಟರೆ
ಬೇರೇನೂ ಕ್ರಮವಾಗಿಲ್ಲ’ ಎಂದು ದೂರಿದರು.

ಉಪ ಆಯುಕ್ತರು ಮಾತನಾಡಿ, ‘ಗ್ರಾಮಕ್ಕೆ ಖುದ್ದು ನಾನೇ ಭೇಟಿ ನೀಡುತ್ತೇನೆ. ಕಾರ್ಯಾಚರಣೆಯೂ ನಡೆಸುತ್ತೇವೆ. ಪ್ರಭಾವಿಗಳು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಪಾವಿತ್ರ್ಯ ಕಾಪಾಡಿ: ಮಹ
ದೇಶ್ವರ ಬೆಟ್ಟದಿಂದ ಕರೆ ಮಾಡಿದ್ದ ರಾಜ ಎಂಬುವ
ವರು, ‘ಮಹದೇಶ್ವರ ಬೆಟ್ಟ ಪ್ರಸಿದ್ಧ ಯಾತ್ರಾ ಸ್ಥಳ ಪವಿತ್ರವಾದ ಜಾಗ. ಇಲ್ಲಿ ಮದ್ಯದ ಅಂಗಡಿ
ಗಳಿಲ್ಲ. ಹಾಗಿದ್ದರೂ, ಎಲ್ಲೆಂದರಲ್ಲಿ ಮದ್ಯ ಸಿಗುತ್ತಿದೆ. ಪೊಲೀಸರು, ಅಬಕಾರಿ ಇಲಾಖೆಯ ಅಧಿಕಾರಿ
ಗಳಿಗೆ ಗೊತ್ತಿದ್ದರೂ ಸುಮ್ಮನಿ
ದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಡಿ. ಜನರು ಹಾಳಾಗುತ್ತಿದ್ದಾರೆ. ಕ್ಷೇತ್ರದ ಪಾವಿತ್ರ್ಯ ಕಾಪಾಡಿ’ ಎಂದು ಮನವಿ ಮಾಡಿದರು.

‘ಮಹದೇಶ್ವರ ಬೆಟ್ಟದಲ್ಲಿ ನಾವು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಪ್ರಕರಣಗಳನ್ನೂ ದಾಖಲಿಸುತ್ತಿದ್ದೇವೆ. ಈಗ ದಂಡದ ಪ್ರಮಾಣ ₹5000 ಅಷ್ಟೇ ಇದೆ. ಅದನ್ನು ₹50 ಸಾವಿರಕ್ಕೆ ಏರಿಸಬೇಕು ಎಂಬ ಪ್ರಸ್ತಾವ ಇದೆ. ಜೈಲು ಶಿಕ್ಷೆಯನ್ನು ವಿಧಿಸಬೇಕು ಎಂದು ಚಿಂತಿಸಲಾಗುತ್ತಿದೆ. ಅದು ಜಾರಿಗೆ ಬಂದರೆ ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಲಿದೆ’ ಎಂದು ಉಪ ಆಯುಕ್ತ ನಾಗಶಯನ ಹೇಳಿದರು.

ಅಬಕಾರಿ ಉಪ ಸೂಪರಿಂಟೆಂ
ಡೆಂಟ್‌ ಎಂ.ಡಿ.ಮೋಹನ್‌ ಕುಮಾರ್‌ ಹಾಗೂ ಅಬಕಾರಿ ಇನ್‌ಸ್ಪೆಕ್ಟರ್‌ ಮಹದೇವ ಎಂ.ಸಿ. ಇದ್ದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT