ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಅಪರಿಚಿತ ಶವ ಪತ್ತೆ ಪ್ರಕರಣ

ಮಹದೇಶ್ವರ ಬೆಟ್ಟ ವನ್ಯಧಾಮ: ವಾರದಲ್ಲಿ ಮೂರು ಮೃತದೇಹಗಳ ಪತ್ತೆ, ಒಬ್ಬರ ಗುರುತು ಪತ್ತೆ
Last Updated 9 ಮೇ 2022, 16:02 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ವ್ಯಾಪ್ತಿಯಲ್ಲಿ ಅಪರಿಚಿತ ಶವಗಳು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾರದ ಅವಧಿಯಲ್ಲಿ ಮೂರು ಮೃತದೇಹಗಳು ಸಿಕ್ಕಿವೆ.

ಕೌದಳ್ಳಿ, ವಡಕೆಹಳ್ಳ ಹಾಗೂ ತಾಳುಬೆಟ್ಟದ ನಡುವೆ, ಮಲೆಮಹದೇಶ್ವರ ವನ್ಯಧಾಮದ ರಾಮಾಪುರ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿಇಬ್ಬರ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇನ್ನೊಂದು ಶವ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿತ್ತು.

ಮೇ 4ರಂದು ಒಂದೇ ದಿನ ಕುರಟ್ಟಿ ಹೊಸೂರು ಮತ್ತು ತಾಳಬೆಟ್ಟದ ಮುಖ್ಯ ರಸ್ತೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಪೈಕಿ ಒಬ್ಬರ ಗುರುತು ಪತ್ತೆಯಾಗಿದೆ. ವ್ಯಕ್ತಿಯು ಧರಿಸಿದ ಅಂಗಿಯ ಜೇಬಿನಲ್ಲಿದ್ದ ಗುರುತಿನ ಚೀಟಿ ಆಧರಿಸಿ ಮೃತಪಟ್ಟವರು ಬೆಂಗಳೂರಿನ ಅರ್ಜುನಹಳ್ಳಿಯ ಮಹದೇವಯ್ಯ ಎಂಬುದು ಗೊತ್ತಾಗಿತ್ತು.

ಮಲೆಮಹದೇಶ್ವರ ವನ್ಯಧಾಮದ ತಾಳಬೆಟ್ಟದ ಬಳಿ ಶನಿವಾರ (ಮೇ 7) 55 ವರ್ಷದ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ವ್ಯಕ್ತಿಯನ್ನು ಕೊಲೆ ಮಾಡಿ ಶವವನ್ನು ಇಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ವ್ಯಕ್ತಿಯ ಕತ್ತು ಸೀಳಿ,ಸುತ್ತಲೂ ಬಟ್ಟೆ ಸುತ್ತಲಾಗಿದೆ. ಸ್ಥಳೀಯ ಅರಣ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೂರೂ ಶವಗಳು, ಘಟನೆ ನಡೆದ ಹಲವು ದಿನಗಳ ನಂತರ ಪತ್ತೆಯಾಗಿವೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ ಎಂದು ಹೇಳುತ್ತಾರೆ ‍ಪೊಲೀಸರು.

ಮೂರು ಪ್ರಕರಣಗಳು ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯ ಆಸುಪಾಸಿನಲ್ಲಿ ವರದಿಯಾಗಿವೆ. ರಸ್ತೆಯ ಅಲ್ಲಲ್ಲಿ ಸವಾರರು ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದು ಸಾರ್ವಜನಿಕರ ವಾದ.

‘ವಾಹನಗಳನ್ನು ನಿಲ್ಲಿಸಲು ಹಾಗೂ ಅರಣ್ಯದೊಳಗೆ ಪ್ರವೇಶಿಸಲು ಯಾರಿಗೂ ಅವಕಾಶ ಕೊಡಬಾರದು. ಮೊದಲೆಲ್ಲಾ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದರೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದರು. ಈಗ ಅದು ಸ್ಥಗಿತಗೊಂಡಿದೆ ಈ ಬಗ್ಗೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

---

ರಸ್ತೆಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ಜನರು ಅರಣ್ಯದ ಒಳಗೆ ಪ್ರವೇಶಿಸಲೂ ಬಾರದು. ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸಿಬ್ಬಂದಿ ನೇಮಿಸಿ ಗಸ್ತು ಹೆಚ್ಚಿಸಲಾಗುವುದು
ವಿ.ಏಡುಕುಂಡಲು. ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

––

ಸ್ಥಳ ಪರಿಶೀಲನೆ ನಡೆಸಿದ್ದೇನೆ. ಶವಗಳು ಕೊಳೆತಿರುವುದರಿಂದ ಇಬ್ಬರ ಗುರುತು ಪತ್ತೆಯಾಗಿಲ್ಲ, ಅರಣ್ಯ ಇಲಾಖೆ ಸಹಕಾರ ಪಡೆದು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು
ನಾಗರಾಜು, ಡಿವೈಎಸ್‌ಪಿ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT