ಸೋಮವಾರ, ಜುಲೈ 4, 2022
22 °C
ಕೇಂದ್ರದ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನ, 29 ಸಾವಿರ ಜಾನುವಾರುಗಳು ಬಾಕಿ

ಚಾಮರಾಜನಗರ: 2.30 ಲಕ್ಷ ರಾಸುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇಂದ್ರ ಸರ್ಕಾರದ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆ (ಎನ್‌ಡಿಡಿಬಿ) ರೂಪಿಸಿರುವ ಜಾನುವಾರುಗಳಿಗೆ (ಹಸು, ಎತ್ತು, ಎಮ್ಮೆ, ಕೋಣ) ಆಧಾರ್‌ ಮಾದರಿಯಲ್ಲಿ 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದ್ದು, ಶೇ 89ರಷ್ಟು ಪೂರ್ಣವಾಗಿದೆ.

ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವೆಗಳ ಇಲಾಖೆಯಲ್ಲಿನ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 2,59, 279 ಜಾನುವಾರುಗಳಿವೆ. ಈ ಪೈಕಿ 2.30 ಲಕ್ಷ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗಿದೆ. ರಾಸುಗಳ ಕಿವಿಗೆ ಸಂಖ್ಯೆ ಹಾಗೂ ಬಾರ್‌ಕೋಡ್‌ ಹೊಂದಿರುವ ಟ್ಯಾಗ್ (ಕಿವಿಯೋಲೆ) ಅಳವಡಿಸಲಾಗಿದೆ. 

ಯೋಜನೆಯ ವಿವರ: ದೇಶದಲ್ಲಿರುವ ಜಾನುವಾರುಗಳ ಸಂಪೂರ್ಣ ಮಾಹಿತಿ ದಾಖಲಿಸುವ ಉದ್ದೇಶದಿಂದ ರೂಪಿಸಲಾಗಿರುವ ಕಾರ್ಯಕ್ರಮ ಇದು. ಯೋಜನೆ ಪೂರ್ಣವಾಗಿ ಅನುಷ್ಠಾನವಾದರೆ, ಎಲ್ಲ ಜಾನುವಾರುಗಳ ಮಾಹಿತಿಗಳನ್ನು ಮೊಬೈಲ್‌ ಇಲ್ಲವೇ ಕಂಪ್ಯೂಟರ್‌ ಮೂಲಕ ಕ್ಷಣಾರ್ಧದಲ್ಲಿ ತಿಳಿಯಬಹುದು. 

ಜಾನುವಾರುಗಳ ಮಾಲೀಕರ ಹೆಸರು, ಅವರ ವಿವರಗಳು, ದನಕರುಗಳ ಆರೋಗ್ಯದ ಸ್ಥಿತಿ ಗತಿ, ಹಾಲು ಉತ್ಪಾದನಾ ಸಾಮರ್ಥ್ಯ, ಹಾಕಿರುವ ಲಸಿಕೆಗಳ ವಿವಿರ, ಗರ್ಭಧಾರಣೆಯ ಮಾಹಿತಿ, ಕರುವಿನ ಜನನ, ಪಶು ಆಹಾರ ಸೇರಿದಂತೆ ಎಲ್ಲ ವಿವರಗಳನ್ನು ಕಲೆ ಹಾಕಿ ‘ಇನಾಫ್‌’ (ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದನೆ ಮಾಹಿತಿ ಜಾಲ) ಎಂಬ ಆ್ಯಪ್‌ನಲ್ಲಿ ದಾಖಲು ಮಾಡಲಾಗುತ್ತದೆ. ಜಾನುವಾರುಗಳಿಗೆ ನೀಡಲಾಗುವ 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ಈ ಎಲ್ಲ ಮಾಹಿತಿಗಳನ್ನು ನೋಡುವುದಕ್ಕೆ ಅವಕಾಶ ಇದೆ.  

‘ಜಾನುವಾರುಗಳನ್ನು ಮಾರಾಟ ಮಾಡಿದಾಗ ಅವುಗಳ ಇಡೀ ವಿವರಗಳನ್ನು ವಿಶಿಷ್ಟ ಗುರುತಿನ ಸಂಖ್ಯೆಯ ಮೂಲಕ ಸುಲಭವಾಗಿ ತಿಳಿಯಬಹುದು. ಜಿಲ್ಲೆಯಲ್ಲಿರುವ 70 ಪಶು ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಹಾಲು ಒಕ್ಕೂಟಗಳ ಸಿಬ್ಬಂದಿ ನೆರವಿನಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಪಶುಪಾಲನಾ ಹಾಗೂ ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇನ್ನು 29 ಸಾವಿರ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಕಿವಿಯೋಲೆ ಹಾಕಬೇಕಿದೆ. ಇವು ಕಾಡಂಚಿನ ಪ್ರದೇಶಗಳ ನಿವಾಸಿಗಳಿಗೆ ಸೇರಿದ ಜಾನುವಾರುಗಳಾಗಿದ್ದು, ಅವರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಿ ಗುರುತಿನ ಸಂಖ್ಯೆ ನೀಡುವ ಪ್ರಯತ್ನ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ಯಳಂದೂರಿನಲ್ಲಿ ಶೇ 90ರಷ್ಟು ಪೂರ್ಣ: ಯಳಂದೂರು ತಾಲ್ಲೂಕಿನಲ್ಲಿ ಶೇ 90ರಷ್ಟು ಕಾರ್ಯ ಪೂರ್ಣಗೊಂಡಿದೆ.  ತಾಲ್ಲೂಕಿನಲ್ಲಿ 10 ಸಾವಿರದಷ್ಟು ರಾಸುಗಳಿವೆ. 

‘ರಾಸುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದರಿಂದ ರಾಸುಗಳ ಆರೋಗ್ಯದ ವಾರ್ಷಿಕ ವಿವರ ಕಲೆ ಹಾಕಬಹುದು. ಲಸಿಕೆ ಹಾಕಿದ ದಿನಗಳು, ಚುಚ್ಚು ಮದ್ದುಗಳ ವಿವರ, ಹಸು, ಎಮ್ಮೆಗಳು ನೀಡುವ ಹಾಲಿನ ಗುಣಮಟ್ಟ, ಬೆದೆಗೆ ಬಂದ ದಿನ, ಕೃತಕ ಗರ್ಭಧಾರಣೆ, ಕರುಹಾಕಿದ ಮಾಹಿತಿಗಳನ್ನು ಪರಿಶೀಲಿಸುವುದು ಸರಳ’ ಎಂದು ಬಳೇಪೇಟೆ ಸಿದ್ಧೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಟ್ಯಾಗ್‌ ಅಳವಡಿಕೆ: ‘ಕಿವಿಯೋಲೆ ಭಾರ ರಹಿತವಾಗಿದೆ. ಗಟ್ಟಿಮುಟ್ಟಾದ ಹಳದಿ ಬಣ್ಣದ ಫೈಬರ್ ಟ್ಯಾಗ್‌ನಲ್ಲಿ ಬಾರ್‌ಕೋಡ್‌ ಇರುತ್ತದೆ. ಬಾರ್‌ ಕೋಡ್‌ನ ಮೇಲೆ 12 ಅಂಕೆಗಳನ್ನು ನಮೂದಿಸಲಾಗಿದೆ. ಇದನ್ನು ರಾಸುಗಳ
ಕಿವಿಗಳ ಒಳಭಾಗದಲ್ಲಿ ತೆಗೆಯಲು ಆಗದಂತೆ ಅಳವಡಿಸಲಾಗುತ್ತದೆ’ ಎಂದು ಹೊನ್ನೂರು ಪಶು ಇಲಾಖೆಯ ವೈದ್ಯ ಡಾ. ರಾಘವೇಂದ್ರ ಅವರು ಹೇಳಿದರು. 

‘ಮಾಲೀಕತ್ವದ ವಿವರಗಳನ್ನು ‘ಇನಾಫ್’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ರಾಸಿನ ಗುರುತಿನ ಸಂಖ್ಯೆಯೊಡನೆ ಮೊಬೈಲ್ ಸಂಖ್ಯೆ ಮತ್ತು ಮಾಲೀಕರ ಗುರುತಿನ ಚೀಟಿಯ ಸಂಖ್ಯೆಗಳನ್ನು ಲಿಂಕ್ ಮಾಡಲಾಗುತ್ತದೆ, ಇದರಿಂದ ಟ್ಯಾಗ್‌ನಲ್ಲಿ ಅಳವಡಿಸಿರುವ ಸಂಖ್ಯೆ ಮೂಲಕ ಜಾನುವಾರುಗಳ ಸವಿವರವನ್ನು ಸಾಕಣೆದಾರರಿಗೆ ತಿಳಿಸಬಹುದು’ ಎಂದು ಅವರು ವಿವರಿಸಿದರು. 

ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಇಂದಿನಿಂದ
ಜಾನುವಾರುಗಳಿಗೆ ಬರುವ ಕಾಲುಬಾಯಿ ಜ್ವರ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಬುಧವಾರದಿಂದ (ಅ.14) ನ.30ರವರೆಗೆ 45 ದಿನಗಳ ಕಾಲ ಲಸಿಕಾ ಅಭಿಯಾನ ನಡೆಯಲಿದೆ. 

ಜಿಲ್ಲೆಯಲ್ಲಿರುವ 2.59 ಲಕ್ಷ ಜಾನುವಾರುಗಳಿಗೆ ನೀಡುವುದಕ್ಕಾಗಿ 2.60 ಲಕ್ಷ ಲಸಿಕೆಯನ್ನು ದಾಸ್ತಾನು ಮಾಡಲಾಗಿದೆ. ಚಾಮರಾಜನಗರದ ಹಾಲು ಒಕ್ಕೂಟದ (ಚಾಮುಲ್‌) ಸಹಯೋಗದಲ್ಲಿ ಅಭಿಯಾನ ಜಾರಿಗೊಳಿಸಲಾಗುತ್ತಿದೆ. 

ಅಭಿಯಾನಕ್ಕಾಗಿ 27 ತಂಡಗಳನ್ನು ರಚನೆ ಮಾಡಲಾಗಿದ್ದು, 180 ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ. 

‘ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 45 ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಲಸಿಕೆಗಳನ್ನು ದಾಸ್ತಾನು ಮಾಡಲಾಗಿದ್ದು, ಎಲ್ಲ ಜಾನುವಾರುಗಳಿಗೂ ನಿಗದಿತ ಅವಧಿಯೊಳಗೆ ನೀಡಲಿದ್ದೇವೆ’ ಎಂದು ಡಾ.ಸಿ.ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು