ಬುಧವಾರ, ಅಕ್ಟೋಬರ್ 21, 2020
21 °C
ಗುಂಡ್ಲುಪೇಟೆಯ ಚಿಕ್ಕಾಟಿಯಲ್ಲಿ ಘಟನೆ; ಸಂಘಟನೆಯಿಂದ ಠಾಣೆ ಮುಂದೆ ಪ್ರತಿಭಟನೆ

ವಿದ್ಯಾಗಮ; ಅಸ್ಪೃಶ್ಯತೆ ಆಚರಣೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ನಡೆಸುತ್ತಿರುವ ವಿದ್ಯಾಗಮ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯಾರ್ಥಿ ಯುವ ವೇದಿಕೆಯ ಕಾರ್ಯಕರ್ತರು ಬೇಗೂರು ಠಾಣೆಯ ಮುಂದೆ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು. 

ಗ್ರಾಮದ ಕನಕ ಭವನದಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ದಲಿತ ವಿದ್ಯಾರ್ಥಿಗಳನ್ನು ಗ್ರಾಮದ ಮುಖಂಡರೊಬ್ಬರು ಹೊರಗೆ ಕಳುಹಿಸಿದರು ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.  

‘ದಲಿತ ಸಮುದಾಯದ ವಿದ್ಯಾರ್ಥಿಗಳು ಭವನದ ಒಳಗೆ ಬರಬೇಡಿ; ಮೆಟ್ಟಿಲ ಬಳಿ ಕುಳಿತು ಅಭ್ಯಾಸ ಮಾಡಿ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ. ಅದರಂತೆ ಶಿಕ್ಷಕರು ಕೂಡ ನಡೆದುಕೊಂಡಿದ್ದಾರೆ. ಕೂಡಲೇ ಶಿಕ್ಷಕರನ್ನು ಅಮಾನತು ಮಾಡಬೇಕು’ ಎಂದು ಪ್ರತಿಭಟನನಿರತರು ಒತ್ತಾಯಿಸಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಅವರು, ‘ಗ್ರಾಮದ ಮುಖಂಡರೊಬ್ಬರು ಮಕ್ಕಳಿಗೆ ಹೊರಗೆ ಇರುವಂತೆ ತಿಳಿಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಶಿಕ್ಷಕರು ಸ್ಥಳದಲ್ಲಿ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಉತ್ತರ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಬಿಇಒ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಊರಿಗೆ ಭೇಟಿ ನೀಡಿ ಎಲ್ಲರನ್ನೂ ವಿಚಾರಣೆ ಮಾಡಿ ವಿವರ ನೀಡುವಂತೆ ಅವರಿಗೆ ಸೂಚಿಸಿದ್ದೇನೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ಹೇಳಿದರು. 

ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ರಾಜಿ ಪಂಚಾಯತಿ ನಡೆದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. 

‘ಪ್ರಕರಣ ದಾಖಲಾಗಿಲ್ಲ. ತಹಶೀಲ್ದಾರ್‌, ಬಿಇಒ ನೇತೃತ್ವದಲ್ಲಿ ಸೋಮವಾರ ಮಾತುಕತೆ ನಡೆಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು