ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ಏಕಾದಶಿ: ಶ್ರದ್ಧಾಭಕ್ತಿಯ ಆಚರಣೆ

ವೆಂಕಟರಮಣ,ರಂಗನಾಥಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಾವಿರಾರು ಭಕ್ತರಿಂದ ದರ್ಶನ
Last Updated 25 ಡಿಸೆಂಬರ್ 2020, 14:18 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಶುಕ್ರವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವೆಂಕಟೇಶ್ವರ, ಶ್ರೀನಿವಾಸ, ರಂಗನಾಥಸ್ವಾಮಿ, ನಾರಾಯಣ ದೇವಾಲಯಗಳು ಭಕ್ತರಿಂದ ತುಂಬಿ ತುಳುಕಿದವು.

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತರು ಮುಂಜಾನೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಏಕಾದಶಿ ಪ್ರಯುಕ್ತ ಭಕ್ತರು ಉಪವಾಸ ವ್ರತವನ್ನು ಆಚರಿಸಿದರು. ದೇವಾಲಯಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರವನ್ನು ಪ್ರವೇಶಿಸಿದರು. ಈ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ವೆಂಕಟೇಶ್ವರ, ನಾರಾಯಣಸ್ವಾಮಿ, ರಂಗನಾಥಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ದೇವಾಲಯಗಳನ್ನು ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರ ವಿಗ್ರಹಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ರಂಗನಾಥಸ್ವಾಮಿಯನ್ನು 150 ಕೆಜಿ ಬೆಣ್ಣೆಯಿಂದ ಅಲಂಕರಿಸಲಾಗಿತ್ತು.ರಂಗನಾಯಕಿ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.

ಮುಂಜಾನೆಯಿಂದಲೇ ಸುಪ್ರಭಾತ ಸೇವೆ, ಸಹಸ್ತ್ರ ನಾಮ, ಪಂಚಾಮೃತ ಅಭಿಷೇಕ, ನವನೀತ ಅಲಂಕಾರ, ಬೆಣ್ಣ್ಣೆ ಅಲಂಕಾರ ನಡೆಸಿ, ಉತ್ತರದ್ವಾರ (ಸ್ವರ್ಗದ ಬಾಗಿಲು) ತೆರೆದು ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಇದಕ್ಕೂ ಮುನ್ನ ಉತ್ಸವಮೂರ್ತಿಯನ್ನು ದೇವಾಲಯದ ಒಳಾಂಗಣದಲ್ಲಿ ಸುತ್ತಲು ಮೆರವಣಿಗೆ ಮಾಡಲಾಯಿತು.

ಸಾವಿರಾರು ಭಕ್ತರ ಭೇಟಿ: ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ರಂಗನಾಥಸ್ವಾಮಿ ದರ್ಶನ ಪಡೆದರು.

ಜೆಡಿಎಸ್‌ ಶಾಸಕ ಎಚ್.ಡಿ.ರೇವಣ್ಣ, ಹನೂರು ಶಾಸಕ ಆರ್.ನರೇಂದ್ರ, ಶಾಸಕ ಅನ್ನದಾನಿ, ಕಾಂಗ್ರೆಸ್‌ ಮುಖಂಡ ನರೇಂದ್ರಸ್ವಾಮಿ, ವಿಧಾನಪರಿಷತ್‌ ಸದಸ್ಯ ಶಂಕರೇಗೌಡ ಸೇರಿದಂತೆ ಹಲವು ಗಣ್ಯರು, ಬೆಣ್ಣೆಯಿಂದ ಅಲಂಕೃತಗೊಂಡ ರಂಗನಾಥನ ದರ್ಶನ ಪಡೆದರು.

ಕೋವಿಡ್‌ ಕಾರಣದಿಂದ ಎಂದಿನಷ್ಟು ಭಕ್ತ ಸಂದಣಿ ಇರಲಿಲ್ಲ. ದೂರದ ಊರಿನಿಂದ ಕಡಿಮೆ ಸಂಖ್ಯೆ ಭಕ್ತರು ಇದ್ದರು.

ಪ್ರಧಾನ ಅರ್ಚಕರಾದ ಶ್ರೀನಿವಾಸ್ ರಂಗಚಾರ್, ಮಾದವನ್‍ಭಟ್ಟರು, ಶ್ರೀಧರ್ ಭಟ್ ಮಧುಸೂದನ್, ಪ್ರಸಾದ್ ಅವರು ವೈಕುಂಠ ಏಕಾದಶಿಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಕಾಡುನಾರಾಯಣಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮುಂಜಾನೆ 4.30ರಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಭಕ್ತರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ನಾರಾಯಣಸ್ವಾಮಿಯ ದರ್ಶನ ಪಡೆದರು.

ಹರದನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆಗಳು ನೆರವೇರಿದವು. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಹುಲುಗನಮುರುಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲೂ ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಿತ್ತು. ಏಕಾದಶಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆಗಳು ಜರುಗಿದವು.

ಉಪವಾಸ ಆಚರಣೆ: ವೈಕುಂಠ ಏಕಾದಶಿಯಲ್ಲಿ ಉಪವಾಸಕ್ಕೆ ಅತ್ಯಂತ ಮಹತ್ವವಿದೆ. ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವವರು ಇಡೀ ದಿನ ನಿರಾಹಾರಿಗಳಾಗಿ, ದ್ವಾದಶದ ದಿನ ಅಂದರೆ ಮರುದಿನ ಆಹಾರ ಸೇವಿಸಿ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. ಏಕಾದಶಿಯಂದು ಮೌನವ್ರತ ಆಚರಿಸುವವರೂ ಇದ್ದಾರೆ.

ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ಉಪವಾಸ ಮಾಡದೆ, ವೈಕುಂಠ ಏಕಾದಶಿಯಂದು ಒಂದು ದಿನ ಉಪವಾಸ ಮಾಡಿದರೆ ಎಲ್ಲ ಏಕಾದಶಿಗಳಲ್ಲಿ ಉಪವಾಸ ಮಾಡಿದಂತಹ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳುತ್ತಾರೆ ಅರ್ಚಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT