ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲಾಡಳಿತದಿಂದ ಸರಳ ವಾಲ್ಮೀಕಿ ಜಯಂತಿ ಆಚರಣೆ

Last Updated 31 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಡಳಿತ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆಯ ವತಿಯಿಂದ ನಗರದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

‌ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘‌ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ವಾಲ್ಮೀಕಿ ಅವರು ಸಾಹಿತ್ಯ ಪರಂಪರೆಗೆ ಮುನ್ನುಡಿ ಬರೆದರು.ಜಗತ್ತಿನ ಎರಡು ಮಹಾಕಾವ್ಯಗಳಲ್ಲಿ ವಾಲ್ಮೀಕಿಯವರು ರಚಿಸಿದ ರಾಮಾಯಣವೂ ಒಂದು ಒಂದಾಗಿದೆ. ಅದರಲ್ಲಿನ ರಾಮರಾಜ್ಯದ ಪರಿಕಲ್ಪನೆ ವಿಶಿಷ್ಟವಾಗಿದ್ದು, ಪ್ರಜಾಪಭುತ್ವದ ಮಹತ್ವವನ್ನು ಅಂದಿನ ಕಾಲದಲ್ಲಿಯೇ ಶ್ರೀರಾಮನು ಮನಗಂಡಿದ್ದ. ವಾಲ್ಮೀಕಿಯವರು ರಾಮಾಯಣದಲ್ಲಿ ಹಲವಾರು ಆದರ್ಶಗಳು, ಮೌಲ್ಯಗಳು ಹಾಗೂ ನೀತಿಗಳನ್ನು ವಿವಿಧ ಪಾತ್ರ, ಸನ್ನಿವೇಶಗಳ ಮೂಲಕ ನೀಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ’ ಎಂದರು.

’ಮಹಾಪುರುಷರ, ಸಂತರ ಜಯಂತಿಗಳು ಯಾವುದೇ ಸಮಾಜಕ್ಕೆ ಸೀಮಿತಗೊಳ್ಳದೇ ಎಲ್ಲರೂ ಆಚರಿಸಿ ಭಾಗವಹಿಸುವಂತಾಗಬೇಕು. ಬೇಟೆಗಾರರಾದ್ದ ಸಾಮಾನ್ಯ ವ್ಯಕ್ತಿ ಸತತ ಪರಿಶ್ರಮದಿಂದ ಮಹರ್ಷಿ ವಾಲ್ಮೀಕಿಯಾದರು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಮಾತನಾಡಿ, ‘ಮಹರ್ಷಿ ವಾಲ್ಮೀಕಿಯವರನ್ನು ಸಾಂಸ್ಕೃತಿಕವಾಗಿ ಪರಿಗಣಿಸಬಹುದು. ಇಡೀ ವಿಶ್ವವೇ ಒಪ್ಪುವಂತಹ ಸಂತರು ನಮ್ಮ ದೇಶದಲ್ಲಿ ಹುಟ್ಟಿದ್ದಾರೆ. ಆದರೆ ನಾವು ಅವರ ತತ್ವ ಸಿದ್ಧಾಂತ, ಚಿಂತನೆಗಳನ್ನು ಅಳವಡಿಸಿಕೊಳ್ಳದೇ ಅಗೌರವ ತೋರುತ್ತಿದ್ದೇವೆ. ಇದು ನಿಜಕ್ಕೂ ಆತಂಕಕಾರಿ. ಅವರನ್ನು ನಾವೆಲ್ಲರೂ ಅನುಸರಿಸಬೇಕು. ಜಿಲ್ಲೆಯಲ್ಲಿ ಶೇ 32ರಷ್ಟು ಅನಕ್ಷರಸ್ಥರಿದ್ದಾರೆ. ಶಿಕ್ಷಣ, ಸಮಾನತೆ, ಉದ್ಯೋಗ ಎಲ್ಲರಿಗೂ ನೈತಿಕವಾಗಿ ದೊರೆಯುತ್ತಿಲ್ಲ. ಶೈಕ್ಷಣಿಕವಾಗಿ ಸಮುದಾಯವನ್ನು ಮೇಲೆತ್ತಬೇಕು. ಬಡತನ, ಅನಕ್ಷರತೆ ಇವೆಲ್ಲವನ್ನು ಸಮುದಾಯ ಮೆಟ್ಟಿ ನಿಲ್ಲಬೇಕು. ಆಗ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದರು.

ಚೆಕ್‌ ವಿತರಣೆ: ಪರಿಶಿಷ್ಟ ಪಂಗಡಕ್ಕೆ ವಿದ್ಯಾರ್ಥಿಗಳ ಪೈಕಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂತೇಮರಹಳ್ಳಿಯ ರೂಪಶ್ರೀ ಅವರಿಗೆ ಪರಿಶಿಷ್ಟ ಕಲ್ಯಾಣ ಇಲಾಖೆಯ ವತಿಯಿಂದ ₹1 ಲಕ್ಷದ ಚೆಕ್ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್, ಸಮುದಾಯದ ಮುಖಂಡರಾದ ಸುರೇಶ್‌ನಾಯಕ್, ಚಂದಕವಾಡಿ ಕಪನಿನಾಯಕ, ಚಂಗುಮಣಿ, ಪರಶಿವಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ವಾಲ್ಮೀಕಿ ಕಲಾಬಳಗದ ಅಧ್ಯಕ್ಷ ಜಿ. ಬಂಗಾರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT