ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಪಾಳ್ಯ: ವಿದ್ಯಾರ್ಥಿ ಸಾವಿನ ಸುತ್ತ ಅನುಮಾನ

Last Updated 31 ಮಾರ್ಚ್ 2021, 16:21 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕೋಳಿಪಾಳ್ಯದ ಸರ್ಕಾರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಲಕ್ಷ್ಮೀಕಾಂತ್‌ನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಹುಟ್ಟಿಕೊಂಡಿದ್ದು, ನಿಷ್ಪಕ್ಷಪಾತ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಊಟದ ಬಿಡುವಿನ ವೇಳೆಯಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ ಶಾಲಾ ಕಾಂಪೌಂಡ್‌ನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ವಿದ್ಯಾರ್ಥಿಯ ಕುತ್ತಿಗೆಯ ಬಳಿಯಲ್ಲಿ ಗಾಯವಾಗಿತ್ತು. ತೀವ್ರ ರಕ್ತಸ್ರಾವದಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ.

ಆದರೆ, ಶಾಲೆಯ ಕಾಂಪೌಂಡ್‌ ಕೇವಲ ಎರಡೂವರೆ ಅಡಿಗಳಷ್ಟು ಎತ್ತರವಿದ್ದು, ಅಲ್ಲಿಂದ ಬಿದ್ದರೆ ಸಾಯುವುದಕ್ಕೆ ಸಾಧ್ಯವೇ ಎಂದು ಊರಿನವರು ಪ್ರಶ್ನಿಸಿದ್ದಾರೆ. ಬಾಲಕ ಬಿದ್ದ ಜಾಗದಲ್ಲಿ ಕುತ್ತಿಗೆಗೆ ಚುಚ್ಚುವಂತಹ ಯಾವುದೇ ವಸ್ತುಗಳು ಕಂಡು ಬಂದಿಲ್ಲ. ಹೀಗಿರುವಾಗ ಕುತ್ತಿಗೆಗೆ ಗಾಯವಾಗಿದ್ದಾದರೂ ಹೇಗೆ ಎಂಬುದು ಅವರ ಪ್ರಶ್ನೆ. ವಿದ್ಯಾರ್ಥಿಗಳ ನಡುವೆ ಜಗಳವೇನಾದರೂ ನಡೆದು ಈ ಘಟನೆ ಸಂಭವಿಸಿದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ.

ಲಕ್ಷ್ಮೀಕಾಂತ್‌ ಪೋಷಕರು ತೀರಾ ಬಡವರಾಗಿದ್ದು, ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

‘ಕಾಂಪೌಂಡ್‌ ಎತ್ತರ ಎರಡರಿಂದ ಎರಡೂವರೆ ಅಡಿ ಇರಬಹುದು. ಏಳನೇ ತರಗತಿ ಹುಡುಗ ಅಲ್ಲಿಂದ ಬಿದ್ದಿದ್ದರೆ ಸಾಯುವಂತಹ ಏಟು ಆಗುವುದಕ್ಕೆ ಸಾಧ್ಯವೇ ಇಲ್ಲ. ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ನಾಯಕ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಇನ್‌ಸ್ಪೆಕ್ಟರ್‌ ಆನಂದ್‌ ಅವರು ಬುಧವಾರವೂ ಕೋಳಿಪಾಳ್ಯ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್ ಆನಂದ್ ಅವರು, ‘ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ಪ್ರತಿಕ್ರಿಯಿಸಿ, ‘ಶಾಲೆಯಲ್ಲಿ ಏನು ನಡೆದಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯೂ ಬಂದಿಲ್ಲ. ತನಿಖೆ ಪೂರ್ಣಗೊಂಡ ಬಳಿಕಷ್ಟೇ ಏನಾಗಿದೆ ಎಂಬುದು ತಿಳಿಯಲಿದೆ’ ಎಂದು ಹೇಳಿದರು.

ತಾತ್ಕಾಲಿಕವಾಗಿ ಶಾಲೆ ಮುಚ್ಚಲು ಆಗ್ರಹ: ಪ್ರಕರಣದ ತನಿಖೆ ನಡೆಯುವವರೆಗೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಕೋಳಿಪಾಳ್ಯ, ವೀರನಪುರ, ಬಡಗಲಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT