ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ತರಕಾರಿ ಬೆಳೆಗಾರರಿಗೆ ಸಂಕಷ್ಟ

ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಟಾವಿಗೆ ಹಿಂದೇಟು, ಕೂಲಿಯಾಳು ಕೊರತೆ
Last Updated 28 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೊರೊನಾ ವೈರಸ್‌ ಭೀತಿಯಿಂದ ಹೇರಲಾಗಿರುವ ದಿಗ್ಬಂಧನದಿಂದಾಗಿ ತರಕಾರಿ ಬೆಳೆದ ರೈತರು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ತಾಲ್ಲೂಕಿನ ಹಲವು ರೈತರು ತರಕಾರಿಗಳನ್ನೇ ತಮ್ಮ ಆದಾಯದ ಮೂಲವಾಗಿ ಮಾಡಿಕೊಂಡಿದ್ದಾರೆ. ದಿಗ್ಬಂಧನದ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಮೇಲೆ ನಿರ್ಬಂಧ ಹೇರಿರುವುದರಿಂದ ತರಕಾರಿ ಸಾಗಣೆಗೆ ಸರಿಯಾದ ವ್ಯವಸ್ಥೆ ಇಲ್ಲದೇ ಹಾಗೂ ಮಾರಾಟಕ್ಕೆ ಮಾರುಕಟ್ಟೆಯೂ ಸಿಗುವುದಿಲ್ಲ ಎಂಬ ಕಾರಣಕ್ಕೆ ತರಕಾರಿ ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಕೂಲಿಯಾಳುಗಳ ಕೊರತೆಯನ್ನೂ ಅವರು ಎದುರಿಸುತ್ತಿದ್ದಾರೆ.

ತಾಲ್ಲೂಕಿನ ತೆರಕಣಾಂಬಿ ಮತ್ತು ಪಟ್ಟಣದ ಎಪಿಎಂಸಿ ಮಾರುಕಟ್ಟೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿದೆ.

ತಾಲ್ಲೂಕಿನಿಂದ ಕೇರಳ ಮತ್ತು ತಮಿಳುನಾಡು ಮತ್ತು ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಆಲೂಗೆಡ್ಡೆ, ಟೊಮೆಟೊ, ಬೀನ್ಸ್, ಕೋಸು, ಈರುಳ್ಳಿ, ಬೀಟ್‌ರೂಟ್‌, ಬದನೆಕಾಯಿ, ಹಾಗಲಕಾಯಿ, ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು ಸೇರಿದಂತೆ ವಿವಿಧ ತರಕಾರಿಗಳು ಸರಬರಾಜು ಆಗುತ್ತಿತ್ತು. ರೈತರ ಜೀವನಕ್ಕೂ ಇದು ಆಧಾರವಾಗಿತ್ತು.

ಸದ್ಯ ತಾಲ್ಲೂಕು ಆಡಳಿತವುಹೊರರಾಜ್ಯಗಳಿಗೆ ಹೋಗಲು 60 ಪಾಸ್‌ಗಳನ್ನು ನೀಡುತ್ತಿದ್ದರೂ ಎಲ್ಲಾ ರೈತರಿಗೆ ಇದರ ಪ್ರಯೋಜನ ದೊರಕುತ್ತಿಲ್ಲ.ಇಲ್ಲೂ ಮಧ್ಯವರ್ತಿಗಳು ಲಾಭ ಪಡೆದುಕೊಂಡು ತಮಗೆ ಬೇಕಾದವರ ತರಕಾರಿಗಳನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ.

‘ತರಕಾರಿಗಳನ್ನು ನಾವೇ ಕೊಯ್ದು ತೆಗೆದುಕೊಂಡು ಹೋಗಲು ವಾಹನಗಳ ಸೌಕರ್ಯ ಸಿಗುತ್ತಿಲ್ಲ. ಕೊಯ್ದರೂ ಸರಿಯಾದ ಬೆಲೆ ಸಿಗದೆ ಕೂಲಿಯನ್ನು ನೀಡಲು ಆಗುತ್ತಿಲ್ಲ’ ಎಂದು ರೈತ ಮಹಾದೇವಪ್ಪ ಅಳಲು ತೋಡಿಕೊಂಡರು.

ಮುಂದೂಡುವ ಚಿಂತನೆ

ಈ ಮಧ್ಯೆ, ಪೂರ್ವ ಮುಂಗಾರು ಅವಧಿಯಲ್ಲಿ ಈ ವರ್ಷ ಬಿತ್ತನೆ ಮಾಡುವುದನ್ನು ಇನ್ನಷ್ಟು ಸಮಯ ಮುಂದೂಡುವ ಚಿಂತನೆಯಲ್ಲಿ ರೈತರಿದ್ದಾರೆ.

‌ಮುಂಗಾರು ಹತ್ತಿರವಾಗುತ್ತಿದ್ದಂತೆ ತಾಲ್ಲೂಕಿನ ರೈತರು ಈರುಳ್ಳಿ, ಸೂರ್ಯಕಾಂತಿ, ಜೋಳವನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಫಸಲಿಗೆ ಉತ್ತಮ ಬೆಲೆ ಸಿಗುವುದು ಅನುಮಾನ. ಕೆಲಸ ಮಾಡುವವರೂ ಸಿಗುವುದಿಲ್ಲ ಎಂಬುದು ಬೆಳೆಗಾರರ ವಾದ.

ದಿಗ್ಬಂಧನ: ದಲ್ಲಾಳಿಗಳಿಗೆ ಲಾಭ

ಜಿಲ್ಲೆಯಾದ್ಯಂತ ಹೇರಲಾಗಿರುವ ದಿಗ್ಬಂಧನ, ದಲ್ಲಾಳಿಗಳಿಗೆ ವರವಾಗಿ ಪರಿಣಮಿಸಿದೆ.ರೈತರು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ತಾಲ್ಲೂಕು ಆಡಳಿತ ವತಿಯಿಂದ ಪಾಸ್ ಪಡೆದು ತಮ್ಮ ವಾಹನಗಳ ಮುಖಂತರ ಹೊರ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಇಲ್ಲಿ ಎಲ್ಲ ತರಕಾರಿಗಳನ್ನು ಕೆಜಿಗೆ ₹10 ಒಳಗೆ ಖರೀದಿ ಮಾಡುತ್ತಿದ್ದಾರೆ. ರೈತರು ಸಹ ವಿಧಿ ಇಲ್ಲದೆ, ಕೂಲಿಗಾದರೂ ಆಗಲಿ ಎಂದು ಮಾರಾಟ ಮಾಡುತ್ತಿದ್ದಾರೆ.

‘ರೈತರು ಬೆಳೆದ ಬೆಳೆಗಳ ಸರ್ವೆ ಮಾಡಿಸಿ ಸರ್ಕಾರ ಸಹಾಯಧನ ನೀಡಬೇಕು. ಇಲ್ಲವಾದಲ್ಲಿ ಸರ್ಕಾರವೇ ಬೆಳೆಗಳನ್ನು ಖರೀದಿ ಮಾಡಿ ಹೊರ ರಾಜ್ಯದ ಸರ್ಕಾರದ ಜೊತೆಗೆ ಚರ್ಚಿಸಿ ಮಾರಾಟ ಮಾಡಬೇಕು. ಆಗ ಮಾತ್ರ ರೈತರಿಗೆ ಮತ್ತು ಗ್ರಾಹಕರಿಗೆ ಒಳ್ಳೆಯದಾಗುತ್ತದೆ’ ಎಂದು ಶಿವಪುರ ಮಹಾದೇವಪ್ಪ ಒತ್ತಾಯಿಸಿದರು.

ತಾಲ್ಲೂಕು ಕಚೇರಿಯಲ್ಲಿ ತರಕಾರಿಗಳನ್ನು ಸಾಗಿಸುವ ವಾಹನಗಳಿಗೆ ಪಾಸ್ ನೀಡಲಾಗುತ್ತಿದ್ದು, ದಲ್ಲಾಳಿಗಳೇ ಗುಂಪು ಗುಂಪಾಗಿ ನಿಂತು ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT