ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಕಾಡಿನ ಗ್ರಾಮಗಳಿಗೆ ‘ಜನ ವನ ಸಾರಿಗೆ’

ಜಿಲ್ಲಾಡಳಿತ, ಅರಣ್ಯ ಇಲಾಖೆ ಸಹಯೋಗ, ಮುಂದಿನ ವಾರ ಸೇವೆಗೆ ಚಾಲನೆ
Last Updated 2 ಜೂನ್ 2022, 5:07 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದ ಮಹದೇಶ್ವರ ಬೆಟ್ಟ ಹಾಗೂ ಹನೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದೊಳಗಿನ, ರಸ್ತೆ ಸೇರಿದಂತೆ ಇತರ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮಗಳಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಒಟ್ಟಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿವೆ.

ವಿವಿಧ ಉದ್ದೇಶಗಳಿಗೆ ಬಳಸಬಹುದಾದ ನಾಲ್ಕು ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಈ ಇದಕ್ಕೆ ‘ಜನ ವನ ಸಾರಿಗೆ’ ಎಂದು ಹೆಸರಿಡಲಾಗಿದೆ. ಮುಂದಿನ ವಾರ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.

ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಇಂಡಿಗನತ್ತ, ಮೆದಗನಾಣೆ, ಮೆಂದಾರೆ ಹಾಗೂ ನಾಗಮಲೆ‌ ಮಾರ್ಗ ಹಾಗೂ ಪಡಸಲನತ್ತ ಪಾಲಾರ್ ಮಾರ್ಗ ಮತ್ತು ಕೊಕ್ಬರೆ, ತೇಕಾಣೆ, ತೋಕೆರೆ ಹಾಗೂ ದೊಡ್ಡಾಣೆ ಮಾರ್ಗ, ಹನೂರು ವನ್ಯಜೀವಿ ವಲಯದ ಕಾಂಚಳ್ಳಿ, ಪಚ್ಚೆದೊಡ್ಡಿ ಮಾರ್ಗಗಳಿಗೆ ನಾಲ್ಕು ವಾಹನಗಳನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಿಯೋಜಿಸಲಿವೆ.

ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಅರಣ್ಯದೊಳಗಿರುವುದರಿಂದ ಅಲ್ಲಿನ ನಿವಾಸಿಗಳು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಉತ್ತಮ ರಸ್ತೆ ಸೌಲಭ್ಯ ಇಲ್ಲರುವುದರಿಂದ ಸರ್ಕಾರದ ಯಾವ ಸೇವೆಗಳೂ ಅವರಿಗೆ ಸುಲಭವಾಗಿ ತಲುಪುತ್ತಿಲ್ಲ.

ವಾಹನ ಸಂಚಾರ ಇಲ್ಲದಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾದವರು ಹಾಗೂ ಗರ್ಭಿಣಿಯರನ್ನು ಡೋಲಿ ಕಟ್ಟಿಕೊಂಡು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ಪಡಿತರ ತರುವುದಕ್ಕೂ ಕಿ.ಮೀ ಗಟ್ಟಲೆ ನಡೆಯಬೇಕಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಜನರ ಸುಖ ದುಃಖಗಳನ್ನು ವಿಚಾರಿಸಿ ವಾಹನ ಸೌಲಭ್ಯ ಕಲ್ಪಿಸಲಾಗುವುದು ಎಂದು ನೀಡಿದ್ದ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿದಿದೆ.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಈಚೆಗೆ ಅರಣ್ಯದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರೂ ಜೊತೆಗಿದ್ದರು. ಇಬ್ಬರೂ ಅಧಿಕಾರಿಗಳು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ರಸ್ತೆಯ ದುರವಸ್ಥೆ, ವಾಹನ ವ್ಯವಸ್ಥೆ ಇಲ್ಲದಿರುವ ಬಗ್ಗೆ ದೂರು ನೀಡಿದ್ದರು. ಶೀಘ್ರದಲ್ಲಿ ವಾಹನ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಕೊಟ್ಟಿದ್ದರು.

‘ತುರ್ತು ಸಂದರ್ಭದಲ್ಲಿ ಬಳಕೆಗೆ ಅನುಕೂಲ’

ಯೋಜನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಗ್ರಾಮಕ್ಕೆ ತೆರಳಿ ಜನರ ಬಳಿ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ರಸ್ತೆ ಹಾಗೂ ವಾಹನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಾಹನವು ಮಕ್ಕಳನ್ನು ಶಾಲೆಗೆ ಬಿಡುವುದು, ಗ್ರಾಮಸ್ಥರ ಬಳಕೆಗೆ, ಆಹಾರದ ಪದಾರ್ಥಗಳ ಸಾಗಾಣಿಕೆ, ಆರೋಗ್ಯ ಸೌಲಭ್ಯ ಸೇರಿದಂತೆ ತುರ್ತು ಸಂದರ್ಭದಲ್ಲಿ ಆಯಾ ಗ್ರಾಮಸ್ಥರು ಇದನ್ನು ಬಳಕೆ ಮಾಡಿಕೊಳ್ಳಬಹುದು’ ಎಂದರು.

ರಿಯಾಯಿತಿ ದರ: ವಾಹನದ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಗ್ರಾಮಗಳ ಪರಿಸರ ಅಭಿವೃದ್ಧಿ ಸಮಿತಿಗೆ ವಹಿಸಲು ನಿರ್ಧರಿಸಲಾಗಿದೆ. ವಾಹನ ಸೌಲಭ್ಯ ಉಚಿತ ಅಲ್ಲ. ಆದರೆ, ರಿಯಾಯಿತಿ ದರದಲ್ಲಿ ಸೌಲಭ್ಯ ಗ್ರಾಮಸ್ಥರಿಗೆ ಸಿಗಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

* ವಾಹನಗಳ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಗ್ರಾಮಗಳ ಪರಿಸರ ಅಭಿವೃದ್ಧಿ ಸಮಿತಿಗೆ ವಹಿಸಲಾಗುವುದು.

-ವಿ.ಏಡುಕುಂಡಲು, ಡಿಸಿಎಫ್‌, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT