ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ದಶಮಿ ಸಂಭ್ರಮ: ಗರಿಗೆದರಿದ ವ್ಯಾಪಾರ

ಆಯುಧಪೂಜೆ: ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ
Last Updated 25 ಅಕ್ಟೋಬರ್ 2020, 8:12 IST
ಅಕ್ಷರ ಗಾತ್ರ

ಯಳಂದೂರು: ಕೋವಿಡ್ ನಂತರ ಸರಳ ದಸರಾ ಆಚರಣೆ ಇದ್ದರೂ, ಜನರ ಉಲ್ಲಾಸಕ್ಕೆ ಕುಂದಾಗಿಲ್ಲ. ವಾಹನ, ಯಂತ್ರೋಪಕರಣ ಮತ್ತು ಅಂಗಡಿ ಮಳಿಗೆಗಳ ಸ್ವಚ್ಛತೆ ಭರ್ಜರಿಯಾಗಿ ನಡೆಯುತ್ತಿದೆ.

ವಿಜಯದಶಮಿ, ದೀಪಾವಳಿ ಸಾಲು ಸಾಲು ಹಬ್ಬಗಳಲ್ಲಿ ಆಟೊಮೊಬೈಲ್ ಕ್ಷೇತ್ರ ಚೇತರಿಕೆಯ ಲಕ್ಷಣ ತೋರುತ್ತಿದ್ದು, ಆಯುಧಪೂಜೆಗೆ ಹೊಸ ವಾಹನಗಳನ್ನು ಮನೆಗೆ ಒಯ್ಯಲು ಸವಾರರು ಉತ್ಸುಕವಾಗಿದ್ದಾರೆ. ಕೊರೊನಾ ಮತ್ತು ಮುಂಗಾರು ಮಳೆಯಿಂದ ನಿರಾಸೆಯಾಗಿದ್ದ ವ್ಯಾಪಾರ-ವಹಿವಾಟು ಚೇತರಿಕೆಯ ಹಾದಿ ಹಿಡಿದಿದೆ. ತರಕಾರಿ ಮತ್ತು ಹೂವು – ಹಣ್ಣು ಕೊಡು ಕೊಳ್ಳುವಿಕೆ ಏರಿಗತಿ ಪಡೆದಿದೆ.

ಪಟ್ಟಣದಲ್ಲಿ ಶನಿವಾರ ಜನ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿತ್ತು. ಹೊಸ ದ್ವಿಚಕ್ರ ಖರೀದಿಸುವವರು ಮುಂಗಡ ಕೊಟ್ಟು, ಭಾನುವಾರ ಪೂಜೆಗೆ ಸಿದ್ಧತೆ ನಡೆಸಿದರೆ, ಆಟೊ, ಟ್ರಾಕ್ಟರ್, ಲಾರಿಗಳ ಮಾಲೀಕರು ಅವುಗಳ ಸ್ವಚ್ಛತೆಗೆ ಒತ್ತು ನೀಡಿದರು. ಸವಾರರು ಷೋರೂಂ ಮುಂದೆ ವಾಹನ ಶುದ್ಧಗೊಳಿಸಲು ಸಾಲಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.

‘ಕೊರೊನಾ ಹೊಡೆತದಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಆರೇಳು ತಿಂಗಳಿಂದ ವರಮಾನವೂ ನಿರೀಕ್ಷಿಸಿದಷ್ಟು ಇಲ್ಲ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳು ಮುಚ್ಚಿದ್ದರಿಂದ ಖರ್ಚಿಗೆ ಕಾಸು ಸಿಗಲಿಲ್ಲ. ವಾಹನ ಕೊಳ್ಳುವವರ ಸಂಖ್ಯೆ ನಿರೀಕ್ಷಿಸಿದಷ್ಟು ಇಲ್ಲ. ಆದರೆ, ವಾಣಿಜ್ಯ ಚಟುವಟಿಕೆ ಶೇ 50ಕ್ಕಿಂತ ತಳಕ್ಕೆ ಇಳಿದಿಲ್ಲ’ ಎನ್ನುತ್ತಾರೆ ವ್ಯಾಪಾರಿ ಬಾಬು.

ವರವಾದ ಕೋವಿಡ್: ಸಾರ್ವಜನಿಕ ಸಾರಿಗೆಗಳಲ್ಲಿ ಜನ ಸಂಚಾರಕ್ಕೆ ಮಿತಿ ಇದೆ. ಆದರೆ, ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ತೆರಳಲು ತೊಂದರೆ ಇಲ್ಲ. ಹಾಗಾಗಿ, ಗ್ರಾಮೀಣ ಭಾಗದ ಜನತೆ ದ್ವಿಚಕ್ರ ವಾಹನ ಖರೀದಿಗೆ ಮುಂದಾಗಿದ್ದಾರೆ.

ಕೊರೊನಾದಿಂದಾಗಿ ಜನರು ಬಸ್, ಆಟೋಗಳಂತಹ ಸಾರ್ವಜನಿಕ ಸಾರಿಗೆಗಳಿಂದ ಹಿಂದೆ ಸರಿಯುತ್ತಿದ್ದಾರೆ. ಇದೇ ವೇಳೆ ಈ ಭಾರಿ ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ವಿವಿಧ ಕಾರಣಗಳಿಂದ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಪ್ರತಿ ಕುಟುಂಬಸ್ಥರು ದ್ವಿಚಕ್ರ ಹೊಂದುವ ಆಸೆ ವ್ಯಕ್ತಪಡಿಸುತ್ತಾರೆ. ದುಡ್ಡು ಹೋದರೂ ಚಿಂತೆ ಇಲ್ಲ. ವಾಹನ ಖರೀದಿಸುವ ಧಾವಂತ ಮಾತ್ರ ಯುವಕರಲ್ಲಿ ಹೆಚ್ಚಾಗುತ್ತಿದೆ. ಸುಮಾರು ಹೀರೊ ಮತ್ತು ಹೋಂಡಾ ಸೇರಿದಂತೆ 70 ವಾಹನಗಳಿಗೆ ಹಬ್ಬ ಬೇಡಿಕೆ ತಂದಿತ್ತಿದೆ. ನಮ್ಮ ಕಂಪನಿಯ 40 ಬೈಕ್‌ಗಳು ಆಯುಧಪೂಜೆಗೆ ಬುಕ್ ಆಗಿವೆ ಎಂದು ಎಸ್‌ಜಿಎಂ ಬಜಾಜ್ ಕಂಪನಿಯ ಮುಖ್ಯಸ್ಥ ಶಿವಕುಮಾರ್ ಹೇಳಿದರು.

‘ಈ ಭಾರಿ ಜಿಎಸ್‌ಟಿ ಮತ್ತು ವಿವಿಧ ಕಾರಣಗಳಿಂದ ಬೈಕ್ ಬೆಲೆಯಲ್ಲೂ ಹೆಚ್ಚಳವಾಗಿದೆ. ಆದರೆ, ವಿವಿಧ ಹಣಕಾಸು ಕಂಪನಿಗಳು ಸಾಲ ನೀಡುವುದರಿಂದ ದ್ವಿಚಕ್ರ ವಾಹನ ಕೊಳ್ಳುತ್ತಿದ್ದೇನೆ. ಹಬ್ಬದ ಸಂಭ್ರಮ ಇದರಿಂದ ಹೆಚ್ಚಾಗಿದೆ’ ಎಂದು ಸವಾರ ಮಹದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT