ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಭಾರಿ ಮಳೆಯಿಂದಾಗಿ ಲೊಕ್ಕನಹಳ್ಳಿ ಕೆರೆ ಭರ್ತಿ; ಹೊಡೆವ ಭೀತಿ

ನೀರು ಹರಿದು ಹೋಗಲು ಇಲ್ಲ ವ್ಯವಸ್ಥೆ; ಕ್ರಮ ಕೈಗೊಳ್ಳದ ಅಧಿಕಾರಿಗಳು–ಗ್ರಾಮಸ್ಥರ ಆತಂಕ
Last Updated 21 ನವೆಂಬರ್ 2021, 15:50 IST
ಅಕ್ಷರ ಗಾತ್ರ

ಹನೂರು: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಲೊಕ್ಕನಹಳ್ಳಿಯ ಕೆರೆ ಭರ್ತಿಯಾಗಿ ಕೋಡಿ ಬೀಳುವ ಸ್ಥಿತಿ ತಲುಪಿದೆ. ಆದರೆ, ಕೆರೆ ತುಂಬಿ ನೀರು ಹೊರಕ್ಕೆ ಹರಿಯಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ.

ಲೊಕ್ಕನಹಳ್ಳಿ ಹೋಬಳಿಯಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಬಿಆರ್‌ಟಿಯಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಅಲ್ಲಿಂದ ಹರಿದು ಬರುವ ನೀರು ಲೊಕ್ಕನಹಳ್ಳಿ ಕೆರೆಗೆ ಸೇರುತ್ತಿದೆ. ದೊಡ್ಡಕೆರೆ, ಚಿಕ್ಕಕೆರೆ, ಅಕ್ಕಮ್ಮನಕೆರೆ, ಶೆಟ್ರು ಕೆರೆ, ಕುಂಬಾರಗುಂಡಿ ಕೆರೆ ಎಲ್ಲವೂ ಹೊಂದಿಕೊಂಡಂತೆ ಇವೆ. ಇವೆಲ್ಲವೂ ಭರ್ತಿಯಾಗಿರುವುದು ಈಗ ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದೆ.

‘ಕೋಡಿ ಹರಿಯುವ ಮುನ್ಸೂಚನೆಯಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಶಾಸಕ ಆರ್.ನರೇಂದ್ರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆ ಪರಿಶೀಲಿಸಿ ಹೋಗಿದ್ದಾರೆ. ಇದಾದ ಬಳಿಕ ಹನೂರು ತಹಶೀಲ್ದಾರ್ ಕೆರೆ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಹೋಗಿದ್ದಾರೆ. ಆದರೆ, ಇದುವರೆಗೂ ಕೆರೆ ಕೋಡಿ ಹರಿಯುವಂತೆ ಯಾವ ಕ್ರಮವೂ ಆಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಕೆರೆ ಸುತ್ತಲೂ ಬಿರುಕು: ನಾಲ್ಕೈದು ವರ್ಷದ ಹಿಂದೆ ಇದೇ ರೀತಿ ಕೆರೆ ಭರ್ತಿಯಾಗಿ ಕೋಡಿ ಹೊಡೆದು ಬಡಾವಣೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈಗ ಮತ್ತೊಮ್ಮೆ ಆ ಭಯ ಕಾಡಲು ಆರಂಭವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕೆರೆ ಸಂಪೂರ್ಣ ಭರ್ತಿಯಾಗುತ್ತಿದ್ದಂತೆ ಕೆರೆಯ ಸುತ್ತಲೂ ಬಿರುಕು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಗ್ರಾಮಕ್ಕೆ ಇದೊಂದೇ ದೊಡ್ಡ ಕೆರೆ. ಇಲ್ಲಿನ ಜನ ಜನುವಾರುಗಳಿಗೆ ಇದೇ ನೀರಿನ ಮೂಲ. ಆದರೆ ಇದು ಭರ್ತಿಯಾದರೆ ಕೆರೆ ತಪ್ಪಲಿನ ಕುಟುಂಬಗಳಿಗೆ ಆತಂಕ ಶುರುವಾಗುತ್ತದೆ.

‘ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ನೇಮಕಗೊಂಡು ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಯಾರೂ ಕೆರೆ ನಿರ್ವಹಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೇಳಿದರೆ ಪಂಚಾಯಿತಿಯಲ್ಲಿ ಅನುದಾನವಿಲ್ಲ ಎಂದು ಹೇಳುತ್ತಾರೆ. ಕಳೆದ ಅವಧಿಯಲ್ಲಿ ಕೆರೆಯ ಸುತ್ತಲೂ ಮಣ್ಣು ಹಾಕಿಸಿ, ಕಲ್ಲುಗಳನ್ನು ಹಾಕಲಾಗಿತ್ತು. ಇಷ್ಟಾಗಿಯೂ ಕೆರೆಯ ಸುತ್ತಲೂ ಬಿರುಕು ಬಿಟ್ಟಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.

ಶಾಸಕರ ನಿರ್ಲಕ್ಷ್ಯ: ಸದಸ್ಯರ ಆರೋಪ

‘ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೈತ್ರಿಯಾಗಿ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿದ್ದಾರೆ. ಹೀಗಾಗಿ, ಸ್ಥಳೀಯ ಶಾಸಕರು ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ’ ಎಂದು ಆರೋಪಿಸುತ್ತಾರೆ ಇಲ್ಲಿನ ಸದಸ್ಯರು.

‘ಇದುವರೆಗೆ ಪಂಚಾಯಿತಿಗೆ ಅನುದಾನವೇ ಬಂದಿಲ್ಲ. ನಾವು ಈ ಬಾರಿ ಗೆದ್ದಿದ್ದೇವೆ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಆದರೆ ಅನುದಾನವೇ ಇಲ್ಲದೇ ನಾವು ಕೆಲಸ ಮಾಡುವುದಾದರೂ ಹೇಗೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ತಮ್ಮ ಅಸಾಹಯಕತೆ ತೋಡಿಕೊಂಡರು.

----

ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ನೀರು ಬೇರೆಡೆ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಲಾಗಿದೆ

- ಜಿ.ಎಚ್.ನಾಗರಾಜು, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT