ಮಂಗಳವಾರ, ನವೆಂಬರ್ 19, 2019
29 °C

ಜಲ್ಲಿ ಕ್ರಷರ್‌ ಅಳವಡಿಕೆಗೆ ಗ್ರಾಮಸ್ಥರ ವಿರೊಧ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರದ ಮಾರ್ಗವಾಗಿ ಕೋಡಿಉಗನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿಪಡಿಸಬೇಕು ಹಾಗೂ ಜಲ್ಲಿ ಕ್ರಷರ್‌ ಅಳವಡಿಸಬಾರದು ಎಂದು ಆಗ್ರಹಿಸಿ ಕೋಡಿಉಗನೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಚಾಮರಾಜನಗರದ ಮೂಲಕ ವೆಂಕಟಯ್ಯನ ಛತ್ರದ ವೃತ್ತದ ಮಾರ್ಗವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಮಾವೇಶಗೊಂಡ ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ನಡೆಸಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ವೆಂಕಟಯ್ಯನ ಛತ್ರದ ಮಾರ್ಗವಾಗಿ ಕೋಡಿಉಗನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ಗ್ರಾಮಸ್ಥರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ಹಳ್ಳ ಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ ಎಂದು ಆರೋಪಿಸಿದರು.

ಕೂಡಲೇ, ರಸ್ತೆ ಸರಿಪಡಿಸಲು ಪಿಡಬ್ಲ್ಯೂಡಿ ಇಲಾಖೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಲ್ಲಿ ಕ್ರಷರ್ ಅಳವಡಿಕೆಗೆ ವಿರೋಧ: ಕೋಡಿಉಗನೆ ಗ್ರಾಮದ ಸರ್ವೇ ನಂ 160ರ ಸುಮಾರು 3 ಎಕರೆ ಪ್ರದೇಶದಲ್ಲಿ ಜಲ್ಲಿ ಹೊಡೆಯಲು ಜಲ್ಲಿ ಕ್ರಷರ್ ಅಳವಡಿಕೆ ಮಾಡಲಾಗುತ್ತಿದೆ. ಇದರಿಂದ 2 ಕಿ.ಮೀ. ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಟ್ಟಡ, ಶಾಲೆಗಳಿವೆ. ಮಕ್ಕಳಿಗೆ ದೂಳು ಹಾಗೂ ಶಬ್ದ ಮಾಲೀನ್ಯ ಉಂಟಾಗಲಿದೆ.

ಅಲ್ಲದೆ, ಸುತ್ತಮುತ್ತಲ ಜಮೀನುಗಳಿಲ್ಲಿ ಬೆಳೆಯುವ ಬೆಳೆಗಳ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಕೃಷಿ ಭೂಮಿ ನಾಶವಾಗಲಿದೆ. ಜನ ಜಾನುವಾರುಗಳ ಆರೋಗ್ಯಕ್ಕೆ ಸಮಸ್ಯೆಯಾಗಲಿದೆ. ಮಳೆಯಾಶ್ರಿತ ಬೆಳೆಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಮಕ್ಕಳು, ಮಹಿಳೆಯರು, ಗರ್ಭಿಣಿಯರಿಗೆ, ಹಿರಿಯರು ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ ಈ ಎಲ್ಲ ಕಾರಣದಿಂದ ಜಲ್ಲಿ ಕ್ರಷರ್‌ ಅಳವಡಿಸಬಾರದು ಎಂದು ಆಗ್ರಹಿಸಿದರು.

ಈ ಸರ್ವೇ ನಂಬರ್‌ ಪ್ರದೇಶದಲ್ಲಿ ಪರವಾನಗಿ ಪಡೆದಿರುವ ಯಾವುದೇ ಕರಿಕಲ್ಲು ಗಣಿಗಾರಿಕೆ ಪ್ರದೇಶವಿಲ್ಲ. ಹೀಗಾಗಿ, ಜಲ್ಲಿ ಕ್ರಷರ್‌ ಮೂಲಕ ಕಲ್ಲು ತೆಗೆಯಲು ಆರಂಭಿಸಿದರೆ ಅಂತರ್ಜಲಮಟ್ಟ ಕುಸಿಯುತ್ತದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕೆ. ನಂಜೇಂದ್ರ, ಸಿ. ರಂಗಸ್ವಾಮಿ, ಮಹದೇವಯ್ಯ, ಅಂಕಯ್ಯ, ಬಸವರಾಜು, ಎಸ್‌. ರಂಗಸ್ವಾಮಿ, ಎಸ್‌. ಬಸವಯ್ಯ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)