ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಆನೆ ದಾಳಿಯಿಂದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರು

ಮದ್ದೂರು ವಲಯದಲ್ಲಿ ಘಟನೆ: ವಾಹನದಿಂದ ಇಳಿದು ನಿಯಮ ಉಲ್ಲಂಘನೆ
Last Updated 18 ಏಪ್ರಿಲ್ 2022, 14:25 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಕೇರಳದ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿ ವಾಹನದಿಂದ ಕೆಳಗಿಳಿದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕು ವೈರಲ್‌ ಆಗಿದ್ದು,ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಯಾವಾಗ ನಡೆದಿದೆ ಎಂಬುದನ್ನು ಅಧಿಕಾರಿಗಳು ಕೂಡ ದೃಢಪಡಿಸಿಲ್ಲ.ಮದ್ದೂರು ಚೆಕ್‌ಪೋಸ್ಟ್‌ ಬಳಿಯೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ವಿಡಿಯೊದಲ್ಲೇನಿದೆ?:ಸೇತುವೆ ಹತ್ತಿರ ಎಡಭಾಗದಲ್ಲಿ ಕಾರೊಂದು ನಿಂತಿರುತ್ತದೆ. ಮೂವರು ಕಾರಿನ ಬಳಿಯಲ್ಲೇ ಇದ್ದರೆ, ಇನ್ನೊಬ್ಬರು ರಸ್ತೆಯ ಬಲಭಾಗದ ಅರಣ್ಯವನ್ನು ಪ್ರವೇಶಿಸುತ್ತಾರೆ. ವಾಹನ ನಿಲ್ಲಿಸಿದ ಜಾಗದಿಂದ ಸ್ವಲ್ಪ ಮುಂದೆ ಇದ್ದ ಆನೆಯೊಂದು ವಾಹನದತ್ತ ಬರುತ್ತದೆ. ಆಗ ಅಲ್ಲಿದ್ದವರು ಕಾರು ಹತ್ತುತ್ತಾರೆ. ವಾಹನ ಸ್ವಲ್ಪ ಮುಂದೆ ಸಾಗುತ್ತದೆ. ಆಗ ಆನೆಯು ರಸ್ತೆಯ ಬಲಭಾಗದಲ್ಲಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಲು ಮುನ್ನುಗ್ಗುತ್ತದೆ. ಆನೆಯಿಂದ ತಪ್ಪಿಸಿಕೊಂಡು ಕಾರಿನ ಹತ್ತಿರ ಬರುವ ವ್ಯಕ್ತಿ, ನಿಧಾನವಾಗಿ ಚಲಿಸುತ್ತಿದ್ದ ಕಾರನ್ನು ಏರುವ ಭರದಲ್ಲಿ ಕೆಳಗೆ ಬೀಳುತ್ತಾರೆ. ತಕ್ಷಣವೇ ಕಾರಿನ ಒಳಗೆ ಇದ್ದವರು ಅವರನ್ನು ಒಳಕ್ಕೆ ಎಳೆಯುತ್ತಾರೆ. ಹೀಗಾಗಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಾರೆ.

ಕಾರಿನ ಹಿಂದೆ ಇದ್ದ ವಾಹನದವರು ಇಡೀ ಘಟನೆಯನ್ನು ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ. ವಾಹನದಿಂದ ಕೆಳಗೆ ಇಳಿಯುವಂತಿಲ್ಲ ಎಂಬ ನಿಯಮಗಳಿದ್ದರೂ, ಅಲ್ಲಲ್ಲಿ ಸೂಚನಾ ಫಲಕಗಳಿದ್ದರೂ ಜನರು ವಾಹನದಿಂದ ಇಳಿದು ಫೋಟೊ ತೆಗೆಯುವುದು, ಪ್ರಾಣಿಗಳಿಗೆ ಆಹಾರ ಕೊಡುವುದು ಮಾಡುತ್ತಲೇ ಇರುತ್ತಾರೆ. ಅರಣ್ಯ ಅಧಿಕಾರಿಗಳು ದಂಡ ವಿಧಿಸುತ್ತಿದ್ದರೂ ಇಂತಹ ಘಟನೆಗಳು ವರದಿಯಾಗುತ್ತಲೇ ಇವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎಸಿಎಫ್‌ ಪರಮೇಶ್‌ ಅವರು, ‘ವಾಹನ ಸಿಕ್ಕಿಲ್ಲ, ನೋಂದಣಿ ಸಂಖ್ಯೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಜನರಿಗೆ ಎಷ್ಟೇ ಹೇಳಿದರೂ ಕೇಳುವುದಿಲ್ಲ. ಅರಣ್ಯದಲ್ಲಿ ಹಾದುಹೋಗಿರುವ ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸುವುದು, ಕೆಳಕ್ಕೆ ಇಳಿಯುವುದು ಯಾವತ್ತೂ ಅಪಾಯಕಾರಿ. ಜನ ಬದಲಾಗದೆ ಇದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT