ಶನಿವಾರ, ಅಕ್ಟೋಬರ್ 23, 2021
24 °C
ಜಿಲ್ಲಾಡಳಿತ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ: ಶಾಂತಮೂರ್ತಿ ಕುಲಗಾಣ ಅಭಿಮತ

ವಿಶ್ವಕರ್ಮ: ಸಂಸ್ಕೃತಿಯ ಪ್ರತೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ವಿಶ್ವಕರ್ಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಅವರು ಶುಕ್ರವಾರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸರಳ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ‘ಸಮಾಜದ ಅನಿಷ್ಟ ಪದ್ಧತಿಯನ್ನು ವಿರೋಧಿಸಿ ತಿದ್ದುವ ಕಾರ್ಯವನ್ನು ವಿಶ್ವಕರ್ಮರು ಮಾಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಜ್ಞಾನಿಗಳನ್ನಾಗಿ ಮಾಡಿ ಸಮಾಜದಲ್ಲಿ ಹೇಗೆ ಬದುಕು ಸಾಗಿಸಬೇಕು ಎಂಬುದನ್ನೂ ಕಲಿಸಿಕೊಟ್ಟಿದ್ದಾರೆ’ ಎಂದರು. 

‘ವಿಶ್ವಕರ್ಮ ಎಂದರೆ ಜಗತ್ತಿನ ಕರ್ತೃ. ವಿಶ್ವಕರ್ಮ ಎಂಬುದು ಸಂಸ್ಕೃತಿಯ ಪ್ರತೀಕ. ವಿಶ್ವಕರ್ಮರು ತಯಾರಿಸಿದ ವಸ್ತುಗಳನ್ನು ಪ್ರತಿ ಮನೆ ಮನೆಗಳಲ್ಲಿ ಕಾಣಬಹುದು’ ಎಂದು ಶಾಂತಮೂರ್ತಿ ಕುಲಗಾಣ ಅವರು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು ಮಾತನಾಡಿ, ‘ಜಯಂತಿ, ಆಚರಣೆಗಳು ಪೂಜೆ ಪುನಸ್ಕಾರಗಳಿಗೆ ಮಾತ್ರ ಸೀಮಿತವಾಗದೆ, ಶ್ರೇಷ್ಠರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಬೇಕು’ ಎಂದರು.

ಮುಖ್ಯ ಭಾಷಣಕಾರರಾದ ಮೈಸೂರಿನ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಮಾತನಾಡಿ, ‘ತಮ್ಮ ಕುಶಲ ಕೆಲಸ ಕಾರ್ಯದಿಂದಲೇ ಆದಿ ವಿಶ್ವಕರ್ಮ, ಜಕ್ಕಣ್ಣಚಾರಿ ಇನ್ನಿತರರು ಜಗತ್ತಿನಾದ್ಯಂತ ಪ್ರಸಿದ್ಧಿ ಹೊಂದಿದ್ದಾರೆ. ಇವರ ಕರಕುಶಲತೆ ಸಾಮಾನ್ಯ ವ್ಯಕ್ತಿಯ ಮನೆಯಿಂದ ದೇವಾಲಯದವರೆಗೂ ಹಬ್ಬಿದೆ. ಸಮಾಜಕ್ಕೆ ಸದ್ವಿಚಾರಗಳನ್ನು ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ. ಗೀರಿಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಚ್.ಎಸ್.ಗಂಗಾಧರ್, ಸಮುದಾಯದ ಅಧ್ಯಕ್ಷರಾದ ಸೋಮಣ್ಣಚಾರ್ ಮತ್ತು ನಾಗೇಂದ್ರಬಾಬು, ಮುಖಂಡರಾದ ಶ್ರೀನಿವಾಸ್ ಪ್ರಸಾದ್, ಮಧು, ಕುಮಾರ್, ಶಂಭುಲಿಂಗಸ್ವಾಮಿ, ಬಂಡಳ್ಳಿ ಶ್ರೀನಿವಾಸ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ನಿಜಧ್ವನಿ ಸೇನಾಸಮಿತಿ ಅಧ್ಯಕ್ಷ ಗೋವಿಂದರಾಜು, ಜೈ ಭುವನೇಶ್ವರಿ ಕನ್ನಡ ಯುವಕರ ಸಂಘದ ಅಧ್ಯಕ್ಷ ಜಿ. ಬಂಗಾರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು