ಸೋಮವಾರ, ನವೆಂಬರ್ 18, 2019
25 °C
ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ: ಜನಜಾಗೃತಿಗೆ 30 ಮಂದಿ ಸ್ವಯಂಸೇವಕರ ನಿಯೋಜನೆ

ಪ್ಲಾಸ್ಟಿಕ್‌ ವಿರುದ್ಧ ಅರಣ್ಯ ಇಲಾಖೆ ಸಮರ

Published:
Updated:
Prajavani

ಹನೂರು: ತಾಲ್ಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ಮಲೆಮಹದೇಶ್ವರ ವನ್ಯಧಾಮದಲ್ಲಿ ಹಾದು ಹೋಗುವ ರಸ್ತೆಯ ಸುತ್ತಮುತ್ತ ಪ್ಲಾಸ್ಟಿಕ್ ಹಾವಳಿ ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖೆ ಸ್ವಯಂಸೇವಕರನ್ನು ನಿಯೋಜಿಸಲು ನಿರ್ಧರಿಸಿದೆ. 

ಮಲೆಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕ್ಷೇತ್ರವನ್ನು ಈಗಾಗಲೇ ಪ್ಲಾಸ್ಟಿಕ್ ಮುಕ್ತವಲಯ ಎಂದು ಘೋಷಿಸಿದೆ. ಇಷ್ಟಾದರೂ ಪ್ಲಾಸ್ಟಿಕ್ ಹಾವಳಿ ನಿಯಂತ್ರಣವಾಗಿಲ್ಲ. ಇದರ ಜೊತೆಗೆ ವನ್ಯಧಾಮದಲ್ಲಿ ವಾಹನಗಳ ಹಾಗೂ ಕಾಲ್ನಡಿಗೆ ಮೂಲಕ ಬೆಟ್ಟಕ್ಕೆ ತೆರಳುವವರು ಪ್ಲಾಸ್ಟಿಕ್‌ ಬಳಸುವುದನ್ನು ತಡೆಯಲು ಹಾಗೂ ಕಾಡಿನೊಳಗೆ ಎಸೆಯುವುದನ್ನು ತಪ್ಪಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ. 

ಪಾದಯಾತ್ರಿಗಳಲ್ಲೇ ಹೆಚ್ಚು: ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದರೂ ವನ್ಯಧಾಮದೊಳಗೆ ಅಗಾಧವಾಗಿ ಬಿದ್ದಿರುವ ಪ್ಲಾಸ್ಟಿಕ್ ಬಗ್ಗೆ ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಪಾದಯಾತ್ರೆಯಲ್ಲಿ ಬರುವ ಭಕ್ತರೇ ಅಧಿಕ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಎಸೆಯುತ್ತಿರುವುದು ಕಂಡು ಬಂದಿದೆ. ಇದರಿಂದ ಶಿವರಾತ್ರಿ, ಯುಗಾದಿ, ವಿಜಯದಶಮಿ ಹಾಗೂ ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.

ಇತ್ತೀಚಿನ ದಿನಗಳ ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹರಕೆ ಹೊತ್ತ ಭಕ್ತರು ಬೆಟ್ಟದ ಕೆಲವು ತಿರುವುಗಳಲ್ಲಿ ಶಿಬಿರ ನಿರ್ಮಿಸಿ ಬಸವನ ಹಾದಿ ಹಾಗೂ ಸರ್ಪನ ಹಾದಿಯಲ್ಲಿ ಪಾದಯಾತ್ರೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ನೀರು, ಮಜ್ಜಿಗೆ, ಪಾನಕ ಹಾಗೂ ಇನ್ನಿತರ ತಂಪು ಪಾನೀಯಗಳನ್ನು ಪ್ಲಾಸ್ಟಿಕ್‌ ಲೋಟಗಳಲ್ಲಿ ನೀಡುತ್ತಿದ್ದರು. ಪಾನೀಯ ಸೇವಿಸುವ ಭಕ್ತರು ಪ್ಲಾಸ್ಟಿಕ್‌ ಲೋಟವನ್ನು ವನ್ಯಧಾಮದೊಳಗೆ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದರು. ಇದನ್ನು ಮನಗಂಡಿರುವ ಇಲಾಖೆ ಪ್ಲಾಸ್ಟಿಕ್ ನಿಯಂತ್ರಿಸುವುದರ ಜತೆಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.

30 ಸ್ವಯಂಸೇವಕರು: ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೂರು ದಿನಗಳ ಮಟ್ಟಿಗೆ 30 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಈ ಸ್ವಯಂಸೇವಕರು ಯಾತ್ರಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಅವರಿಗೆ ರಕ್ಷಣೆಯನ್ನೂ ನೀಡಲಿದ್ದಾರೆ.

ಏನೇನು ಜವಾಬ್ದಾರಿ?: ಜಾತ್ರೆಯ ಸಂದರ್ಭದಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸುವುದು, ವನ್ಯಧಾಮದೊಳಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಬಿಸಾಡದಂತೆ ಸೂಚಿಸುವುದು, ಬಸವನ ಹಾದಿಯಲ್ಲಿ ತೆರಳುವಾಗ ಮೆಟ್ಟಿಲುಗಳ ಮೇಲೆ ಹಾಗೂ ರಸ್ತೆ ಮೇಲೆ ಕರ್ಪೂರ, ಧೂಪ ಹಾಗೂ ಗಂಧದ ಕಡ್ಡಿ ಹೊತ್ತಿಸದಂತೆ ಅರಿವು ಮೂಡಿಸುವುದು, ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅವುಗಳ ಸ್ವಚ್ಛಂದ ಜೀವನಕ್ಕೆ ಧಕ್ಕೆಯಾಗದಂತೆ ವನ್ಯಧಾಮದೊಳಗೆ ನಿಶಬ್ದವಾಗಿ ಹೋಗುವಂತೆ ತಿಳಿಸುವುದು, ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ವಾಹನಗಳ ಸಂಚಾರದಟ್ಟಣೆ ಉಂಟಾಗದಂತೆ ಜಾಗೃತಿ ವಹಿಸುವುದು ಮುಂತಾದ ಜವಾಬ್ದಾರಿಗಳನ್ನು ಸ್ವಯಂಸೇವಕರಿಗೆ ನೀಡಲಾಗಿದೆ.

10 ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಪ್ರತಿ ಜಾತ್ರೆ ಸಂದರ್ಭದಲ್ಲೂ ಸ್ವಯಂಸೇವಕರನ್ನು ನಿಯೋಜಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ‘ ಎಂದರು.

ಈ ಸಲವೂ ಅ.26, 27 ಹಾಗೂ 28ರಂದು ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಸಾಗುವ ಭಕ್ತರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 10 ಕೇಂದ್ರಗಳನ್ನು ಗುರತಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಇಲಾಖೆ ಸಿಬ್ಬಂದಿಯೊಂದಿಗೆ ಸ್ವಯಂಸೇವಕರು ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)