ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬುದ್ಧರ ಮತದಾನದಿಂದ ಸಂವಿಧಾನದ ಆಶಯ ಈಡೇರಿಕೆ: ಸದಾಶಿವ ಸುಲ್ತಾನ್‌ಪುರಿ

Last Updated 25 ಜನವರಿ 2021, 16:17 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಮತದಾರರು ಪ್ರಜ್ಞಾವಂತರಾಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‌ಪುರಿ ಅವರು ಸೋಮವಾರ ಅಭಿಪ್ರಾಯಪಟ್ಟರು.

ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನ ಜಾರಿಯಾಗಿ 71ವರ್ಷ ತುಂಬುತ್ತಿದೆ. 18ವರ್ಷ ತುಂಬಿದ ಪ್ರತಿಯೊಬ್ಬರೂ ನಿಷ್ಪಕ್ಷಪಾತ, ನಿರ್ಭೀತಿಯಿಂದ ಮತ ಚಲಾಯಿಸಿ ಆರ್ಹರನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ನಾಗರಿಕರು ಪ್ರಜ್ಞಾವಂತರಾಗಬೇಕು’ ಎಂದರು.

‘ವಿಶ್ವದಲ್ಲೇ ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟರು. ಅದನ್ನು ಪರಿಪೂರ್ಣವಾಗಿ ನಿಭಾಯಿಸಲು ಉತ್ತಮರನ್ನು ಆಯ್ಕೆ ಮಾಡಬೇಕು. ಮತದಾನದ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಮತ ಚಲಾಯಿಸುವವರು ಪ್ರಬುದ್ಧರಾಗಬೇಕು. ಆಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ಆರ್.ರವಿ ಅವರು ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಉತ್ತಮ ನಾಯಕತ್ವ ಗುಣ ಯಾರಿಗಿದೆ? ಅವರು ಎಷ್ಟು ಪ್ರಬುದ್ಧರಾಗಿದ್ದಾರೆ? ಎಷ್ಟು ಜವಾಬ್ದಾರಿ ಇದೆ? ಎಂಬ ಚಿಂತನೆ ದೇಶದ ವಿದ್ಯಾರ್ಥಿಗಳು ಹಾಗೂ ಯುವಕರಿಗಿರಬೇಕು. ಸಕ್ರಿಯವಾಗಿ ಮತದಾನದಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಮಾತನಾಡಿ, ‌‘ಪ್ರತಿಯೊಬ್ಬರೂ ಮತದಾನದ ಮಹತ್ವ ಅರಿಯಬೇಕು. ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಮತ ಚಲಾವಣೆ ಅಗತ್ಯವಾಗಿರುವುದರಿಂದ ಎಲ್ಲರೂ ನಿರ್ಭಿತಿಯಿಂದ ಮತ ಚಲಾಯಿಸಬೇಕು’ ಎಂದರು.

ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನ ಪ್ರಾಧ್ಯಾಪಕ ನಾಗೇಂದ್ರಮೂರ್ತಿ ಅವರು ಮಾತನಾಡಿ, ‘ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನದಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸುಭದ್ರ ಸರ್ಕಾರಕ್ಕೆ ಸಂವಿಧಾನವೇ ಕಾರಣವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ನೂತನ ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ, ಉತ್ತಮ ಸಾಧನೆ ಮಾಡಿದ ಮತಗಟ್ಟೆ ಅಧಿಕಾರಿಗೆ ಪ್ರಶಂಸಾ ಪ್ರಮಾಣಪತ್ರ ಹಾಗೂ ಜಿಲ್ಲಾಮಟ್ಟದ ಸ್ವೀಪ್ ಕಾರ್ಯಕ್ರಮದ ಪ್ರಬಂಧ, ರಸಪ್ರಶ್ನೆ, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT