ಸೋಮವಾರ, ಏಪ್ರಿಲ್ 12, 2021
31 °C
ಚಾಮರಾಜನಗರದ 2ನೇ ವಾರ್ಡ್‌ನ 2ನೇ ಬೀದಿ: ವೀಲಿಂಗ್‌ ಮಾಡುವ ಪುಂಡರು

ಚಾಮರಾಜನಗರ: ನಿವಾಸಿಗಳ ನೆಮ್ಮದಿ ಕಸಿದ ವಾಹನಗಳ ವೇಗ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ:  ನಗರಸಭೆ ವ್ಯಾಪ್ತಿಯ ಎರಡನೇ ವಾರ್ಡ್‌ನ ಬೀದಿಯೊಂದರಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿರುವುರಿಂದ ಬೀದಿಯ ನಿವಾಸಿಗಳ ನೆಮ್ಮದಿ ಹಾಳಾಗಿದೆ. 

‘ಸುತ್ತಮುತ್ತಲಿನ ಪುಂಡರು ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್‌ ಮಾಡುತ್ತಾರೆ. ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಮಕ್ಕಳನ್ನು ಮನೆಯ ಹತ್ತಿರ ಆಟವಾಡುವುದಕ್ಕೆ ಬಿಡಲು ಭಯವಾಗುತ್ತದೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ. 

ಗಾಳಿಪುರ ಮುಖ್ಯರಸ್ತೆಯಲ್ಲಿ ಕರಿಮಾರಮ್ಮನ ದೇವಾಲಯದ ಬಳಿ ಈ ರಸ್ತೆ ಇದೆ. ದೇವಸ್ಥಾನದ ಮುಂಭಾಗ ಒಂದನೇ ಬೀದಿ ಇದ್ದರೆ, ಹಿಂಭಾಗ ಎರಡನೇ ಬೀದಿ ಇದೆ. ಒಂದನೇ ಬೀದಿಯಲ್ಲಿ ಏಳೆಂಟು ಉಬ್ಬುಗಳಿವೆ. ಹೀಗಾಗಿ ಇಲ್ಲಿ ವಾಹನ ಸವಾರರು ಸಂಚರಿಸುತ್ತಿಲ್ಲ. ಎರಡನೇ ಬೀದಿಯಲ್ಲಿ ಒಂದು ಉಬ್ಬು ಮಾತ್ರ ಇದೆ. ರಸ್ತೆಯೂ ತಕ್ಕ ಮಟ್ಟಿಗೆ ಚೆನ್ನಾಗಿರುವುದರಿಂದ ಎಲ್ಲ ವಾಹನಗಳು ಇದರಲ್ಲೇ ಸಂಚರಿಸುತ್ತವೆ. 

ಈ ರಸ್ತೆ ಎಪಿಎಂಸಿಯ ರಸ್ತೆಯನ್ನು ಸಂಪರ್ಕಿಸುವುದರಿಂದ ವಾಹನಗಳ ಓಡಾಟ ಜಾಸ್ತಿ, ಸರಕು ತುಂಬಿದ ವಾಹನಗಳೂ ಸಂಚರಿಸುತ್ತವೆ. ಸ್ಥಳೀಯರಲ್ಲದೇ, ಸುತ್ತಮುತ್ತಲಿನ ಯುವಕರು ಕೂಡ ದ್ವಿಚಕ್ರವಾಹನಗಳಲ್ಲಿ ಓಡಾಟಕ್ಕೆ 2ನೇ ಬೀದಿಯನ್ನೇ ಬಳಸುತ್ತಾರೆ. ವೇಗವಾಗಿ ಬಂದು ರಸ್ತೆಯ ತುದಿಯಲ್ಲಿರುವ ಕಾಂಕ್ರೀಟ್‌ ಡೆಕ್‌ನಲ್ಲಿ (ಕಳಪೆ ಗುಣಮಟ್ಟದ ಈ ಡೆಕ್‌ನಲ್ಲಿ ಸರಳುಗಳು ಕಾಣಿಸಿಕೊಂಡಿವೆ) ಏಕಾಏಕಿ ಬ್ರೇಕ್‌ ಹಾಕುವುದರಿಂದ ಅಪಘಾತಗಳು ಸಂಭವಿಸುತ್ತಿರುತ್ತವೆ.  

‘ಉಬ್ಬುಗಳಿರುವುದರಿಂದ ಯಾವ ವಾಹನಗಳೂ ಆ ಬೀದಿಯಲ್ಲಿ ಹೋಗುವುದಿಲ್ಲ. ಎಲ್ಲರೂ ನಮ್ಮ ರಸ್ತೆಯಲ್ಲೇ ಸಂಚರಿಸುತ್ತಾರೆ. ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುವುದರಿಂದ ಎಲ್ಲಿ ಅಪಘಾತವಾಗುತ್ತದೆಯೋ ಎಂಬ ಭಯ ನಮಗೆ. ಮಕ್ಕಳನ್ನು ಬಿಡುವುದಕ್ಕೂ ಆಗುತ್ತಿಲ್ಲ' ಎಂದು 2ನೇ ಬೀದಿ ನಿವಾಸಿ ಮುರುಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಿಧಾನವಾಗಿ ಸಂಚರಿಸಿದರೆ ಏನೂ ಸಮಸ್ಯೆ ಇಲ್ಲ. ವೀಲಿಂಗ್‌ ಕೂಡ ಮಾಡುತ್ತಾರೆ. ಜನರಿಗೆ ಓಡಾಡುವುದೇ ಕಷ್ಟವಾಗಿದೆ’ ಎಂದು ಅದೇ ಪ್ರದೇಶದ ನಿವಾಸಿ ನಾಗರಾಜು ಅವರು ಹೇಳಿದರು. 

‘ವಾಹನಗಳ ವೇಗಕ್ಕೆ ನಿಯಂತ್ರಣ ಹೇರಲು ನಗರಸಭೆ ಕ್ರಮ ಕೈಗೊಳ್ಳಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ನಿಗಾ ‌ಇಡಲು ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಮುರುಗೇಶ್‌ ಅವರು ಒತ್ತಾಯಿಸಿದರು.

ಉಬ್ಬು ನಿರ್ಮಿಸಲು ಕ್ರಮ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ 2ನೇ ವಾರ್ಡ್‌ ಸದಸ್ಯೆ ಗೌರಿ ಅವರು, ‘ಈ ಹಿಂದೆ, 1ನೇ ಬೀದಿಯಲ್ಲಿ ಬಾಲಕನೊಬ್ಬನಿಗೆ ಅಪಘಾತವಾಗಿತ್ತು ಎಂಬ ಕಾರಣಕ್ಕೆ ಅಲ್ಲಿ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಎಲ್ಲರೂ 2ನೇ ಬೀದಿಯಲ್ಲಿ ಸಂಚರಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಆ ರಸ್ತೆಯಲ್ಲೂ ಉಬ್ಬು ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕೆಲವು ಜನರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ನಿರ್ಮಿಸಲು ಆಗಿರಲಿಲ್ಲ’ ಎಂದು ಹೇಳಿದರು. 

‘ಈ ಸಂಬಂಧ ಆಯುಕ್ತರ ಗಮನವನ್ನು ಸೆಳೆದಿದ್ದೇನೆ. ಅಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು. 

ಕಳಪೆ ರಸ್ತೆ ಕಾಮಗಾರಿ: ಆರೋಪ

ಎರಡನೇ ವಾರ್ಡ್‌ನ ಮರಿಯ ಮಸೀದಿ ಇರುವ ಪ್ರದೇಶದ ಸುತ್ತಮುತ್ತಲಿನ ಐದು ರಸ್ತೆಗಳಿಗೆ ಇತ್ತೀಚೆಗೆ ಡಾಂಬರು ಹಾಕಲಾಗಿದೆ. ರಸ್ತೆ ಕಾಮಗಾರಿಯು ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡನೇ ವಾರ್ಡ್‌ ಸದಸ್ಯೆ ಗೌರಿ ಅವರ ಮನೆಯ ಎದುರಿನ ರಸ್ತೆಗೂ ಟಾರು ಹಾಕಲಾಗಿದೆ. ರಸ್ತೆಯ ಗುಣಮಟ್ಟ ಚೆನ್ನಾಗಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ರಸ್ತೆಯ ಬದಿಯಲ್ಲಿ ಕಾಲಿನಿಂದ ಒದ್ದರೆ ಜಲ್ಲಿ ಟಾರಿನಿಂದ ಬೇರ್ಪಡುತ್ತಿದೆ. ಎರಡು ಮಳೆ ಅಥವಾ ಭಾರವಾದ ವಾಹನಗಳು ಸಾಗಿದರೆ ಈ ರಸ್ತೆ ಕಿತ್ತು ಬರುವುದು ಖಚಿತ.   

₹‌42 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ಎಂ.ರಾಜಣ್ಣ ಅವರು, ‘ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಲು ಎಂಜಿನಿಯರ್‌ ಕಳುಹಿಸುತ್ತೇನೆ. ಖುದ್ದಾಗಿ ನಾನೇ ಅಲ್ಲಿಗೆ ಭೇಟಿ ನೀಡುತ್ತೇನೆ. ಕಾಮಗಾರಿ ಸರಿ ನಡೆಸದೇ ಇದ್ದರೆ ಮತ್ತೆ ಡಾಂಬರು ಹಾಕುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಹೇಳಿದರು. 

ವಾರ್ಡ್‌ ಸದಸ್ಯೆ ಗೌರಿ ಅವರು ಮಾತನಾಡಿ, ‘ರಸ್ತೆ ಕಳಪೆಯಾಗಿದೆ ಎಂಬ ದೂರು ನನಗೆ ಬಂದಿಲ್ಲ. ರಸ್ತೆಯ ಬದಿಗೆ ಮಣ್ಣು ಹಾಕುವುದು ಬಾಕಿ ಇದೆ. ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕೇಳಿದ್ದೇವೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು