ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚೆಂದದ ಮನೆಗಳಿವೆ, ರಸ್ತೆ, ಚರಂಡಿಗಳಿಲ್ಲ!

10ನೇ ವಾರ್ಡ್‌ನ ಕರಿನಂಜನಪುರ ಹೊಸ ಬಡಾವಣೆಯಲ್ಲಿ ಮೂಲಸೌಕರ್ಯ ಕೊರತೆ
Last Updated 3 ಜೂನ್ 2022, 4:41 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ 10ನೇ ವಾರ್ಡ್‌ಗೆ ಸೇರಿದ ಬುದ್ಧನಗರ ವ್ಯಾಪ್ತಿಯಲ್ಲಿ ಬರುವ ಕರಿನಂಜನಪುರ ಹೊಸ ಬಡಾವಣೆಯಲ್ಲಿ ಚೆಂದ ಚೆಂದದ ದೊಡ್ಡ ಮನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳೇ ಇಲ್ಲ.

ಬುದ್ಧನಗರದ ನೀರಿನ ಟ್ಯಾಂಕ್‌ಗೆ ಹೊಂದಿಕೊಂಡಿರುವ ಬಡಾವಣೆ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಶಿಕ್ಷಕರು, ಅಧಿಕಾರಿಗಳು, ನಿವೃತ್ತ ನೌಕರರು ಸೇರಿದಂತೆ ಆರ್ಥಿಕವಾಗಿ ಸಬಲರಾಗಿರುವವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬುದ್ಧನಗರಕ್ಕೆ ಸಂಪರ್ಕ ಕಲ್ಪಿಸುವವರೆಗೆ ತಕ್ಕಮಟ್ಟಿಗೆ ರಸ್ತೆ, ಚರಂಡಿ ಸೇರಿದಂತೆ ಸೌಕರ್ಯಗಳಿವೆ. ಆ ಬಳಿಕ ಕಚ್ಚಾ ರಸ್ತೆಗಳದ್ದೇ ಕಾರುಬಾರು. ಕೆಲವು ಕಡೆ ಇದ್ದರೂ, ಟಾರು ಕಿತ್ತು ಬಂದು, ಮಣ್ಣಿನ ರಸ್ತೆಯೇ ಆಗಿದೆ. ಬಡಾವಣೆಯಲ್ಲಿ ಖಾಲಿ ನಿವೇಶನಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಸ್ತೆ ಯಾವುದು, ನಿವೇಶನ ಯಾವುದು ಎಂಬುದು ಗೊತ್ತಾಗದ ಸ್ಥಿತಿ ಇದೆ.

ಚರಂಡಿ ವ್ಯವಸ್ಥೆ ಇಲ್ಲಿ ಸಮರ್ಪಕವಾಗಿಲ್ಲ. ಬಡಾವಣೆ ಪ್ರದೇಶದ ಕೊಂಚ ತಗ್ಗಿನಲ್ಲಿದ್ದು ಮೇಲ್ಭಾಗದಿಂದ ಬರುವ ಕೊಳಚೆ ನೀರು ಕೆಳಗಡೆ ಕಟ್ಟಿಕೊಂಡು ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕಾವೇರಿ ನೀರಿನ ಸಂಪರ್ಕ ಇದ್ದರೂ, ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬುದು ಸ್ಥಳೀಯರ ದೂರು.

ಓಡಾಡಲು ಕಷ್ಟ: ಒಂದು ಮಳೆ ಬಂದರೆ ಸಾಕು. ಬಡಾವಣೆಯಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆಯಿಂದಾಗಿ ಕಚ್ಚಾ ರಸ್ತೆ ಕೆಸರು ಮಯವಾಗುತ್ತದೆ. ವಾಹನಗಳ ಓಡಾಟದಿಂದ ರಸ್ತೆ, ಖಾಲಿ ನಿವೇಶನಗಳು ಕೆಸರು ಗದ್ದೆಗಳಂತೆ ಭಾಸವಾಗುತ್ತದೆ.

‘ಮಳೆ ಬಂದರೆ ಇಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಸೌಕರ್ಯ ಕಲ್ಪಿಸಲು ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರಾದ ನಾಗೇಶ್‌ ಅವರು ದೂರಿದರು.

‘ಮಳೆ ಬಂದ ನಂತರ ಎರಡು ದಿನಗಳ ಕಾಲ ಬಡಾವಣೆಯಲ್ಲಿ ಓಡಾಡಲು ಕಷ್ಟ ಪಡಬೇಕು. ನಾವು ಮನೆ ನಿರ್ಮಿಸಿದಾಗಿನಿಂದಲೂ ಇದೇ ಸ್ಥಿತಿ ಇದೆ. ವಾರ್ಡ್‌ ಸದಸ್ಯರಿಗೆ, ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೇ ಇರುವುದರಿಂದ ತಗ್ಗು ಪ್ರದೇಶಗಳಲ್ಲಿ ಕೊಳಚೆ ನೀರು ನಿಂತು ಕೊಳ್ಳುತ್ತದೆ. ಮನೆಗಳಲ್ಲಿ ಉತ್ಪತ್ತಿಯಾಗುವ ನೀರನ್ನು ಹೊರಗಡೆಗೆ ಬಿಡಬೇಕಾಗಿದೆ’ ಎಂದು ಬಡಾವಣೆ ನಿವಾಸಿ ಸುರೇಶ್ ಅವರು ಹೇಳಿದರು.

ಚರಂಡಿ ವ್ಯವಸ್ಥೆ ಬೇಕು: ‘ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ ವ್ಯವಸ್ಥೆಯೂ ಇಲ್ಲ. ನಮ್ಮ ಮನೆಯ ಹಿಂಭಾಗದಲ್ಲೇ ಚರಂಡಿ ಕಟ್ಟಿಕೊಂಡು ನಿಂತಿದೆ. ತುಂಬಾ ಸಮಸ್ಯೆಯಾಗುತ್ತಿದೆ. ಚರಂಡಿ ಇರುವ ಕಡೆಗಳಲ್ಲಿ ಹೂಳು ಎತ್ತುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಹೂಳು ಎತ್ತಿದರೂ ಅದನ್ನು ತೆರವುಗೊಳಿಸುವುದಿಲ್ಲ’ ಎಂದು ನಿವಾಸಿ ಜಯಮ್ಮ ಅವರು ದೂರಿದರು.

ಗಿಡಗಂಟಿಗಳು: ಬಡಾವಣೆಯಲ್ಲಿ ಖಾಲಿ ನಿವೇಶನಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ನಿವೇಶನ ಸೇರಿದಂತೆ ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ಬಡಾವಣೆ ಸೌಂದರ್ಯ ಹಾಳಾಗಿದೆ.

ತಂತಿ ತೆಗೆದು ಕೇಬಲ್‌ ಹಾಕಿ
ಬಡಾವಣೆಗೆ ಹೊಂದಿಕೊಂಡಿರುವ ಜನತಾ ನಿವೇಶನಗಳಲ್ಲಿ ರಸ್ತೆ, ಚರಂಡಿ ಸೌಕರ್ಯಗಳಿವೆ. ಇಲ್ಲಿ 150 ಮನೆಗಳಿವೆ. ಮನೆಮನೆಗಳಿಗೆ ವಿದ್ಯುತ್‌ ಪೂರೈಸುವ ತಂತಿಗಳನ್ನು ತೆರವುಗೊಳಿಸಿ ಕೇಬಲ್‌ ಹಾಕಬೇಕು ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯ.

‘ಬೇರೆ ಬಡಾವಣೆಗಳಲ್ಲಿ ತಂತಿಯನ್ನು ತೆಗೆದು ಕೇಬಲ್‌ ಹಾಕಲಾಗಿದೆ. ನಮ್ಮಲ್ಲಿ ಮಾತ್ರ ಈಗಲೂ ತಂತಿ ವ್ಯವಸ್ಥೆ ಇದೆ. ಮಿಂಚು ಸಿಡಿಲು ಬಂದಾಗ ಇದು ಅಪಾಯಕಾರಿ. ಇತ್ತೀಚೆಗೆ ಬಡಿದ ಸಿಡಿಲಿಗೆ 20ಕ್ಕೂ ಹೆಚ್ಚು ಮನೆಗಳಲ್ಲಿ ಬಲ್ಬ್‌, ಟಿವಿ ಹಾಳಾಗಿತ್ತು. ನಮ್ಮ ಬೀದಿಗೂ ವಿದ್ಯುತ್‌ ಪೂರೈಕೆಗೆ ಕೇಬಲ್‌ ಅಳವಡಿಸಬೇಕು’ ಎಂದು ಸ್ಥಳೀಯ ನಿವಾಸಿ ನಾಗೇಂದ್ರಪ್ಪ ಒತ್ತಾಯಿಸಿದರು.

‘ರಸ್ತೆ ಅಭಿವೃದ್ಧಿಗೆ ₹50 ಲಕ್ಷ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ 10ನೇ ವಾರ್ಡ್‌ ಸದಸ್ಯ ಎಂ.ಮನೋಜ್‌ ಕುಮಾರ್‌ ಅವರು, ‘ಬುದ್ಧನಗರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ₹50 ಲಕ್ಷ ಮೀಸಲಿಡಲಾಗಿದೆ. ಬಡಾವಣೆಯ ವ್ಯಾಪ್ತಿಯ ಹಲವು ರಸ್ತೆಗಳನ್ನು ಈ ಅನುದಾನದಿಂದ ಅಭಿವೃದ್ಧಿ ಪಡಿಸಲಾಗುವುದು. ರಾಮಸಮುದ್ರದ ತಿಬ್ಬಳ್ಳಿಕಟ್ಟೆಯಿಂದ ಮುಂದಿನ ರಸ್ತೆ ಕಾಮಗಾರಿ ಹಾಗೂ ವೀರಶೈವ–ಲಿಂಗಾಯತ ಸಮುದಾಯದವರ ರಸ್ತೆಯ ಅಭಿವೃದ್ಧಿಯನ್ನು ₹1.5 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಯೋಜನೆ ಪೂರ್ಣಗೊಂಡರೆ ಶೇ 70ರಷ್ಟು ರಸ್ತೆ ಸಮಸ್ಯೆ ಬಗೆಹರಿಯಲಿದೆ. ಉಳಿದ ಕೆಲಸಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT