ಬುಧವಾರ, ಆಗಸ್ಟ್ 10, 2022
24 °C
ಚಾಮರಾಜನಗರ ನಗರಸಭೆಯ ನಾಲ್ಕನೇ ವಾರ್ಡ್‌; ಇಕ್ಕಟ್ಟಾದ ಮನೆಗಳಲ್ಲಿ ವಾಸ

ಚಾಮರಾಜನಗರ ನಗರಸಭೆಯ ನಾಲ್ಕನೇ ವಾರ್ಡ್‌; ಕಚ್ಚಾ ರಸ್ತೆಯೇ ಸಮಸ್ಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ನಾಲ್ಕನೇ ವಾರ್ಡ್‌ನಲ್ಲಿರುವ ಬೀಡಿ ಕಾಲೊನಿಯಲ್ಲಿ ದಶಕಗಳಿಂದಲೂ ಉತ್ತಮ ರಸ್ತೆ ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.  

ವಾರ್ಡ್‌ನ ಪ್ರಮುಖ ಬೀದಿಗಳ ರಸ್ತೆಯ ಡಾಂಬರು ಕಿತ್ತು ಹೋಗಿ, ಏರು ತಗ್ಗುಗಳ ಮಣ್ಣಿನ ರಸ್ತೆಯಂತೆಯೇ ಆಗಿದೆ. ಕಾಲೊನಿಯ ಒಳಭಾಗದಲ್ಲಿನ ರಸ್ತೆಗಳು ಡಾಂಬರೇ ಕಂಡಿಲ್ಲ. 

ಈ ವಾರ್ಡ್‌ನಲ್ಲಿ 500 ಬೀಡಿ ಕಾರ್ಮಿಕರ ಕುಟುಂಬಗಳಿವೆ. 200 ಇತರ ಕುಟುಂಬಗಳಿವೆ. ಜನಸಂಖ್ಯೆ 4 ಸಾವಿರದ ಆಸುಪಾಸಿದೆ.  

ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸ ಮಾಡುವ ಇಲ್ಲಿನ ನಿವಾಸಿಗಳು ಬಡವರು. 1984ರಲ್ಲಿ ಸರ್ಕಾರ ಬೀಡಿ ಕಾರ್ಮಿಕರಿಗಾಗಿ ಮನೆಗಳನ್ನು ಮಂಜೂರು ಮಾಡಿತ್ತು. 20X40 ನಿವೇಶನದಲ್ಲಿ ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ. ಮನೆಯಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅದೇ ಮನೆಯನ್ನು ಪಾಲು ಮಾಡಿಕೊಂಡಿದ್ದಾರೆ. ಈಗ ಬಹುತೇಕ ಮನೆಗಳಲ್ಲಿ ಎರಡು ಕುಟುಂಬಗಳು ವಾಸವಿವೆ. 

ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಇವರಿಗೆ ಹೊಸ ನಿವೇಶನ, ಮನೆ ಖರೀದಿಸುವ ತಾಕತ್ತು ಇಲ್ಲ. ಹಾಗಾಗಿ, ಗೂಡಿನಂತಹ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆಗಳೆಲ್ಲಾ ಒತ್ತೊತ್ತಾಗಿ ಇರುವುದರಿಂದ ಕಾಲೊನಿ ಇಕ್ಕಟ್ಟಾಗಿ ಇರುವಂತೆ ಭಾಸವಾಗುತ್ತದೆ.

ಕಾಲೊನಿಯಲ್ಲಿ ರಸ್ತೆ ಸೌಕರ್ಯ ಒಂದು ಬಿಟ್ಟರೆ, ಉಳಿದ ಸೌಲಭ್ಯ ತಕ್ಕ ಮಟ್ಟಿಗೆ ಇವೆ. ಉದ್ಯಾನಕ್ಕೆ ಹತ್ತಿರ ಇರುವ ಬೀದಿಯಲ್ಲಿ ನೀರಿನ ಸಮಸ್ಯೆಯಿದೆ. ನಿವಾಸಿಗಳು ತೊಂಬೆಗೆ ಸರಬರಾಜು ಆಗುವ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕಿದೆ. ಈಗ 15ನೇ ಹಣಕಾಸು ಯೋಜನೆಯಡಿ ಕೊಳವೆ ಬಾವಿ ಕೊರೆಸಲಾಗಿದ್ದು, ನೀರು ಸಿಕ್ಕಿದೆ. ಶೀಘ್ರದಲ್ಲಿ ಮನೆ ಮನೆಗೆ ನಲ್ಲಿ ಸೌಲಭ್ಯ ಆಗಲಿದೆ. 

ಚರಂಡಿ ತಕ್ಕ ಮಟ್ಟಿಗೆ ಸ್ವಚ್ಛವಾಗಿದೆ. ಆದರೆ, ಬಹುತೇಕ ಕಡೆ ತೆರೆದುಕೊಂಡಿವೆ. ಚರಂಡಿ ಇಲ್ಲದಿರುವ ಕಡೆಗಳಲ್ಲಿ ಚರಂಡಿ ನಿರ್ಮಾಣ ಕಾರ್ಯ ಈಗ ಆರಂಭವಾಗಿದೆ. ಕಸದ ವಿಲೇವಾರಿಯೂ ನಿಯಮಿತವಾಗಿ ನಡೆಯುತ್ತಿದೆ.

‘ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ. ಕಾಲೊನಿ ರಸ್ತೆ ಚೆನ್ನಾಗಿಲ್ಲ. ನೀರಿನ ಸಮಸ್ಯೆಯೂ ಇದೆ. ವಾರ್ಡ್‌ ಸದಸ್ಯರ ಗಮನಕ್ಕೆ ತಂದಿದ್ದೇವೆ. ಅವರು ಸ್ಪಂದಿಸುತ್ತಿದ್ದಾರೆ. ಈಗ ಕೊಳವೆಬಾವಿ ಕೊರೆಸಿದ್ದಾರೆ. ಶೀಘ್ರ ಮನೆಗೆ ನೀರು ಬಂದರೆ ಸಾಕು’ ಎಂದು ಕಾಲೊನಿಯ ನಿವಾಸಿ ಬ್ಯಾರಿಜಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಕಾಲೊನಿಯ ರಸ್ತೆಗಳೆಲ್ಲ ಹಾಳಾಗಿರುವುದರಿಂದ, ನಿವಾಸಿಗಳು ಹಾಗೂ ಜನರು ಸಂಚರಿಸಲು ಕಷ್ಟ ಪಡಬೇಕು. ಬೇಸಿಗೆಯಲ್ಲಿ ರಸ್ತೆ ದೂಳು ಮಯವಾದರೆ, ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. 

‘ಕಾಲೊನಿಯಾದಾಗಿನಿಂದಲೂ ಇಲ್ಲಿ ಟಾರು ರಸ್ತೆ ನಿರ್ಮಾಣ ಆಗಿಲ್ಲ. ನಗರೋತ್ಥಾನ ಯೋಜನೆಯಡಿ ನಗರಸಭೆಗೆ ಅನುದಾನ ಮಂಜೂರಾಗಿದ್ದು, ನನ್ನ ವಾರ್ಡ್‌ಗೆ ಹಂಚಿಕೆಯಾಗುವ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ವಾರ್ಡ್‌ ಸದಸ್ಯ ಕಲೀಲ್‌ ಉಲ್ಲಾ ಪ್ರತಿಕ್ರಿಯಿಸಿದರು.

‘ವಾರ್ಡ್‌ನ ಕೆಲವು ರಸ್ತೆಗಳಲ್ಲಿ ಸರಿಯಾದ ಚರಂಡಿ ಇರಲಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಮನೆ ಮನೆಗೆ ನೀರು ಪೂರೈಕೆಯಾಗದಿರುವ ಬೀದಿಯಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಶೀಘ್ರ ನಲ್ಲಿಯ ವ್ಯವಸ್ಥೆ ಮಾಡಲಾಗುವುದು’ ಎಂದರು.

ವಾರ್ಡ್‌ನಲ್ಲಿ ಆರೋಗ್ಯ ಉಪಕೇಂದ್ರ

ನಾಲ್ಕನೇ ವಾರ್ಡ್‌ನಲ್ಲಿ ಈಚೆಗೆ ಆರೋಗ್ಯ ಉಪಕೇಂದ್ರವನ್ನು ತೆರೆಯಲಾಗಿದೆ. ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಲಾಗಿದೆ. ಉದ್ಯಾನ ಅಭಿವೃದ್ಧಿಗಾಗಿ ₹ 10 ಲಕ್ಷ ಅನುದಾನವೂ ಲಭ್ಯವಿದೆ.  

‘ವಾರ್ಡ್‌ನಲ್ಲಿ 4 ಸಾವಿರಕ್ಕಿಂತಲೂ ಹೆಚ್ಚು ಜನರಿದ್ದಾರೆ. ಸಣ್ಣ–ಪುಟ್ಟ ಆರೋಗ್ಯ ಸಮಸ್ಯೆ ಉಂಟಾದರೂ ಯಡಬೆಟ್ಟದ ಬೋಧನಾ ಆಸ್ಪತ್ರೆಗೆ ಹೋಗಬೇಕಿದೆ. ವಾರ್ಡ್‌ನಲ್ಲೇ ಆರೋಗ್ಯ ಉಪಕೇಂದ್ರ ತೆರೆಯಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದ್ದೆ. ಅದರಂತೆ ಈಚೆಗೆ ಅದು ಕಾರ್ಯಾರಂಭ ಮಾಡಿದೆ’ ಎಂದು ಕಲೀಲ್‌ ಉಲ್ಲಾ ಹೇಳಿದರು.

---

ಕಾಲೊನಿ ಆದಾಗಿನಿಂದಲೂ ರಸ್ತೆ ಸಮರ್ಪಕವಾಗಿಲ್ಲ. ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು
ಕಲೀಲ್‌ ಉಲ್ಲಾ, ವಾರ್ಡ್‌ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು