ಚರಂಡಿ ತ್ಯಾಜ್ಯ ಹೆಚ್ಚಳ: ರಸ್ತೆ ಆವರಿಸುವ ನೀರು

ಯಳಂದೂರು: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿದ್ದು ನೀರಿನ ಸರಾಗ ಹರಿಯುವಿಕೆಗೆ ತಡೆಯೊಡ್ಡಿದೆ.
ಮಳೆಗಾಲಕ್ಕೂ ಮುನ್ನ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ರಸ್ತೆಗಳಲ್ಲಿ ಹರಿಯುವ ಮಳೆ ನೀರು ಚರಂಡಿ ಸೇರಿ ಕೊಳಚೆ ನೀರಿನೊಂದಿಗೆ ಬೆರೆತು ಗ್ರಾಮಗಳ ಕೆಳ ಪಾತ್ರದಲ್ಲಿರುವ ಕೆರೆಕಟ್ಟೆಗಳಿಗೆ ಸೇರುತ್ತಿದೆ.
ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಳೆಗಾಲಕ್ಕೆ ಇನ್ನೂ ಸಿದ್ಧತೆ ಆರಂಭವಾಗಲಿಲ್ಲ. ಗುಂಬಳ್ಳಿ, ದುಗ್ಗಹಟ್ಟಿ, ಹೊನ್ನೂರು ಮಾಂಬಳ್ಳಿ, ಮದ್ದೂರು ಪಂಚಾಯುತಿಗಳಲ್ಲಿ ಊರಿನ ಸ್ವಚ್ಛತೆಗೆ ಮುಂಗಾರು ಮಳೆಯನ್ನು ಕಾಯುವ ಸ್ಥಿತಿಯೂ ಇದೆ. ಮಳೆ ನೀರು ಬಂದಾಗ ತ್ಯಾಜ್ಯ ಕೊಚ್ಚಿಕೊಂಡು ಹೋಗಿ ಚರಂಡಿ ಸ್ವಚ್ಛವಾಗುತ್ತದೆ ಎಂಬುದು ಸ್ಥಳೀಯ ಅಧಿಕಾರಿಗಳ ಲೆಕ್ಕಾಚಾರ.
ಮಳೆಗಾಲ ಆರಂಭವಾದರೆ, ಹಳ್ಳಿಯ ಘನ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಊರ ಮುಂದೆ ಸಂಗ್ರಹವಾಗುತ್ತದೆ. ಕೆಲವೊಮ್ಮೆ ಕೆರೆಕಟ್ಟೆ ಸೇರಿ ಶುದ್ಧ ನೀರನ್ನು ಮಲಿನಗೊಳಿಸುತ್ತದೆ. ಯರಗಂಬಳ್ಳಿ, ಗೌಡಹಳ್ಳಿ, ಅಂಬಳೆ ಸುತ್ತಮುತ್ತ ಕೃಷಿಕರು ಕಲುಷಿತ ನೀರನ್ನು ಹೊಲ, ಗದ್ದೆಗೆ ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
‘ಗ್ರಾಮದ ಚರಂಡಿ ನೀರಿನಲ್ಲಿ ಘನತ್ಯಾಜ್ಯ ಸೇರುತ್ತದೆ. ಇದರಿಂದ ಮೋರಿ ಕಟ್ಟಿಕೊಂಡು ಅಕ್ಕಪಕ್ಕದ ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗುತ್ತದೆ. ಅಸಮರ್ಪಕ ಚರಂಡಿ ನಿರ್ವಹಣೆಯಿಂದ ಮಳೆಗಾಲದಲ್ಲಿ ಕೆರೆ, ಹೊಲ, ಗದ್ದೆಗಳತ್ತ ಹರಿಯುತ್ತದೆ. ಹಾಗಾಗಿ, ಪ್ರತಿ ತಿಂಗಳು ಚರಂಡಿ ಮತ್ತು ರಸ್ತೆ ಬದಿ ಸ್ವಚ್ಛಗೊಳಿಸುವತ್ತ ಪಂಚಾಯಿತಿಗಳು ಯೋಜನೆ ರೂಪಿಸಲಿ’ ಎಂದು ಹೊನ್ನೂರು ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಚರಂಡಿ ಸ್ವಚ್ಛತೆ ಮಾಡಿ: ‘ಮಳೆ ಬಂದರೆ ಕೆಲವು ಬಡಾವಣೆಗಳಲ್ಲಿ ನೀರು ನಿಲ್ಲುತ್ತದೆ. ಚರಂಡಿ ಸ್ವಚ್ಛತೆ ನಡೆಯದ ಕಾರಣ ನೀರು ಮನೆಗಳತ್ತ ಹರಿಸುತ್ತದೆ. ಮಳೆಗಾಲಕ್ಕೂ ಮೊದಲು ಗ್ರಾಮೀಣ ಭಾಗಗಳ ಚರಂಡಿ ಮತ್ತು ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವತ್ತ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು’ ಎಂದು ಮಲ್ಲಿಗೆಹಳ್ಳಿಯ ಆರ್.ಪ್ರಮೋದ್ ಅವರು ಒತ್ತಾಯಿಸಿದರು.
‘ಎಲ್ಲ ಅಧಿಕಾರಿಗಳಿಗೂ ಸೂಚನೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಉಮೇಶ್, ‘ಜನವಸತಿ ಮತ್ತು ಕೆಳ ಪಾತ್ರದ ಚರಂಡಿ ಶುದ್ಧಗೊಳಿಸಿ, ತ್ಯಾಜ್ಯವನ್ನು ಹೊರ ಸಾಗಿಸಲು ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಅನುಪಯುಕ್ತ ತ್ಯಾಜ್ಯವನ್ನು ಗೊಬ್ಬರ ತಯಾರಿಸಿ, ಪರಿಸರ ಸ್ನೇಹಿ ವಿಧಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲೂ ಚಿಂತಿಸಲಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಕೊಚ್ಚೆಯಲ್ಲಿ ಸೇರುವ ಪ್ಲಾಸ್ಟಿಕ್ ಬಾಟಲಿ, ಘನತ್ಯಾಜ್ಯವನ್ನು ತೆಗೆದು, ನಂತರ ಕೊಳಚೆ ನೀರನ್ನು ಹರಿಸಬೇಕು. ಈ ಬಗ್ಗೆ ಆಯಾ ಪಂಚಾಯಿತಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.