ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು, ಕಳೆಗೆ ನಲುಗಿದ ಪಾಳ್ಯ ದೊಡ್ಡಕೆರೆ

ಕೊಳ್ಳೇಗಾಲ: ಹಲವು ಗ್ರಾಮಗಳ ರೈತರ ವ್ಯವಸಾಯಕ್ಕೆ ಜಲಮೂಲದ ಆಸರೆ
Last Updated 21 ಸೆಪ್ಟೆಂಬರ್ 2021, 16:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕಣ್ಣು ಹಾಯಿಸಿದಷ್ಟೂ ದೂರಕೆ ಕಾಣುವ ಕಳೆ ಗಿಡಗಳು, ಹಲವು ಅಡಿಗಳಷ್ಟು ಎತ್ತರಕೆ ಇರುವ ಹೂಳಿನ ಮೇಲೆ ಪೂರ್ಣವಾಗಿ ತುಂಬಿದಂತೆ ಕಾಣುವ ನೀರು...

– ತಾಲ್ಲೂಕಿನ ಪಾಳ್ಯಗ್ರಾಮದಲ್ಲಿರುವ ಐತಿಹಾಸಿಕ ದೊಡ್ಡಕೆರೆಯ ಸ್ಥಿತಿ ಇದು. ಕಾವೇರಿ ನೀರಾವರಿ ನಿಗಮವು ಕಬಿನಿ ನಾಲೆಯಿಂದ ನೀರು ಹರಿಸುತ್ತಿರುವುದರಿಂದ ಕೆರೆಯಲ್ಲಿ ನೀರು ಇರುತ್ತದೆ. ಆದರೆ, ಪ್ರಮಾಣ ಎಷ್ಟು ಎನ್ನುವುದು ಪ್ರಶ್ನೆ. ನಿರ್ವಹಣೆಯ ಕೊರತೆಯಿಂದ ಹೂಳು ಹಾಗೂ ಕಳೆಗಿಡಗಳ ಇಡೀ ಕೆರೆಯನ್ನು ಆವರಿಸಿದ್ದು, ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಸಂಗ್ರಹವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಹೇಳಿಕೆ.

ಹಿಂದೆ ಈ ಗ್ರಾಮವನ್ನು ಆಳಿದ್ದ ಪಾಳೆಗಾರರು ಕೃಷಿಯ ಉದ್ದೇಶಕ್ಕಾಗಿ ಈ ಕೆರೆಯನ್ನು ಕಟ್ಟಿಸಿದ್ದರು ಎಂದು ಹೇಳುತ್ತಾರೆ ಹಿರಿಯ ನಾಗರಿಕ ಸಿದ್ದರಾಜುನಾಯಕ.

195 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆಯು 630 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಾಡುವ ವ್ಯವಸಾಯಕ್ಕೆ ನೀರುಣಿಸುತ್ತದೆ.ಈ ಕೆರೆಯ ನೀರನ್ನು ನಂಬಿ ತಾಲ್ಲೂಕಿನ ಪಾಳ್ಯ, ಗುಂಡೇಗಾಲ, ಮಧುವನಹಳ್ಳಿ, ಕರಿಯನಪುರ, ಆಂಜನೇಯಪುರ, ಸಿದ್ದಯ್ಯನಪುರ ಗ್ರಾಮಗಳ ಅನೇಕ ರೈತರು ವ್ಯವಸಾಯ ಮಾಡುತ್ತಾರೆ.

‘ಕೆರೆಯಲ್ಲಿ ಕಳೆ ಗಿಡಗಳು ಬೆಳೆದ ಕಾರಣ ನೀರು ಸರಿಯಾಗಿ ಶೇಖರಣೆ ಆಗುವುದಿಲ್ಲ ಮತ್ತು ಸುಮಾರು ವರ್ಷಗಳಿಂದ ಹೂಳು ತೆಗೆಯದೆ ಕೆರೆ ಹಾಳಾಗಿದೆ. ಕೆರೆಯನ್ನು ಅಕ್ಕ ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.

ವಿಧಾನ ಸಭೆಯ ಅಧಿವೇಶನದಲ್ಲಿ ಸದ್ದು: ಕಳೆದ ವರ್ಷ ದೊಡ್ಡ ಕೆರೆಯ ಏರಿ ಒಡೆದು ಎಕರೆಗಟ್ಟಲೆ ಕೃಷಿ ಭೂಮಿ ಹಾಳಲಾಗಿತ್ತು. ಕೆರೆಯ ನಿರ್ವಹಣೆಯ ಕೊರತೆಯಿಂದ ಈ ಘಟನೆ ಸಂಭವಿಸಿತ್ತು. ಏರಿ ಒಡೆದು ಬೆಳೆ ಹಾನಿಯಾಗಿರುವ ಬೆಳೆಗೆ ಬೆಳೆ ಪರಿಹಾರ ದೊರಕದೆ ಇರುವುದು ಮತ್ತು ಕೆರೆ ಅಭಿವೃದ್ಧಿಗೆ ಅನುದಾನ ಕೊರತೆ ಇರುವುದನ್ನು ಹನೂರು ಶಾಸಕ ಆರ್.ನರೇಂದ್ರ ಅವರು ವಿಧಾನ ಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.

ಕೆರೆ ಅಭಿವೃದ್ಧಿಗೆ ಆಗ್ರಹ: ಗ್ರಾಮದ ಸುತ್ತಮುತ್ತಲಿನ ನೂರಾರು ರೈತರ ಜೀವನಾಡಿಯಾಗಿರುವ ಪಾಳ್ಯ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಕೂಗು ಗ್ರಾಮಸ್ಥರದ್ದು.

ದೊಡ್ಡಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವ ಜಿಲ್ಲಾಡಳಿತದ ಮುಂದೆ ಇದೆ. ಹಿಂದಿನ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸ್ಥಳೀಯ ಶಾಸಕ ಹಾಗೂ ಅಧಿಕಾರಿಗಳೊಂದಿಗೆ ಕೆರೆಗೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದರು. ಜಿಲ್ಲೆಯಲ್ಲಿ ಮಾದರಿ ಕೆರೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಘೋಷಿಸಿದ ಮೂರು ಕೆರೆಗಳಲ್ಲಿ ಇದೂ ಒಂದು.

₹4.73 ಕೋಟಿಯ ಕ್ರಿಯಾ ಯೋಜನೆ

ಕೆರೆಯ ಅಭಿವೃದ್ಧಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತಕುಮಾರ್‌ ಅವರು, ‘ದೊಡ್ಡ ಕೆರೆಯನ್ನು ಅಭಿವೃದ್ಧಿ ಮಾಡಿ ತಾಲ್ಲೂಕಿಗೆ ಮಾದರಿ ಕೆರೆ ಮಾಡಬೇಕು ಎಂಬ ಕಾರಣದಿಂದ ಶಾಸಕರು ಮತ್ತು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಕ್ರಿಯಾಯೋಜನೆ ತಯಾರು ಮಾಡಿ ಎಂದು ನಿಗಮಕ್ಕೆ ಸೂಚನೆ ನೀಡಿದ್ದರು. ಅದರಂತೆ ನಾವು ಕೆರೆ ಅಭಿವೃದ್ದಿಗೆ ₹4.73 ಕೋಟಿ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಶೀಘ್ರದಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ’ ಎಂದರು.

–––

ಪಂಚಾಯಿತಿ ಅನುದಾನದಲ್ಲಿ ಕೆರೆ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಆ ಕಾರಣ ಶಾಸಕರಿಗೆ ಮನವಿ ಮಾಡಿದ್ದೇವೆ. ಈ ಕೆರೆಯ ನೀರನ್ನು ನಂಬಿ ನೂರಾರು ರೈತರು ಜೀವನ ನಡೆಸುತ್ತಿದ್ದಾರೆ.
ಬಿ.ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT