ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ತರಕಾರಿ, ಹೂವಿನ ಬೆಲೆ ಏರಿಳಿತ

Last Updated 27 ಜುಲೈ 2021, 2:38 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಹೂವಿನ ಧಾರಣೆಯಲ್ಲೂ ಏರಿಳಿತ ಕಂಡು ಬಂದಿದೆ. ಮಾಂಸ, ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ತರಕಾರಿಗಳ ಪೈಕಿ ಕಳೆದ ವಾರ ಅಗ್ಗವಾಗಿದ್ದ ಕ್ಯಾರೆಟ್‌ ಈ ವಾರ ತುಟ್ಟಿಯಾಗಿದೆ‌. ಹಾಪ್ಕಾಮ್ಸ್‌ನಲ್ಲಿ ಕೆಜಿ ಕ್ಯಾರೆಟ್‌ಗೆ ₹ 20 ಇತ್ತು. ಅದೀಗ ₹ 30ಕ್ಕೆ ಏರಿದೆ. ಬೀನ್ಸ್ ₹ 10 ಅಗ್ಗವಾಗಿದೆ. ₹ 40 ಇದ್ದ ಬೆಲೆ ₹ 30ಕ್ಕೆ ಇಳಿದಿದೆ. ಉಳಿದಂತೆ ಟೊಮೆಟೊ, ಮೂಲಂಗಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

'ಕ್ಯಾರೆಟ್‌ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ‌ ಬರುತ್ತಿದೆ. ಮಳೆಯ‌ ಕಾರಣಕ್ಕೆ ಬೇಗ‌ ಕೊಳೆತು ಹೋಗುತ್ತಿವೆ. ಹಾಗಾಗಿ ಬೆಲೆ ಹೆಚ್ಚಾಗಿದೆ. ಬೀನ್ಸ್ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಇಳಿದಿದೆ' ಎಂದು ಹಾಪ್ ಕಾಮ್ಸ್ ವ್ಯಾಪಾರಿ ಮಧು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಹಣ್ಣುಗಳ ಪೈಕಿ ದಾಳಿಂಬೆ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ವ್ಯಾಪಾರಿಗಳು ತಳ್ಳುಗಾಡಿ, ಆಟೊಗಳಲ್ಲಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿದೆ. ಕೆಜಿ ದಾಳಿಂಬೆಗೆ ₹ 60ರಿಂದ ₹ 100ರವರೆಗೂ ಬೆಲೆ ಇದೆ.

ಹಾಪ್ ಕಾಮ್ಸ್‌ನಲ್ಲಿ ದಾಳಿಂಬೆ ಬೆಲೆ ಕೆಜಿಗೆ ₹ 20 ಹೆಚ್ಚಾಗಿದೆ. ಕಳೆದವಾರ ₹ 80 ಇತ್ತು. ಸೋಮವಾರ ₹ 100ಕ್ಕೆ ಏರಿದೆ. ಕಿತ್ತಳೆ, ಮೂಸಂಬಿ (ಎರಡೂ ₹ 80-₹ 100) ಸೇಬು (₹ 180) ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಬೆಲೆಗಳಲ್ಲಿ ಯಥಾ ಸ್ಥಿತಿ‌ ಮುಂದುವರಿದಿದೆ.

ಹೂವಿನ ಆವಕ‌ ಹೆಚ್ಚಳ:ಮೂರ್ನಾಲ್ಕು‌ ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಇರುವುದು, ಹೂವಿನ ವ್ಯಾಪಾರಕ್ಕೆ ಅನುಕೂಲವಾಗಿದೆ. ನೆರೆಯ ತಮಿಳುನಾಡು ಹಾಗೂ‌ ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಬಿಡಿ ಹೂವಿನ ಮಾರುಕಟ್ಟೆಗೆ ಬರುತ್ತಿವೆ.

ಕನಕಾಂಬರದ ಬೆಲೆ ಯಥಾಸ್ಥಿತಿ (₹ 600-₹ 800) ‌ಮುಂದುವರಿದಿದ್ದರೆ ಮಲ್ಲಿಗೆ, ಸೇವಂತಿಗೆ ಬೆಲೆ ‌ಸ್ವಲ್ಪ ಇಳಿಮುಖವಾಗಿದೆ.

ಚೆಂಡು ಹೂವಿನ ಧಾರಣೆ ಕೆಜಿಗೆ ₹ 10 ಕುಸಿದಿದ್ದರೆ, ಸುಗಂಧ ರಾಜದ ಬೆಲೆ ಹೆಚ್ಚಾಗಿದೆ.

'ಕಳೆದ ವಾರದವರೆಗೆ‌ ತಮಿಳುನಾಡಿನಿಂದ ಕಡಿಮೆ ಹೂವು ಬರುತ್ತಿತ್ತು. ಈಗ‌ ಬಿಸಿಲಿನ ವಾತಾವರಣದಿಂದ ಹೆಚ್ಚು ಹೂವುಗಳು ಬರುತ್ತಿವೆ. ಕೆಲವು ಹೂವುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ' ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT