ಮಂಗಳವಾರ, ಜನವರಿ 26, 2021
25 °C

ಬಿಜೆಪಿ ಫ್ಲೆಕ್ಸ್‌ನಲ್ಲಿ ಮಹೇಶ್‌: ಇಂದು ಕಮಲ ಪಾಳಯ ಸೇರುವರೇ ಕೊಳ್ಳೇಗಾಲ ಶಾಸಕ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ/ಕೊಳ್ಳೇಗಾಲ: ನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರು ಹಾಗೂ ಮುಖಂಡರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ನಲ್ಲಿ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ಫೋಟೊವೂ ಕಂಡು ಬಂದಿದ್ದು, ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. 

ಜನಸೇವಕ ಸಮಾವೇಶದಲ್ಲಿ ಅವರು ಬಿಜೆಪಿ ಸೇರಲಿದ್ದಾರೆಯೇ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಆರಂಭವಾಗಿದೆ. 

ಚಾಮರಾಜನಗರ ನಗರಸಭೆಯ ಅಧ್ಯಕ್ಷೆ ಸಿ.ಎಂ.ಆಶಾ ಹಾಗೂ ಉಪಾಧ್ಯಕ್ಷೆ ಸುಧಾ ಅವರು ಮುಖಂಡರಿಗೆ ಸ್ವಾಗತಕೋರಿರುವ ಫ್ಲೆಕ್ಸ್‌ನಲ್ಲಿ ಎನ್‌.ಮಹೇಶ್‌ ಫೋಟೊ ಇದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎನ್‌.ಮಹೇಶ್‌ ಅವರು, ‘ನನ್ನ ಅಭಿಮಾನಿಗಳು ಫ್ಲೆಕ್ಸ್‌ನಲ್ಲಿ ಫೋಟೊ ಹಾಕಿರಬಹುದು. ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧಾರ ಮಾಡಿಲ್ಲ. ನಾನೀಗ ಕೊಳ್ಳೇಗಾಲದಲ್ಲಿ ಇಲ್ಲ. ಮೈಸೂರಿಗೆ ಬಂದಿದ್ದೇನೆ. ಸುತ್ತೂರು ಶ್ರೀಗಳನ್ನು ಭೇಟಿಯಾಗುವ ಕಾರ್ಯಕ್ರಮ ಇದೆ’ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಲುವಾಗಿ ಎನ್‌.ಮಹೇಶ್‌ ಅವರು ಮೈಸೂರಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌.ಅಶೋಕ ಸೇರಿದಂತೆ ಇತರ ಸಚಿವರನ್ನೂ ಅವರು ಭೇಟಿಯಾಗಲಿದ್ದಾರೆ ಎಂದು ಗೊತ್ತಾಗಿದೆ.

ಬೆಂಬಲಿಗರ ಸಭೆ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ನಂತರ ಬಿಜೆಪಿ ಬಗ್ಗೆ ಮೃದುಧೋರಣೆ ತಳೆದಿರುವ ಎನ್‌.ಮಹೇಶ್ ಅವರು ಇತ್ತೀಚೆಗೆ ಕೊಳ್ಳೇಗಾಲ ನಗರಸಭೆಯಲ್ಲಿ ತಮ್ಮ ಬೆಂಬಲಿಗರು ಬಿಜೆಪಿ ಸದಸ್ಯರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರುವಂತೆ ನೋಡಿಕೊಂಡಿದ್ದರು. 

ಸಚಿವ ಸ್ಥಾನದ ಮೇಲೆಯೂ ಕಣ್ಣಿಟ್ಟಿರುವ ಅವರು, ‘ಸಚಿವ ಸ್ಥಾನ ಸಿಕ್ಕಿದರೆ ಬಿಜೆಪಿ ಸೇರುವುದು ಖಚಿತ’ ಎಂದು ಕಳೆದ ವಾರ ಬಹಿರಂಗವಾಗಿ ಹೇಳಿದ್ದರು. ‘ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ’ ಎಂದು ಜಿಲ್ಲೆಯ ಬಿಜೆಪಿ ಮುಖಂಡರೂ ಹೇಳಿದ್ದಾರೆ. 

ಭಾನುವಾರ ಚಾಮರಾಜನಗರದಲ್ಲಿ ಮಹೇಶ್‌ ಅವರು ಬೆಂಬಲಿಗರ ಸಭೆಯನ್ನು ನಡೆಸಿದ್ದು, ಬಿಜೆಪಿಗೆ ಸೇರ್ಪಡೆ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 

ಬಿಜೆಪಿ ವರಿಷ್ಠರು ಭಾನುವಾರ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ಅವರಿಗೆ ಅನುಮತಿ ನೀಡಿದ ನಂತರ ಈ ದಿಢೀರ್‌ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು