ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ 2 ದಿನದಲ್ಲಿ ಆದೇಶ: ಬಸವರಾಜ ಬೊಮ್ಮಾಯಿ

Last Updated 19 ಮಾರ್ಚ್ 2023, 7:37 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಇನ್ನು ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭರವಸೆ ನೀಡಿದರು.

108 ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಭಾಗದ ಕಾಡಂಚಿನ ಪ್ರದೇಶದಲ್ಲಿ ರಸ್ತೆ, ಶಾಲೆ, ಆಸ್ಪತ್ರೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ವರದಿ ಪಡೆಯಲಾಗಿದೆ. ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಸಮಗ್ರವಾದ ಆದೇಶ ಹೊರಡಿಸುತ್ತೇನೆ’ ಎಂದರು.

‘ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಆರಂಭವಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿಯಲ್ಲಿ ರೈತರ ಜಮೀನು ವಿಚಾರವನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಲಾಗುವುದು. ಈಗಾಗಲೇ ಸರ್ವೆ ನಡೆದಿದೆ. ಇನ್ನೂ ಕೆಲವು ತಾಂತ್ರಿಕ ಸಮಸ್ಯೆ ಇದೆ. ಅದನ್ನು ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಹೇಳಿದರು.

ಇದಕ್ಕೂ ಮೊದಲು ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ‘ಅರಿಸಿನ ಬೆಲೆ ಕುಸಿದಿರುವುದರಿಂದ ಅದಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಪರಿಹಾರ ಬರಲಿದೆ’ ಎಂದರು.

ರೈತ ಮುಖಂಡರೊಂದಿಗೆ ಸಿ.ಎಂ. ಮಾತುಕತೆ

ಸಮಾರಂಭದ ನಂತರ ಮುಖ್ಯಮಂತ್ರಿಯವರು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮತ್ತು ಅರಿಸಿನ ಬೆಳೆಗಾರ ನಾಗಾರ್ಜುನ್‌ ಕುಮಾರ್‌ ಅವರೊಂದಿಗೆ ಚರ್ಚಿಸಿಸಿದರು.

ಮಾತುಕತೆ ವೇಳೆ ಮುಖ್ಯಮಂತ್ರಿಯವರು ನೀಡಿರುವ ಭರವಸೆಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಹೊನ್ನೂರು ಪ್ರಕಾಶ್‌, ‘ಮಾದೇಶ್ವರ ಬೆಟ್ಟದ ಗ್ರಾಮಗಳ ಮೂಲ ಸೌಕರ್ಯಕ್ಕೆ ₹56 ಕೋಟಿ ಯೋಜನೆಯನ್ನು ಹಣಕಾಸು ಇಲಾಖೆಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಚಂಗಡಿ ಗ್ರಾಮ ಸ್ಥಳಾಂತರಕ್ಕಾಗಿ ಜಿಲ್ಲಾಧಿಕಾರಿಗೆ ವಿಶೇಷ ಅಧಿಕಾರ ನೀಡಲಾಗುವುದು, ಜಿಲ್ಲೆಯಲ್ಲಿ ಕರ ನಿರಾಕರಣೆ ಚಳುವಳಿಯ ಸಮಯದಿಂದ ವಿದ್ಯುತ್ ಪಾವತಿಸದೆ ಬಾಕಿಯಿರುವ ₹35 ಕೋಟಿ ಅಸಲು ಮನ್ನಾ ಮಾಡಲು ಸಚಿವ ಸಂಪುಟಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ’ ಎಂದರು.

ಅರಿಸಿನ ಬೆಲೆಗೆ ಸಂಬಂಧಿಸಿದಂತೆ ಸಹಕಾರ ಸಚಿವರಾದ ಸೋಮಶೇಖರ್ ಅವರು ಕೂಡ ಶೀಘ್ರ ಎಂಐಎಸ್ ಜಾರಿ ಮಾಡುವುದರ ಜೊತೆಗೆ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹ ಧನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT