ಚಾಮರಾಜನಗರ | ಕಾವೇರಿ ವನ್ಯಧಾಮದಲ್ಲಿ ತೋಳ ಪತ್ತೆ, ಜಿಲ್ಲೆಯಲ್ಲೇ ಮೊದಲು

ಚಾಮರಾಜನಗರ: ಕಾವೇರಿ ವನ್ಯಜೀವಿ ಧಾಮದಲ್ಲಿ ಮೊದಲ ಬಾರಿಗೆ ತೋಳದ ಇರುವಿಕೆ ಪತ್ತೆಯಾಗಿದೆ. ಚಾಮರಾಜ
ನಗರ ಜಿಲ್ಲೆಯಲ್ಲಿ ಈ ಪ್ರಾಣಿ ಕಂಡು ಬಂದಿರುವುದು ಇದೇ ಮೊದಲು.
ಚಿರತೆಗಳ ಅಧ್ಯಯನಕ್ಕಾಗಿವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ, ನೇಚರ್ ಕನ್ಸರ್ವೇಷನ್ ಫೌಂಡೇಷನ್ ತಂಡದವರು ವನ್ಯ
ಧಾಮದ ಕೊತ್ತನೂರು ವಲಯದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಏಪ್ರಿಲ್ 7ರ ಮುಂಜಾನೆ ತೋಳವೊಂದರ ಚಿತ್ರ ಸೆರೆಯಾಗಿದೆ.
ತೋಳಗಳು ಸಾಮಾನ್ಯವಾಗಿ ಒಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ರಾಜ್ಯದ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡುಬರುತ್ತವೆ. ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಕಂಡು ಬರುವ ತೋಳಗಳು, ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲೂ ಜೀವಿಸುತ್ತವೆ. ಭಾರತದಲ್ಲಿ ಇವುಗಳ ಸಂಖ್ಯೆ ಹುಲಿಗಳಿಗಿಂತಲೂ ಕಡಿಮೆಯಿದೆ ಎಂದು ಅಂದಾಜಿಸಲಾಗಿದೆ.
‘ಜಿಲ್ಲೆ ವ್ಯಾಪ್ತಿಯ ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಹಿಂದೆ ನಡೆದಿದ್ದ ಅಧ್ಯಯನಗಳಲ್ಲಿ ತೋಳಗಳ ಇರುವಿಕೆ ದಾಖಲಾಗಿಲ್ಲ. ದಕ್ಷಿಣ ಭಾರತದಲ್ಲೇ ನಾಯಿ ಜಾತಿಗೆ ಸೇರಿರುವ ಎಲ್ಲ ನಾಲ್ಕು ಪ್ರಭೇದಗಳ (ಸೀಳು ನಾಯಿ, ತೋಳ, ಗುಳ್ಳೆ ನರಿ, ಮತ್ತು
ಕಪ್ಪಲು ನರಿ) ವನ್ಯಜೀವಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಕಂಡು ಬಂದಿವೆ’ ಎಂದು ಸಂಜಯ್ ಗುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದರೊಂದಿಗೆ ಹುಲಿ, ಸೀಳುನಾಯಿ, ತೋಳಗಳು ಒಂದೇ ಕಡೆ ಆವಾಸ ಸ್ಥಾನ ಹೊಂದಿರುವ ಏಕೈಕ ಜಿಲ್ಲೆ ಹೆಗ್ಗಳಿಕೆಗೂ ಚಾಮರಾಜನಗರ ಪಾತ್ರವಾಗಿದೆ. ಈ ಎಲ್ಲಾ ಪ್ರಾಣಿಗಳು ಒಂದೇ ಬಗೆಯ ಬಲಿ ಪ್ರಾಣಿ (ಚುಕ್ಕೆ ಜಿಂಕೆ, ಸಾರಂಗ)ಯನ್ನು ಅವಲಂ
ಭಿಸಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಮೂರು ಪ್ರಾಣಿಗಳು ಕಂಡು ಬಂದಿವೆ. ಆದರೆ ಒಂದೇ ಕಡೆ ಇಲ್ಲ. ಮದ್ದೋಡಿಯಲ್ಲಿ ಹುಲಿ, ಸೀಳುನಾಯಿ ಇದ್ದರೆ, ಕಡೂರಿನಲ್ಲಿ ತೋಳಗಳಿವೆ’ ಎಂದು ಮಾಹಿತಿ ನೀಡಿದರು.
ಅಧ್ಯಯನ ತಂಡದಲ್ಲಿ ಸಂದೇಶ್ ಅಪ್ಪು ನಾಯ್ಕ್, ಗಿರೀಶ್ ಎಂ.ಎನ್., ಜ್ಞಾನೇಂದ್ರ, ಪೂರ್ಣೇಶ ಎಚ್.ಸಿ. ಇದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.