ಗುರುವಾರ , ಅಕ್ಟೋಬರ್ 22, 2020
22 °C
ಮಹದೇಶ್ವರ ಬೆಟ್ಟದ ಆಣೆಹೊಲ ಗ್ರಾಮದಲ್ಲಿ ಘಟನೆ, ಮಗು, ತಾಯಿ ಸುರಕ್ಷಿತ

ದಾರಿಯಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇಶ್ವರ ಬೆಟ್ಟ: ಹೆರಿಗೆಗಾಗಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಬರುತ್ತಿರುವಾಗ ದಾರಿ ಮಧ್ಯೆಯೇ ಗರ್ಭಿಣಿಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ ಪ್ರಕರಣ ಸಮೀಪದ ಆಣೆಹೊಲ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ. 

ಗ್ರಾಮದ ವೀರಣ್ಣ ಎಂಬುವವರ ಪತ್ನಿ ಕಮಲ ಅವರು ತುಂಬು ಗರ್ಭಿಣಿಯಾಗಿದ್ದರು. ಗುರುವಾರ ರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರ ಮನೆಗೆ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಬೆಟ್ಟದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ನಡೆದುಕೊಂಡೇ ಬರಲು ಮನೆಯಿಂದ ಇಬ್ಬರೂ ಹೊರಟಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಯಿಂದ 250 ಮೀಟರ್‌ ದೂರ ಬಂದಾಗ ಹೆರಿಗೆ ನೋವು ತೀವ್ರಗೊಂಡು ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ. 

ನಂತರ ಸ್ಥಳೀಯ ಆಶಾ ಕಾರ್ಯಕರ್ತೆ ಹಾಗೂ ಗ್ರಾಮದವರ ನೆರವಿನಿಂದ ಬಾಡಿಗೆ ವಾಹನದಲ್ಲಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. 

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮುಕುಂದ್ ಹಾಗೂ ನರ್ಸ್‌ಗಳು ಅವರಿಗೆ ತಕ್ಷಣ ಚಿಕಿತ್ಸೆ ನೀಡಿ ಉಪಚರಿಸಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. 

‘ರಾತ್ರಿ ವಾಹನ ಹೋಗಲು ಸಾಧ್ಯವಾಗದೇ ಇದ್ದುದರಿಂದ ಆಸ್ಪತ್ರೆಗೆ ನಡೆದುಕೊಂಡೇ ಹೊಗುತ್ತಿದ್ದೆವು. ದಾರಿ ಮಧ್ಯೆಯೇ ಹೆರಿಗೆ ಆಯಿತು. ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ಹಾಗೂ ನರ್ಸ್‌ಗಳು ಚೆನ್ನಾಗಿ ನೋಡಿಕೊಂಡರು.  ಇದು ನನಗೆ ಮೂರನೇ ಹೆರಿಗೆ’ ಎಂದು ಕಮಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮುಕುಂದ್‌ ಅವರು ‘ಗುರುವಾರ ರಾತ್ರಿ 9.15ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ವೈದ್ಯಕೀಯ ಮಹಿಳಾ ಸಹಾಯಕಿಯರನ್ನು ಸ್ಥಳಕ್ಕೆ ಕಳುಹಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಕೇಂದ್ರಕ್ಕೆ ಕರೆತರಲಾಯಿತು. ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಚಿಕಿತ್ಸೆ ನೀಡಿದೆವು. ತಾಯಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ’ ಎಂದರು. 

ಸೌಲಭ್ಯಕ್ಕೆ ಆಗ್ರಹ: ಆಣೆಹೊಲ ಗ್ರಾಮವು ಬೆಟ್ಟಕ್ಕೆ ಹೊಂದಿಕೊಂಡಂತೆ ಇದ್ದು, ಒಂದೂವರೆ ಕಿ.ಮೀ ದೂರದಲ್ಲಿದೆ. ‌ವೀರಣ್ಣ ಅವರ ಮನೆ ಇರುವ ಜಾಗ ಆಣೆಹೊಲ ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ವಾಹನ ಹೋಗಲು ಸಾಧ್ಯವಿಲ್ಲ.

ಈ ಗ್ರಾಮದಲ್ಲಿ 20 ಕುಟುಂಬಗಳು ವಾಸವಿದ್ದು, ವ್ಯವಸಾಯವೇ ಇವರಿಗೆ ಜೀವನಾಧಾರ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯೂ ಇದೆ. ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಸಂಪರ್ಕಿಸುವುದಕ್ಕೂ ಆಗುವುದಿಲ್ಲ. ಗ್ರಾಮಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು