ಶುಕ್ರವಾರ, ಜುಲೈ 23, 2021
23 °C

ಚಾಮರಾಜನಗರ: ಠಾಣೆ ಎದುರು‌‌ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟಿಸಿದ‌‌ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಠಾಣೆಯ ಎದುರು ಮಳೆಯಲ್ಲೇ‌‌ ನೆನೆಯುತ್ತಾ ಪ್ರತಿಭಟಿಸಿದ ಸುಶೀಲಾ

ಚಾಮರಾಜನಗರ: ಪೊಲೀಸರು ತಮಗೆ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ‌ ಮಹಿಳೆಯೊಬ್ಬರು ರಾಮಸಮುದ್ರ ಠಾಣೆಯ ಎದುರು ಮಳೆಯಲ್ಲೇ‌‌ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಇದೇ 10ರಂದು ನಡೆದಿದೆ.

ತಾಲ್ಲೂಕಿನ ಚಂದಕವಾಡಿ ನಿವಾಸಿ‌ ಸುಶೀಲಾ ಪ್ರತಿಭಟನೆ ‌ನಡೆಸಿದವರು.

ಚಂದಕವಾಡಿಯ ಫಾರೆಸ್ಟ್ ಸರ್ವೆ‌ ನಂಬರ್ 1/168ರಲ್ಲಿ ಸುಶೀಲಾ– ಶಿವಣ್ಣ ದಂಪತಿಯ ಜಮೀನಿದ್ದು, ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬುವರ ಜೊತೆ ಮಾಲೀಕತ್ವ ವಿಚಾರದಲ್ಲಿ ವಿವಾದ ಇದೆ ಎಂದು ಹೇಳಲಾಗಿದೆ.

‘ಎಲ್ಲ ದಾಖಲೆಗಳು ನಮ್ಮ ಹೆಸರಿನಲ್ಲಿ ಇವೆ. ಆದರೂ ಕೃಷಿ ಮಾಡುವುದಕ್ಕೆ ತೊಂದರೆ ಕೊಡುತ್ತಿದ್ದಾರೆ. ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಹಾಗೂ ರಾಮಸಮುದ್ರ ಠಾಣೆಯಲ್ಲಿ ಮನವಿ ಮಾಡಿದ್ದೆ. ಪೊಲೀಸ್ ನಿಯೋಜನೆಗಾಗಿ 9ರಂದು ಶುಲ್ಕವನ್ನೂ ಪಾವತಿಸಿದ್ದೆ. ಆದರೆ ಪೊಲೀಸರು ಬಂದಿರಲಿಲ್ಲ. ಅದಕ್ಕಾಗಿ ಧರಣಿ ನಡೆಸಿದೆ’ ಎಂದು ಸುಶೀಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳೆ ಮಳೆಯಲ್ಲಿ ನೆನೆಯುತ್ತಿದ್ದರೂ, ಒಳಗೆ ಕರೆಯದೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರು, ‘ಈ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಆ ಮಹಿಳೆ ನನ್ನ‌ ಬಳಿ ಬಂದಿದ್ದರು. ಭದ್ರತೆ ಒದಗಿಸುವುದಾಗಿ ಹೇಳಿದ್ದೆ. ಘಟನೆ ಬಗ್ಗೆ ಠಾಣೆಯಿಂದ ವರದಿ ಕೇಳಿದ್ದೇನೆ. ಸಿಬ್ಬಂದಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಮಹಿಳೆಯನ್ನು ಠಾಣೆಗೆ ಬರುವಂತೆ ಸಿಬ್ಬಂದಿ ಕರೆದರೂ ಅವರು ಬಂದಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು