ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆಗೆ ಜಲಮರುಪೂರಣ ಪರಿಹಾರ

ಜಲ ಸಂರಕ್ಷಣ ಕಾರ್ಯಾಗಾರದಲ್ಲಿ ಭೂ ವಿಜ್ಞಾನಿ ದೇವರಾಜ್‌ ರೆಡ್ಡಿ ಪ್ರತಿಪಾದನೆ
Last Updated 30 ಜನವರಿ 2020, 7:21 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ತಪ್ಪಿಸಲು ಅಂತರ್ಜಲ ಮರುಪೂರಣವೊಂದೇ ಪರಿಹಾರ’ ಎಂದು ಭೂವಿಜ್ಞಾನಿ ಎನ್.ಜೆ. ದೇವರಾಜ್ ರೆಡ್ಡಿ ಅವರು ಅಭಿಪ್ರಾಯ ಪಟ್ಟರು.

ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಯೋಗದಲ್ಲಿ ನಡೆದ ಜಲಮೂಲಗಳ ಪುನಶ್ಚೇತನ ಹಾಗೂ ವೈಜ್ಞಾನಿಕ ನಿರ್ಮಾಣ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಪ್ರಪಂಚದಲ್ಲೇ ಎರಡನೇ ಅತೀ ದೊಡ್ಡ ಜಲ ಸಂಪತ್ತನ್ನು ಹೊಂದಿದೆ. ಹೀಗಿದ್ದೂ ದಿನ ಕಳೆದಂತೆ ನೀರಿನ ಅಭಾವ ಹೆಚ್ಚುತ್ತಿದೆ. ಸಾವಿರಾರು ಕೆರೆಗಳಿದ್ದರೂ, ವರ್ಷ ಪೂರ್ತಿ ನೀರು ಇಲ್ಲದ ಕಾರಣ ಹಾಗೂ ಮಾಲಿನ್ಯದಿಂದಾಗಿ ಬಳಕೆಗೆ ಸಿಗುತ್ತಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ವೈಜ್ಞಾನಿಕ ರೀತಿಯಲ್ಲಿ ಅಂತರ್ಜಲ ಮರುಪೂರಣ ಕಾರ್ಯ ಅಗತ್ಯವಾಗಿ ಆಗಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.

‘ಮಳೆ ಕೊರತೆಯಿಂದಾಗಿ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಸಮುದ್ರ ತೀರ ಅಥವಾ ನೀರು ಹರಿವಿನ ಹತ್ತಿರ ಕೊಳವೆ ಬಾವಿ ಕೊರೆದರೆ ನೀರು ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದ್ಯಾವುದೂ ಪೂರ್ಣ ಸತ್ಯವಲ್ಲ. ಮಳೆ ಪ್ರಮಾಣ ಹೆಚ್ಚಿರುವ ಜಾಗದಲ್ಲೂ ಅಂತರ್ಜಲ ಮಟ್ಟ ಕಡಿಮೆ ಇರುವ ಉದಾಹರಣೆಗಳಿವೆ. ಮನುಷ್ಯರು ಅನುಸರಿಸುತ್ತಿರುವ ಅವೈಜ್ಞಾನಿಕ ಪದ್ಧತಿಗಳು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ’ ಎಂದು ವಿವರಿಸಿದರು.

‘ನೀರಿನ ಸಮಸ್ಯೆಗಳನ್ನು ನಿವಾರಿವುದಕ್ಕಾಗಿ ಅಂತರ್ಜಲ ಮರುಪೂರಣ ಮಾಡಲಾಗುತ್ತದೆ. ನೀರು ಬತ್ತಿ ಹೋದ ಅಥವಾ ಬಾರದೇ ಇರುವ ಕೊಳವೆ ಬಾವಿಗಳನ್ನು ಪರೀಕ್ಷಿಸಿ, ಅಲ್ಲಿ ನೀರಿನ ಪೊರೆಗಳ ಇರುವಿಕೆ ಕಂಡುಬಂದಲ್ಲಿ ಮರುಪೂರಣ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ಜಲ ಪ್ರಮಾಣ ಹೆಚ್ಚುವುದಲ್ಲದೇ ನೀರು ಸದಾ ಕಾಲ ಇರುವಂತೆ ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

ಎಲ್ಲರ ಪಾಲ್ಗೊಳ್ಳುವಿಕೆ ಬೇಕು: ‘ನೀರಿನ ಸಮಸ್ಯೆಯನ್ನು ಮೂಲದಿಂದ ಸರಿಪಡಿಸಿಕೊಳ್ಳಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ. ಅನವಶ್ಯಕವಾಗಿ ನೀರು ಪೋಲಾಗದಂತೆ ಎಚ್ಚರ ವಹಿಸುವುದು, ಮಳೆ ನೀರು ಸಂಗ್ರಹದ ಮೂಲಕ ನೀರಿನ ಶೇಖರಣೆ ಮತ್ತು ಬಳಕೆಯಂತಹ ಉಪಕ್ರಮಗಳನ್ನು ಎಲ್ಲರೂ ಅನುಸರಿಸಬೇಕು. ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳಿಗೆ ಆದ್ಯತೆ ನೀಡಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಪ್ರಭಾರ ಉಪ ಕಾರ್ಯದರ್ಶಿ ಧರಣೇಶ್ ಇತರರು ಇದ್ದರು.

ಅಂತರ್ಜಲ ಮರುಪೂರಣ ಘಟಕ ವೀಕ್ಷಣೆ
ಕಾರ್ಯಾಗಾರದ ನಂತರ ದೇವರಾಜ್‌ ರೆಡ್ಡಿ ಅವರುಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಿಯೂರು ಗ್ರಾಮದಲ್ಲಿ ನಿರ್ಮಿಸಿರುವ ಜಲ ಮರುಪೂರಣ ಪುನಶ್ಚೇತನದ ನೇರ ಪ್ರಾತ್ಯಕ್ಷಿಕೆ, ಕೊಳವೆಬಾವಿ ಮರುಪೂರ್ಣ ಘಟಕವನ್ನು ವೀಕ್ಷಿಸಿದರು.

‘ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜಲ ಮರುಪೂರಣ ಘಟಕಗಳ ಮಾದರಿ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ಹೊಸ ಕೊಳವೆ ಬಾವಿಗಳನ್ನು ತೆರೆಯಲು ಮುಂದಾಗುವ ಮುನ್ನ, ರೈತರಿಗೆ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಪುನಃಚೇತನದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅರಿವು ಮೂಡಿಸಬೇಕು’ ಎಂದು ಅವರು ಸಲಹೆ ನೀಡಿದರು.

ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ವೈ.ಸಿ. ಮಹದೇವಸ್ವಾಮಿ, ಸದಸ್ಯರಾದ ಅಣ್ಣಪ್ಪಸ್ವಾಮಿ, ಪುಷ್ಪಲತಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT