ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಸೋಂಕು; ಬೇಕಿದೆ ಇನ್ನಷ್ಟು ಜಾಗೃತಿ

ವಿಶ್ವ ಏಡ್ಸ್‌ ದಿನ ಇಂದು; ಜಿಲ್ಲೆಯಲ್ಲಿ ಪ್ರಕರಣಗಳು ಇಳಿಕೆ ಚಿಕಿತ್ಸೆ ಪಡೆಯುತ್ತಿರುವ 2,509 ಮಂದಿ
Last Updated 30 ನವೆಂಬರ್ 2022, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದೆ. ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಸೋಂಕಿತರು ಪೂರ್ಣ ಪ್ರಮಾಣದಲ್ಲಿ ಮುಖ್ಯವಾಹಿನಿಗೆ ಬರುತ್ತಿಲ್ಲ.

ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ನೀಡಿರುವ ಮಾಹಿತಿ ಪ್ರಕಾರ, 2008ರಿಂದ 2022ರ ಅಕ್ಟೋಬರ್‌ವರೆಗೆ 4,306 ಎಚ್‌ಐವಿ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ಪೈಕಿ 2,258 ಪುರುಷರು, 2,032 ಮಹಿಳೆಯರು (226 ಗರ್ಭಿಣಿಯರು) ಹಾಗೂ 16 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. 1,661 ಮಂದಿ ಮೃತಪಟ್ಟಿದ್ದಾರೆ.

ಹೊರ ಜಿಲ್ಲೆಗಳು, ಹೊರ ರಾಜ್ಯದವರು ಸೇರಿದಂತೆ ಜಿಲ್ಲೆಯಲ್ಲಿ ಈ ವರೆಗೆ 5,075 ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದಾರೆ. ಈ ಪೈಕಿ ಸದ್ಯ 2,509 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,809 ಮಂದಿ ನಿಧನರಾಗಿದ್ದಾರೆ. 757 ಮಂದಿ ಆರೋಗ್ಯ ಇಲಾಖೆ ನೀಡುವ ಚಿಕಿತ್ಸೆಯನ್ನು ಪಡೆಯುತ್ತಿಲ್ಲ.

ಇದರಲ್ಲಿ ಬಹುತೇಕರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಕಳಂಕ ಹಾಗೂ ತಾರತಮ್ಯದ ಭೀತಿಯಿಂದ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ. ಎಲ್ಲರಿಗೂ ಕೌನ್ಸೆಲಿಂಗ್‌ ಮಾಡಿ, ಅವರಿಗೆ ಚಿಕಿತ್ಸೆಯ ಅಗತ್ಯದ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಏಡ್ಸ್‌ ನಿಯಂತ್ರಣ ಕಾರ್ಯಕ್ರಮ 2008ರಿಂದ ಜಾರಿಗೆ ಬಂದಿದ್ದು, 14 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಚ್‌ಐವಿ ಸೋಂಕಿನ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರಕರಣಗಳು ಇಳಿಮುಖವಾಗುತ್ತಿವೆ. ಗರ್ಭಿಣಿಯರಲ್ಲೂ ಸೋಂಕಿನ ಪ್ರಮಾಣ ಇಳಿದಿದೆ. ಕಳೆದ ವರ್ಷ ಇದು ಶೂನ್ಯವಾಗಿತ್ತು.

ಚಿಕಿತ್ಸಾ ವ್ಯವಸ್ಥೆ: ಜಿಲ್ಲೆಯಲ್ಲಿಆರೋಗ್ಯ ಇಲಾಖೆಯು ಎಚ್‌ಐವಿ ಸೋಂಕು ಪತ್ತೆ ಹಾಗೂ ಚಿಕಿತ್ಸೆ ಕಾರ್ಯದಲ್ಲಿ ತೊಡಗಿದೆ.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸೋಂಕು ಪತ್ತೆ ಹಾಗೂ ಕೌಂನ್ಸೆಲಿಂಗ್‌ ಗಾಗಿ ಎಂಟು ಕೇಂದ್ರಗಳಿವೆ (ಐಸಿಟಿಸಿ). ಒಂದು ಸಂಚಾರಿ ಘಟಕವಿದ್ದು, ಬುಡಕಟ್ಟು ಸಮುದಾಯದವರ ಪರೀಕ್ಷೆಗಾಗಿ ಬಳಕೆಯಾಗುತ್ತಿದೆ. ಜಿಲ್ಲೆಯ 64 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರು ಖಾಸಗಿ ಕೇಂದ್ರಗಳಲ್ಲಿ ಉಚಿತ ಎಚ್‌ಐವಿ ಪರೀಕ್ಷೆ ಲಭ್ಯವಿದೆ. ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ಎಆರ್‌ಟಿ ಕೇಂದ್ರಗಳಿವೆ.

ಜಾಗೃತಿ ಕಾರ್ಯಕ್ರಮ:ಸೋಂಕು ಪತ್ತೆ ಹಾಗೂ ಚಿಕಿತ್ಸೆಗಾಗಿಸಮುದಾಯದ ಆಧಾರಿತ ಆರೈಕೆ ಮತ್ತು ಬೆಂಬಲ ಕೇಂದ್ರಗಳ ಭಾಗವಾಗಿ ಜಿಲ್ಲೆಯಲ್ಲಿ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಎನ್‌ಜಿಒಗಳು ಎಚ್‌ಐವಿ ಸೋಂಕಿತ ಮತ್ತು ಬಾಧಿತರಿಗೆ ಸವಲತ್ತು ನೀಡಲು, ಜಾಗೃತಿ ಮೂಡಿಸಲು, ಸೋಂಕಿತರಿಗೆ ಮಾನಸಿಕ ಬೆಂಬಲ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

‘ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ವರ್ಷ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣದ ಜೊತೆಗೆ ಎಚ್‌ಐಸಿ ಸೋಂಕು ತಡೆಯುವ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ. ಪದವಿ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕಾರ್ಯಕ್ರಮದ ಅಡಿಯಲ್ಲಿ ಸೋಂಕು ತಡೆಗಟ್ಟುವ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೇ ಜಾನಪದ ಕಲಾ ತಂಡಗಳಿಂದ, ರಂಗಭೂಮಿ ಕಲಾವಿದರಿಂದ ಬೀದಿ ನಾಟಕಗಳು, ಕಲಾ ಪ್ರದರ್ಶನಗಳು, ಪೋಸ್ಟರ್‌, ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್‌ ಎಂ.ಎಸ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗ ಪತ್ತೆ, ಶೀಘ್ರ ಚಿಕಿತ್ಸೆ ಅಗತ್ಯ

‘ಎಚ್‌ಐವಿ ಸೋಂಕು ಪತ್ತೆ ಹಚ್ಚುವುದು ಹಾಗೂ ಅದಕ್ಕೆ ಶೀಘ್ರವಾಗಿ ಚಿಕಿತ್ಸೆ ಆರಂಭಿಸುವುದು ಅತ್ಯಂತ ಮುಖ್ಯ. ಸೋಂಕಿತರು ಕೂಡ ಜನಸಾಮಾನ್ಯರಂತೆ ಜೀವನ ನಡೆಸಬಹುದು. ಖಿನ್ನತೆಗೆ ಒಳಗಾಗಬೇಕಾದ ಅಗತ್ಯವಿಲ್ಲ’ ಎಂದು ಹೇಳುತ್ತಾರೆ ವೈದ್ಯರು.

‘ಎಚ್‌ಐವಿ ಸೋಂಕು ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುತ್ತದೆ.ಸೋಂಕಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದೆ ರಕ್ತ ಪಡೆಯುವುದರಿಂದ, ಸೋಂಕಿತ ವ್ಯಕ್ತಿಗೆ ಬಳಸಿದ ಸಿರಿಂಜ್‌ಗಳನ್ನು ಸಂಸ್ಕರಿದೆ ಬಳಸುವುದರಿಂದ, ಗರ್ಭಿಣಿಯಿಂದ ಮಗುವಿಗೆ ಅಥವಾ ಎದೆ ಹಾಲಿನ ಮೂಲಕ ಹರಡುತ್ತದೆ. ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಸ್ವಯಂ ಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂಬುದು ಅವರು ನೀಡುವ ಸಲಹೆ.

ಮನಃಪರಿವರ್ತನೆ ಸವಾಲು: ‘ಸೋಂಕು ಇದೆ ಎಂದು ಗೊತ್ತಾದಾಗ ಬಹುತೇಕರು ಖಿನ್ನತೆಗೆ ಜಾರುತ್ತಾರೆ. ಅವರ ಮನಃಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತರುವುದು ದೊಡ್ಡ ಸವಾಲು. ತಮಗಿರುವ ಕಾಯಿಲೆ ಬೇರೆಯವರಿಗೆ ಗೊತ್ತಾಗಬಾರದು ಎಂದು ಅವರು ಬಯಸುತ್ತಾರೆ. ಈ ಕಾರಣಕ್ಕೆ ಚಿಕಿತ್ಸೆ ಪಡೆಯಲೂ ಹಿಂದೇಟು ಹಾಕುತ್ತಾರೆ. ಅಂತಹವರಿಗೆ ಕೌನ್ಸೆಲಿಂಗ್ ಮಾಡಿ ಮನವೊಲಿಸಲಾಗುತ್ತದೆ’ ಎಂದು ಏಡ್ಸ್‌ ನಿಯಂತ್ರಣ ಘಟಕದ ಅಧಿಕಾರಿ ಮಹದೇವಪ್ರಸಾದ್‌ ಹೇಳಿದರು.

-------------

ಜಿಲ್ಲೆಯಲ್ಲಿ ಎಚ್ಐವಿ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ
ಡಾ.ರವಿಕುಮಾರ್ ಎಂ.ಎಸ್‌., ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT