ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಂಗವಿಕಲರ ಆತ್ಮವಿಶ್ವಾಸ ಎಲ್ಲರಿಗೂ ಮಾದರಿ -ಸುರೇಶ್‌ಕುಮಾರ್

ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ
Last Updated 13 ಮಾರ್ಚ್ 2021, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಮೆಟ್ಟಿನಿಲ್ಲುವ ಅಂಗವಿಕಲರು ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಶನಿವಾರ ಅಭಿಪ್ರಾಯ ಪಟ್ಟರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಮಾನ್ಯರು ತಮ್ಮ ಜೀವನದಲ್ಲಿ ಇರುವುದು, ಇಲ್ಲದಿರುವುದರ ಕುರಿತು ಚಿಂತಿಸುತ್ತಾರೆ. ಆದರೆ ಅಂಗವಿಕಲರು ತಮ್ಮಲ್ಲಿರುವ ಶಕ್ತಿಯ ಆಧಾರದಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ’ ಎಂದರು.

‘ಅಂಗವಿಕಲರ ಸಬಲೀಕರಣಕ್ಕಾಗಿ ಕೇಂದ್ರ, ರಾಜ್ಯಸರ್ಕಾರಗಳು ಹತ್ತು-ಹಲವು ಸವಲತ್ತುಗಳನ್ನು ನೀಡಿವೆ. ಶ್ರವಣದೋಷ, ದೃಷ್ಟಿದೋಷ ಸೇರಿದಂತೆ ದೇಹದ ಯಾವುದೇ ಅಂಗಗಳ ಊನವನ್ನು ದೋಷವೆಂದು ಪರಿಗಣಿಸದೇ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು’ ಎಂದು ಹೇಳಿದರು.

‘ಜಿಲ್ಲೆಯ ಅಂಗವಿಕಲರಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸುವ ಸಲುವಾಗಿ ₹45 ಲಕ್ಷ ವೆಚ್ಚದಲ್ಲಿ ಅಂಗವಿಕಲರ ಸಬಲೀಕರಣ ಕೇಂದ್ರ ಪ್ರಾರಂಭಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಅಂಗವಿಕಲರಿಗೆ ಅನುಕಂಪ ತೋರುವುದು ಬೇಡ. ಅವರಿಗೆ ಸಹಾಯಹಸ್ತ ಚಾಚಬೇಕು. ಅವರಿಗೆ ಮೀಸಲಾಗಿರುವ ಶೇ 3ರ ಅನುದಾನದಲ್ಲಿ ಸೌಲಭ್ಯಗಳನ್ನು ಸಮರ್ಪಕ ಹಾಗೂ ನೇರವಾಗಿ ತಲುಪಿಸಬೇಕು. ಜಿಲ್ಲಾಕೇಂದ್ರ ಹಾಗೂ ತಾಲ್ಲೂಕುಗಳಲ್ಲಿ ಅಂಗವಿಕಲರಿಗೆ ಸಮುದಾಯ ಭವನಗಳ ಅಗತ್ಯವಿದೆ. ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಜೊತೆಗೆ ಶಾಸಕರ ನಿಧಿಯ ಅನುದಾನ ಬಳಸಿಕೊಳ್ಳಲು ಅವಕಾಶವಿದ್ದು, ಭವನದ ನಿರ್ಮಾಣಕ್ಕೆ ಭೂಮಿ ದೊರೆತರೆ ನೆರವು ನೀಡಲು ಸಿದ್ಧ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಅಂಗವಿಕಲ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಶಾಸಕರಾದ ಆರ್. ನರೇಂದ್ರ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ಎ.ಆರ್.ಬಾಲರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಬಸವರಾಜು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಇತರರು ಇದ್ದರು.

ಆಶಾ ಕಾರ್ಯಕರ್ತರಿಗೆ ಆರೋಗ್ಯ ಪರಿಕರಗಳ ವಿತರಣೆ
ಇದಕ್ಕೂ ಮೊದಲು, ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಒರಾಕಲ್‌ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲೆಯ ಆಶಾ ಕಾರ್ಯಕರ್ತರಿಗೆ ಕೋವಿಡ್‌–19 ತಡೆಯುವ ಆರೋಗ್ಯ ಪರಿಕರಗಳನ್ನು ವಿತರಿಸಿದರು.

ಇದಕ್ಕೂ ಮೊದಲು ಉಸ್ತುವಾರಿ ಸಚಿವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಒರೆಕಲ್ ಸಂಸ್ಥೆ ವತಿಯಿಂದ ಆಶಾ ಕಾರ್ಯಕತೆಯರಿಗೆ ಆರೋಗ್ಯ ಪರಿಕರಗಳನ್ನೊಳಗೊಂಡ ಕಿಟ್ ಅನ್ನು ಇತರ ಗಣ್ಯರೊಂದಿಗೆ ವಿತರಿಸಿದರು.

ಜಿಲ್ಲೆಯ 796 ಆಶಾ ಕಾರ್ಯಕರ್ತರಿಗೆ ಸಮರ್ಥನಂ ಹಾಗೂ ಒರಾಕಲ್‌ ಸಂಸ್ಥೆ ಆರೋಗ್ಯ ಸಾಮಗ್ರಿಗಳನ್ನು ವಿತರಿಸಲಿದೆ. ಸಂಸ್ಥೆಯ ಕಾರ್ಯಕ್ಕೆ ಸಚಿವರು ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT