ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ರಂಗಪ್ರದರ್ಶನಕ್ಕಿಲ್ಲ ಮಂದಿರ!

ರಂಗ ಮಂದಿರಗಳ ಕಾಮಗಾರಿ ನನೆಗುದಿಗೆ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ
Last Updated 26 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಾನಪದ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗಡಿ ಜಿಲ್ಲೆಯಲ್ಲಿ ನಾಟಕ, ನೃತ್ಯ, ಗಾಯನ ಸೇರಿದಂತೆ, ವಿವಿಧ ಕಲೆಗಳ ಪ್ರದರ್ಶನಕ್ಕೆ, ರಂಗಭೂಮಿ ಚಟುವಟಿಕೆಗಳಿಗಾಗಿ ಸಮರ್ಪಕ ವೇದಿಕೆ ಇಲ್ಲ.

ಮೈಸೂರಿನಿಂದ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲೆ ರೂಪುಗೊಂಡು 24 ವರ್ಷ ಕಳೆದರೂ ಜಿಲ್ಲೆಗಾಗಿ ಒಂದು ಕಲಾ ಮಂದಿರ ಅಥವಾ ರಂಗ ಮಂದಿರದವನ್ನು ನಿರ್ಮಿಸಲು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಾಧ್ಯವಾಗಿಲ್ಲ. ಹೀಗಾಗಿ, ರಂಗಭೂಮಿಯಲ್ಲಿ ತೊಡಗಿರುವ ಕಲಾ ತಂಡಗಳು, ಕಲಾವಿದರು ತಮ್ಮ ಕಲಾ ಪ್ರದರ್ಶನಕ್ಕೆ ಮಾಮೂಲಿ ಸಭಾಂಗಣಗಳನ್ನು ಇಲ್ಲವೇ ತಾತ್ಕಾಲಿಕ ವೇದಿಕೆಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಹೆಚ್ಚುವರಿ ವೆಚ್ಚವನ್ನೂ ಮಾಡಬೇಕಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ರಂಗಮಂದಿರದ ಭವ್ಯ ಕಟ್ಟಡವೊಂದು ತಲೆ ಎತ್ತಿದ್ದರೂ, 10 ವರ್ಷಗಳಿಂದ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕಟ್ಟಡದ ಒಳಾಂಗಣದ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.

ಜಿಲ್ಲಾ ಕೇಂದ್ರ‌ದ್ದು ಈ ಸ್ಥಿತಿಯಾದರೆ, ಕೊಳ್ಳೇಗಾಲದಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿಯಲ್ಲಿ ಸುವರ್ಣ ಕರ್ನಾಟಕ ಕನ್ನಡ ಭವನ ಎಂಬ ಹೆಸರಿನಲ್ಲಿ ರಂಗ ಮಂದಿರದ ಕಟ್ಟಡ ನಿರ್ಮಾಣ ಕೆಲಸ ಆರಂಭಗೊಂಡು ದಶಕ ಕಳೆದಿದ್ದರೂ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.ಗುಂಡ್ಲುಪೇಟೆಯಲ್ಲೂ ಕರ್ನಾಟಕ ಕನ್ನಡ ಗಡಿ ಭವನ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಸಾಂಸ್ಕೃತಿಕ ಜಿಲ್ಲೆ: ಜಾನಪದ ಕಲೆಯ ತವರೂರು ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಜಾನಪದ ಕಲಾ ಪ್ರದರ್ಶನಗಳು, ಜಾನಪದ ಕಾವ್ಯಗಳ ಗಾಯನ, ನಾಟಕ ಪ್ರದರ್ಶನಗಳು ಆಗಾಗ ನಡೆಯುತ್ತಿರುತ್ತವೆ. ಹಾಗಾಗಿ, ಇಲ್ಲಿ ರಂಗಮಂದಿರಗಳ ಅಗತ್ಯವಿದೆ.

ಶಾಂತಲಾ ಕಲಾವಿದರು, ರಂಗವಾಹಿನಿ, ರಂಗ ತರಂಗ ಟ್ರಸ್ಟ್‌, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ ಎಂಬ ತಂಡಗಳು ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿರುತ್ತವೆ. ಪೌರಾಣಿಕ ನಾಟಕಗಳಿಗೂ ಜಿಲ್ಲೆಯಲ್ಲಿ ವೀಕ್ಷಕರಿದ್ದಾರೆ. ಊರು ಊರುಗಳಲ್ಲಿ ಹವ್ಯಾಸಿ ನಾಟಕ ಕಲಾವಿದರಿದ್ದಾರೆ. ರಂಗಾಯಣ ಸೇರಿದಂತೆ ರಾಜ್ಯದ ವಿವಿಧ ತಂಡಗಳು ಇಲ್ಲಿಗೆ ಬಂದು ಅಪರೂಪಕ್ಕೆ ಪ್ರದರ್ಶನ ನೀಡುತ್ತವೆ. ಆದರೆ, ನಾಟಕಗಳ ಪ್ರದರ್ಶನಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದ ತಂಡಗಳು ಬರಲು ಹಿಂದೇಟು ಹಾಕುತ್ತಿವೆ. ಸ್ಥಳೀಯ ತಂಡಗಳು ಕೂಡ ನಿಯಮಿತವಾಗಿ ಪ್ರದರ್ಶನ ನೀಡುತ್ತಿಲ್ಲ.

ಶಾಶ್ವತ ರಂಗ ಮಂದಿರ ಇಲ್ಲದಿರುವುದರಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌.ಪಟೇಲ್‌ ರಂಗಮಂದಿರವನ್ನೇ ತಂಡಗಳು, ಕಲಾವಿದರು ನೆಚ್ಚಿಕೊಂಡಿದ್ದಾರೆ. ರಂಗ ಸಜ್ಜಿಕೆ, ಬೆಳಕಿನ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ ಇಲ್ಲದಿರುವುದರಿಂದ ಇವೆಲ್ಲವನ್ನೂ ಸಂಘಟಕರೇ ಮಾಡಬೇಕಾಗಿದೆ.

ದುಡ್ಡಿದೆ, ಇಚ್ಛಾಶಕ್ತಿ ಇಲ್ಲ: ಜಿಲ್ಲಾಡಳಿತ ಭವನದಲ್ಲಿ ಅರ್ಧಕ್ಕೆ ನಿಂತಿರುವ ಜಿಲ್ಲಾ ರಂಗ ಮಂದಿರಕ್ಕೆ ಇದುವರೆಗೆ ₹6.50 ಕೋಟಿ ಖರ್ಚು ಮಾಡಲಾಗಿದೆ. ಕಟ್ಟಡ ‌ಸೇರಿದಂತೆ ಹೊರಾಂಗಣ ಕೆಲಸಗಳು ಆಗಿವೆ. ಒಳಾಂಗಣದಲ್ಲಿ ವೇದಿಕೆ, ಆಸನ ಸೇರಿದಂತೆ ಎಲ್ಲ ಕೆಲಸಗಳು ಆಗಬೇಕಿದೆ. ನಾಲ್ಕು ವರ್ಷಗಳ ಹಿಂದೆಯೇ ಈ ಕೆಲಸಕ್ಕೆ ₹2.30 ಕೋಟಿ ಬಿಡುಗಡೆಯಾಗಿದೆ. ಆದರೆ, ಕೆಲಸ ಆಗುತ್ತಿಲ್ಲ. ಸಚಿವರು, ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಕಾಮಗಾರಿಯದ್ದು ಆಮೆ ನಡಿಗೆ. ಸದ್ಯಕ್ಕಂತು ಆಗುವ ಲಕ್ಷಣ ಕಾಣುತ್ತಿಲ್ಲ.

ಕೊಳ್ಳೇಗಾಲದಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸುವರ್ಣ ಕರ್ನಾಟಕ ಕನ್ನಡ ಭವನಕ್ಕೆ ಈಗಾಗಲೇ ₹1.75 ಕೋಟಿ ವೆಚ್ಚವಾಗಿದೆ. ಇನ್ನೂ ₹38 ಲಕ್ಷ ಬೇಕಿದೆ.

ಗುಂಡ್ಲುಪೇಟೆಯ ಕನ್ನಡ ಗಡಿ ಭವನ ಕಾಮಗಾರಿಗೆ ಆರಂಭದಲ್ಲಿ ₹36 ಲಕ್ಷ ಬಿಡುಗಡೆಯಾಗಿತ್ತು. ಬೇಸ್‌ಮೆಂಟ್‌ ಕಾಮಗಾರಿ ನಡೆದಿದೆ. ಜಾಗದ ವಿವಾದ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಕೆಲಸ ಬಾಕಿ ಆಗಿತ್ತು. ಈಗ ಪ್ರಕರಣ ಇತ್ಯರ್ಥವಾಗಿದೆ. ಹೊಸದಾಗಿ ಕ್ರಿಯಾ ಯೋಜನೆ ತಯಾರಾಗಬೇಕಿದೆ.

ಜಿಲ್ಲೆಯಲ್ಲಿ ಒಂದೇ ಒಂದು ರಂಗ ಮಂದಿರ ನಿರ್ಮಾಣವಾಗದಿರಲು ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾ ಶಕ್ತಿಯ ಕೊರತೆ ಕಾರಣ ಎಂಬುದು ರಂಗಕರ್ಮಿಗಳು ಹಾಗೂ ಕಲಾವಿದರ ಆರೋಪ.

ಯಾರಿಗೂ ಬೇಡವಾದ ಕೂಸು!

ಜಿಲ್ಲೆಯಲ್ಲಿ ಎಲ್ಲೂ ರಂಗಮಂದಿರಗಳಿಲ್ಲ. ರಂಗಭೂಮಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ತಂಡಗಳು, ಕಲಾವಿದರು ಇದ್ದಾರೆ. ಹಾಗಾಗಿ ರಂಗಮಂದಿರ ಅಗತ್ಯವಿದೆ. ಜಿಲ್ಲೆ ಆದಾಗಿನಿಂದ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಎಲ್ಲ ಅನುಕೂಲ ಇರುವ ಜಾಗದಲ್ಲಿ ರಂಗಮಂದಿರ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಕೆಲಸ ವಿಳಂಬವಾಗುತ್ತಿದೆ. ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ರಂಮಂದಿರ ಬೇಡವಾಗಿರುವ ಕೂಸು

– ಕೆ.ವೆಂಕಟರಾಜು, ರಂಗಕರ್ಮಿ, ಶಾಂತಲಾ ಕಲಾವಿದರು ತಂಡ

ದುಡ್ಡಿದ್ದೂ ಕೆಲಸ ನಡೆಯದಿರುವ ಜಿಲ್ಲೆ!

ಸಾಂಸ್ಕೃತಿಕವಾಗಿ, ಜನಪದೀಯವಾಗಿ ಸಿರಿವಂತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲೇ ರಂಗ ಮಂದಿರ ಇಲ್ಲ. ಜಿಲ್ಲೆಯಲ್ಲಿ ಸಂಸ್ಕೃತಿ ಕಟ್ಟುವುದಕ್ಕೆ, ಸಾಂಸ್ಕೃತಿಕ ಚಳವಳಿಗೆ ಶತ್ರುಗಳು ಎಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು. ರಾಜಕಾರಣಿಗಳಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಎಂದರೆ ನಿರಾಸಕ್ತಿ. ಅದೇ ರಸ್ತೆ, ಚರಂಡಿ ಯೋಜನೆಗಳನ್ನು ಬೇಗ ಕೈಗೆತ್ತಿಕೊಳ್ಳುತ್ತಾರೆ. ಕಾಮಗಾರಿಗೆ ದುಡ್ಡಿದ್ದೂ ಕೆಲಸ ನಡೆಯದಿರುವ ಜಿಲ್ಲೆ ಎಂದರೆ ಅದು ಚಾಮರಾಜನಗರ!

–ಸೋಮಶೇಖರ ಬಿಸಿಲವಾಡಿ, ರಂಗ ತರಂಗ ಟ್ರಸ್ಟ್‌ ಅಧ್ಯಕ್ಷ

ರಂಗಮಂದಿರ ಕಲಾವಿದರ ಕೈಗೆ ಸಿಗಲಿ

ಜಿಲ್ಲೆಯಲ್ಲಿ ಮಕ್ಕಳು, ಯುವ ಕಲಾವಿದರು ಆಸಕ್ತಿಯಿಂದ ಇತ್ತೀಚೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಆತ್ಮೀಯ ರಂಗ ಪ್ರಯೋಗಾಲಯ ತಂಡದಿಂದ ಬಾಡಿಗೆಗೆ ಕೊಠಡಿಗಳನ್ನು ಪಡೆದು ತಾಲೀಮು ನಡೆಸುತ್ತಿದ್ದೇವೆ. ಪ್ರದರ್ಶನಕ್ಕಾಗಿ ಜೆ.ಎಚ್.ಪಟೇಲ್ ಸಭಾಂಗಣವನ್ನೇ ಅವಲಂಬಿಸಿದ್ದರೂ ವೇದಿಕೆ ಬಿಟ್ಟು ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆಗಾಗಿಯೂ ಪ್ರತ್ಯೇಕ ವೆಚ್ಚ ಮಾಡುತ್ತಿದ್ದೇವೆ. ಜಿಲ್ಲಾ ರಂಗಮಂದಿರವು ಕಲಾವಿದರ ಕೈಗೆ ಸಿಗುವುದಾದರೆ ಆರ್ಥಿಕವಾಗಿ ತುಸು ಸುಧಾರಿಸಿಕೊಂಡು ಇನ್ನೂ ವ್ಯವಸ್ಥಿತವಾಗಿ ನಾಟಕ ಪ್ರದರ್ಶನ ಮತ್ತು ರಂಗಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಆಯೋಜಿಸಬಹುದು.

–ಕಿರಣ್‌ ಗಿರ್ಗಿ, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌

ಜಿಲ್ಲೆ ಹಿಂದುಳಿದಿರುವುದರ ಕೈಗನ್ನಡಿ

ಜಗತ್ತಿನ ಸರ್ವಶ್ರೇಷ್ಠ ಜಾನಪದ ಕಾವ್ಯಗಳಾಗಿರುವ ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳು ಜಿಲ್ಲೆಯ ಜಾನಪದದ ಶ್ರೇಷ್ಠತೆಯನ್ನು ಸಾರಿವೆ. ಸಂಚಿ ಹೊನ್ನಮ್ಮನಂತಹ ಶ್ರೇಷ್ಠ ಕವಯತ್ರಿ, ಮುಪ್ಪಿನ ಷಡಕ್ಷರಿ, ಸಂಸನಂತಹ ನಾಟಕಕಾರ, ಮೇರು ನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು, ಕಂಸಾಳೆ, ಗೊರವರ ಕುಣಿತ, ನೀಲಗಾರರ ಪದ ಮುಂತಾದ ಶ್ರೇಷ್ಠ ಕಲೆಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಒಂದು ರಂಗ ಮಂದಿರ ಇಲ್ಲ ಎನ್ನುವುದು ಜಿಲ್ಲೆ ಹಿಂದುಳಿದಿರುವುದರ ಕೈಗನ್ನಡಿ. ಈ ಜಿಲ್ಲೆಯ ಮನೆ ಮನೆಗಳಲ್ಲಿ ಕಲಾವಿದರಿದ್ದಾರೆ. ಇಂತಹ ಜಿಲ್ಲೆಯಲ್ಲಿ ರಂಗ ಮಂದಿರ ಇರಲೇಬೇಕು.

– ಸಿ.ಎಂ.ನರಸಿಂಹಮೂರ್ತಿ, ಜಾನಪದ ಗಾಯಕ, ರಂಗವಾಹಿನಿ ಅಧ್ಯಕ್ಷ

--

ಎರಡು ತಿಂಗಳ ಹಿಂದೆ ಜಿಲ್ಲಾ ರಂಗ ಮಂದಿರದ ಕಾಮಗಾರಿ ವೀಕ್ಷಿಸಿದ್ದೆ. ಹಣದ ಸಮಸ್ಯೆ ಇಲ್ಲ. ತ್ವರಿತವಾಗಿ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ

- ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಜಂಟಿ ನಿರ್ದೇಶಕ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT