ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳ ಮಾರ್ಕೆಟಿಂಗ್‌ ನಾವು ಮಾಡುತ್ತಿಲ್ಲ: ಸಚಿವ ಎಸ್‌.ಸುರೇಶ್‌ ಕುಮಾರ್

ಚಾಮರಾಜನಗರದಲ್ಲಿ ವಿಶ್ವ ಪ್ರವಾಸೋದ್ಯಮ ದಿನ
Last Updated 27 ಸೆಪ್ಟೆಂಬರ್ 2020, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದಂತಹ ಜಾಗ. ಸಾಕಷ್ಟು ಪ್ರವಾಸಿ ತಾಣಗಳು ಇಲ್ಲಿವೆ. ಆದರೆ, ಅವುಗಳನ್ನು ನಾವು ಸರಿಯಾಗಿ ಮಾರುಕಟ್ಟೆ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಶೇ 48ರಷ್ಟು ಅರಣ್ಯ ಪ್ರದೇಶವಿದ್ದು, ರಮಣೀಯ ಜಲಪಾತಗಳು ಹಾಗೂ ಜಲಾಶಯಗಳಿವೆ. ಮಲೆ ಮಹದೇಶ್ವರ, ಸಿದ್ದಪ್ಪಾಜಿ ಸೇರಿದಂತೆ ಹಲವಾರು ಪವಾಡ ಪುರುಷರ ಧಾರ್ಮಿಕ ಸ್ಥಳಗಳಿವೆ. ಪುರಾತನ ದೇವಾಲಯಗಳಿವೆ. ಇಂತಹವುಗಳ ಬಗ್ಗೆ ಪ್ರಚಾರ ಮಾಡಿ ಮತ್ತಷ್ಟು ಪ್ರವಾಸಿಗರನ್ನು ಕರೆತರಬೇಕಿದೆ’ ಎಂದರು.

‘ಧಾರ್ಮಿಕ ಪ್ರವಾಸೋದ್ಯಮ ಈ ಹಿಂದಿನಿಂದಲೂ ಇದೆ. ಈಗ ಪರಿಸರ ಸ್ನೇಹಿ, ಕೃಷಿ, ಪಾರಂಪರಿಕ, ಸಾಹಸ ಪ್ರವಾಸೋದ್ಯಮ ಸೇರಿದಂತೆರ ಹಲವು ವಿಧದ ಪ್ರವಾಸೋದ್ಯಮಗಳಿವೆ. ಇವುಗಳು ಪರಿಣಾಮ ಬಹಳಷ್ಟು ಜನರಲ್ಲಿ ಆಸಕ್ತಿ ಮೂಡಿದೆ. ನಮ್ಮಲ್ಲಿರುವ ಹಲವು ಪ್ರವಾಸಿ ತಾಣಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.

‘ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿದ್ದೇನೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಕೋವಿಡ್‌ ಹೊಡೆತದಿಂದ ಪ್ರವಾಸೋದ್ಯಮಕ್ಕೆ ತೊಂದರೆಯಾಗಿದೆ. ಸಾಕಷ್ಟು ಉದ್ಯೋಗ ನಷ್ಟವೂ ಆಗಿದೆ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸೋದ್ಯಮ ದಿನಾಚರಣೆ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅರಣ್ಯ ಇಲಾಖೆ ಅಡ್ಡಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ ಅವು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಜನರನ್ನು ಆಕರ್ಷಿಬಹುದಾದ ತಾಣಗಳು ದಟ್ಟಾರಣ್ಯದಲ್ಲಿದ್ದು, ಜನರು ಅಲ್ಲಿಗೆ ಭೇಟಿ ನೀಡುವುದಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ನಮ್ಮಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣದಿರಲು ಅರಣ್ಯ ಇಲಾಖೆ ಕಾರಣ’ ಎಂದರು.

ಇದಕ್ಕೆ ಉದಾಹರಣೆಯಾಗಿ ಅವರು ಉದಾಹರಣೆಯಾಗಿ ಜೋಡಿಗೆರೆ, ಕಾಡಿಗೆರೆ, ದೊಡ್ಡ ಸಂಪಿಗೆ ಮುಂತಾದ ಸ್ಥಳಗಳನ್ನು ಉಲ್ಲೇಖಿಸಿದರು.

‘ಮಹದೇಶ್ವರ ಬೆಟ್ಟ ಅಭಿವೃದ್ಧಿಯಾಗಿರುವುದು ಬಿಟ್ಟರೆ, ಬೇರೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಕಂಡಿಲ್ಲ. ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ ಆದಾಯವೂ ಜಾಸ್ತಿಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹೊರ ತಂದಿರುವ ಜಿಲ್ಲಾ ಪ್ರವಾಸಿ ತಾಣಗಳ ಕೈಪಿಡಿಯನ್ನು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಸುರೇಶಕುಮಾರ್ ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿಯುಳ್ಳ ‘ನಮ್ಮ ಚಾಮರಾಜನಗರ-ಉಸ್ತುವಾರಿಯ ಜವಾಬ್ದಾರಿ ವರುಷದ ವರದಿ’ ಎಂಬ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ರವೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್.ಬಾಲರಾಜು, ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ಹರ್ಷಲ್ ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪ ವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬೊಡೊಲೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಚ್.ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT