ಶನಿವಾರ, ಡಿಸೆಂಬರ್ 14, 2019
21 °C
ಸಂತೇಮರಹಳ್ಳಿ: ಮುಸುಕಿನ ಜೋಳವನ್ನು ತಿನ್ನುತ್ತಿದೆ ಹುಳು, ಇಳುವರಿ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಆಘಾತ

ಸೈನಿಕ ಹುಳು ಬಾಧೆ; ರೈತರಲ್ಲಿ ಆತಂಕ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಈ ಬಾರಿ ಉತ್ತಮವಾಗಿ ಸುರಿದ ಮಳೆಗೆ ಮುಸುಕಿನ ಜೋಳದ ಬೆಳೆ ಚೆನ್ನಾಗಿ ಫಸಲು ನೀಡುತ್ತದೆ ಎಂಬ ನಂಬಿಕೆಯಲ್ಲಿದ್ದ ರೈತರನ್ನು ಸೈನಿಕ ಹುಳುವಿನ ಬಾಧೆ ಕಂಗೆಡೆಸಿದೆ. 

ಹೋಬಳಿಯಾದ್ಯಂತ ಮುಸುಕಿನ ಜೋಳದ ಗದ್ದೆಗಳಲ್ಲಿ ಸೈನಿಕ ಹುಳು ಕಾಣಿಸಿಕೊಂಡಿದ್ದು, ಗಿಡದ ಎಲೆ ಹಾಗೂ ಕಾಂಡಗಳನ್ನು ಹಾಕುತ್ತಿವೆ. ಇದರಿಂದಾಗಿ ಗಿಡಗಳು ಕಪ್ಪುಬಣ್ಣಕ್ಕೆ ತಿರುಗುವ ಲಕ್ಷಣ ಕಾಣುತ್ತಿದೆ. ಇದು ಮುಸುಕಿನ ಜೋಳ ಕಾಳು ಕಟ್ಟುವ ಸಮಯವಾಗಿರುವುದರಿಂದ ತೆನೆಯೊಳಗಿರುವ ಕಾಳುಗಳನ್ನೂ ಸೈನಿಕ ಹುಳುಗಳು ತಿಂದು ಹಾಕುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ  ರೈತಸಂಪರ್ಕ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ. 

ಹೋಬಳಿಯಾದ್ಯಂತ 500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಹೊಂಗನೂರು, ಇರಸವಾಡಿ, ಮಸಣಾಪುರ, ರೇಚಂಬಳ್ಳಿ, ಕಸ್ತೂರು ಹೆಗ್ಗವಾಡಿಪುರ ಹಾಗೂ ಉಮ್ಮತ್ತೂರು ಭಾಗಗಳಲ್ಲಿ ರೈತರು ಇದೇ ಬೆಳೆಯನ್ನೇ ಹೆಚ್ಚು ಬೆಳೆದಿದ್ದಾರೆ. ಎಲ್ಲ ಕಡೆಗಳಲ್ಲೂ ಸೈನಿಕ ಹುಳು ಕಾಣಿಸಿಕೊಂಡಿದೆ. 

ಐದು ವರ್ಷಗಳ ಹಿಂದೆ ಅಮೆರಿಕ, ಚಿಲಿ, ಕೆನಡಾ ಹಾಗೂ ಅರ್ಜೆಂಟೀನಾಗಳಲ್ಲಿ ಕಾಣಿಸಿಕೊಂಡಿದ್ದ ಸೈನಿಕ ಹುಳು ಎರಡು ವರ್ಷಗಳಿಂದೀಚೆಗೆ ಭಾರತದಲ್ಲೂ ಕಾಣಿಸಿಕೊಂಡಿದೆ. ಈಗ ಜಿಲ್ಲೆಯಲ್ಲೂ ಇದು ಕೃಷಿಕರಿಗೆ ಕಾಟ ನೀಡುತ್ತಿದೆ ಎಂದು ಹೇಳುತ್ತಾರೆ ಕೃಷಿ ವಿಜ್ಞಾನಿಗಳು. 

ಮುಸುಕಿನ ಜೋಳ ಬಿತ್ತನೆಯಾದ 30ನೇ ದಿನಕ್ಕೆ ಸೈನಿಕ ಹುಳುಗಳು ಕಂಡು ಬರುತ್ತವೆ. ಈ ಸಮಯದಲ್ಲಿ ಬೆಳೆಗಳು ಕುಂಠಿತವಾಗುತ್ತವೆ. ಎಚ್ಚೆತ್ತುಕೊಂಡು ಆರಂಭದಲ್ಲೇ ಔಷಧಿ ಸಿಂಪಡಿಸಿದಾಗ ಅವುಗಳನ್ನು ಹತೋಟಿಗೆ ತರಬಹುದು ಎಂದು ಹೇಳುತ್ತಾರೆ ವಿಜ್ಞಾನಿಗಳು

ಈ ಹುಳುಗಳು ಬೆಳೆಗಳ ಒಳಭಾಗದಲ್ಲಿ ಚಿಟ್ಟೆಯಾಗಿ ಮಾರ್ಪಡುತ್ತವೆ. ಸಂತಾನೋತ್ಪತ್ತಿ ನಡೆಸಿ ಒಂದು ಚಿಟ್ಟೆ ಏಕಕಾಲಕ್ಕೆ ನೂರರಿಂದ ಇನ್ನೂರವರೆಗೆ ಮೊಟ್ಟೆಗಳನ್ನು ಇಡುತ್ತವೆ. ಮುಸುಕಿನ ಜೋಳ ಕಾಳು ಕಟ್ಟುವ ಸಮಯದಲ್ಲಿ ಸೈನಿಕ ಹುಳುಗಳು ಜೋಳದ ತೆನೆಯನ್ನು ತಿಂದು ಹಾಕುತ್ತವೆ.

‘ಒಂದು ಎಕರೆಯಲ್ಲಿ ಮುಸುಕಿನ ಜೋಳ ಬೆಳೆಯಲು ₹ 15 ಸಾವಿರದಿಂದ ₹ 20 ಸಾವಿರದವರೆಗೆ ಖರ್ಚಾಗಿದೆ. ಈಗ ಹುಳುಗಳು ಕಂಡು ಬಂದಿದ್ದು, ಬೆಳೆಯನ್ನು ನಾಶಪಡಿಸುತ್ತಿವೆ’ ಎಂದು ಸಂತೇಮರಹಳ್ಳಿಯ ರೈತ ಶಿವಪ್ರಸಾದ್ ಹೇಳಿದರು. 

ರೈತ ಸಂಪರ್ಕ ಕೇಂದ್ರದಿಂದ ಪರಿಹಾರ

ಮುಸುಕಿನ ಜೋಳದಲ್ಲಿ ಕಾಣಿಸಿಕೊಂಡಿರುವ ಸೈನಿಕ ಹುಳುಗಳನ್ನು ನಾಶಪಡಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿಗೆ ತೆರಳಿ ರೈತರಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.

‘10 ಕೆಜಿ ಭತ್ತದ ಹೊಟ್ಟಿಗೆ ಒಂದು ಕೆಜಿ ಬೆಲ್ಲದ ನೀರನ್ನು ಮಿಶ್ರಣ ಮಾಡಬೇಕು. ಒಂದು ರಾತ್ರಿ ನೆನೆಸಿಟ್ಟು ಮಾರನೆಯ ದಿನ ರೈತಸಂಪರ್ಕ ಕೇಂದ್ರದಿಂದ ನೀಡುವ ಥೈಯೋಡಿಕಾರ್ಪ್ ಕೀಟನಾಶಕ ಔಷಧಿಯನ್ನು ಮಿಶ್ರಣ ಮಾಡಿ ಮುಸುಕಿನ ಜೋಳದ ಬೆಳೆಗಳಿಗೆ ಎರಚಬೇಕು (ಇದು ಒಂದು ಎಕರೆಯ ಅಳತೆ). ಸಾಯಂಕಾಲದ ವೇಳೆ ಸೈನಿಕ ಹುಳುಗಳು ಹೊರಬಂದು ಜೋಳದ ತೆನೆಯನ್ನು ತಿನ್ನಲು ಆರಂಭಿಸಿದಾಗ ಹುಳುಗಳು ಸಾಯುತ್ತವೆ. 10 ದಿನದಲ್ಲಿ ಸೈನಿಕ ಹುಳು ಬಾಧೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಕೃಷಿ ಅಧಿಕಾರಿ ಲೀಲಾವತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

 

ಪ್ರತಿಕ್ರಿಯಿಸಿ (+)