ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ಸೋಮಣ್ಣ

Last Updated 25 ಆಗಸ್ಟ್ 2020, 12:14 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಪ್ರಶ್ನಾತೀತ ನಾಯಕ. ಅವರನ್ನು ಬದಲಾಯಿಸುವ ಅವಶ್ಯಕತೆ ಇಲ್ಲ’ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಅವಶ್ಯಕತೆ ಏನಿದೆ’ ಎಂದು ಮರು ಪ್ರಶ್ನಿಸಿದರು.

ಸಂಪುಟ ವಿಸ್ತರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಚಿವ ಸಂಪುಟ ವಿಸ್ತರಣೆ, ಪುನರ್‌ರಚನೆ ಮಾಡುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ಪಕ್ಷದ ವರಿಷ್ಠರು ಈಗಾಗಲೇ ಹೇಳಿದ್ದಾರೆ. ಸೆಪ್ಟೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ದೆಹಲಿಗೆ ಹೋಗಿ ಈ ಬಗ್ಗೆ ಚರ್ಚಿಸುವುದಾಗಿ ಯಡಿಯೂರಪ್ಪ ಅವರು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ’ ಎಂದರು.

ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಕೆಲವು ಕಾಂಗ್ರೆಸ್‌ ಮುಖಂಡರು ಹೇಳಿಕೆ ನೀಡಿರುವ ಬಗ್ಗೆ ಕೇಳಿದ್ದಕ್ಕೆ, ‘ಸರ್ಕಾರ ನಿಂತ ನೀರಲ್ಲ. ಹರಿಯುವ ನೀರು. ಸಾಮಾನ್ಯ ಜನರ ನೋವನ್ನು ಬಗೆಹರಿಸಬೇಕೇ ವಿನಾ, ಸಾರ್ವಜನಿಕ ಅಭಿವೃದ್ಧಿ ವಿಚಾರದಲ್ಲಿ ಮೂಗು ತೂರಿಸಬಾರದು. 10 ತಿಂಗಳು ಇಲ್ಲಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೆ. ಆ ಕಾರಣಕ್ಕೆ ಅವರು ಹೇಳಿರಬಹುದು.ಅವರಿಗೆ ಅಭಾರಿಯಾಗಿದ್ದೇನೆ’ ಎಂದರು.

‘ಅವರ (ಸುರೇಶ್‌ಕುಮಾರ್) ಕೆಲಸದ ವಿಧಾನವೇ ಬೇರೆ. ನನ್ನದೇ ಬೇರೆ. ಜಿಲ್ಲೆಯ ಉಸ್ತುವಾರಿ ಆಗಬೇಕು ಎಂದು ನಾನು ಕೇಳಿಲ್ಲ. ಬಯಸಿಯೂ ಇಲ್ಲ. ಮುಖ್ಯಮಂತ್ರಿ ಅವರು ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ’ ಎಂದು ಹೇಳಿದರು.

ಗುರುಸ್ವಾಮಿ ಕುಟುಂಬಕ್ಕೆ ಸಾಂತ್ವನ: ಇತ್ತೀಚೆಗೆ ನಿಧನ ಹೊಂದಿದ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಸೋಮಣ್ಣ ಅವರು, ಗುರುಸ್ವಾಮಿ ಅವರ ಪತ್ನಿ ಹಾಗೂ ಪುತ್ರಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT